ಸಿಯಾ ಗೋಯಲ್–ಕೇತನ್ ಅಗರ್ವಾಲ್ ಮದುವೆಯಲ್ಲಿ ಮಿತ್ತಲ್ ಕುಟುಂಬದ ಪಾತ್ರ ಏನು? ದಿಢೀರ್ ಸುದ್ದಿಯಾಗಿದ್ದೇಕೆ?
Ketan Agarwal: ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ಅವರ ವಿವಾಹವನ್ನು ನಿಶ್ಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಯಾಳ ಸೋದರಮಾವ ನರೇಂದ್ರ ಮಿತ್ತಲ್ ಮತ್ತು ಅತ್ತೆ ರೇಣು ಮಿತ್ತಲ್, ತಮ್ಮ ಸೋದರಸೊಸೆಯ ಮೇಲಿರುವ ಕೊಲೆ ಆರೋಪವನ್ನು ಕೇಳಿ ದಿಗ್ಭ್ರಮೆಗೊಂಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ಸಿಯಾ ಗೋಯಲ್–ಕೇತನ್ ಅಗರ್ವಾಲ್ -
ಮುಂಬೈ, ಜೂ. 27: ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ (Ketan Agarwal) ಅವರ ವಿವಾಹವನ್ನು ನಿಶ್ಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಯಾಳ (Siya Goyal) ಸೋದರಮಾವ ನರೇಂದ್ರ ಮಿತ್ತಲ್ ಮತ್ತು ಅತ್ತೆ ರೇಣು ಮಿತ್ತಲ್, ತಮ್ಮ ಸೋದರಸೊಸೆಯ ಮೇಲಿರುವ ಕೊಲೆ ಆರೋಪವನ್ನು ಕೇಳಿ ದಿಗ್ಭ್ರಮೆಗೊಂಡಿದ್ದಾರೆ. ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಈ ದಂಪತಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಸಿಯಾ ತನ್ನ ಪ್ರೇಮಿ ಚೇತನ್ ಚೌಧರಿಯೊಂದಿಗೆ ಸೇರಿ ಭಾವಿ ವರ ಕೇತನ್‌ನನ್ನು ಕೊಲ್ಲಬಹುದು ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಗೋಯಲ್ ಕುಟುಂಬದ ಇತರ ಸದಸ್ಯರಂತೆ, ಸಿಯಾಗೆ ಚೇತನ್ ಜತೆಗೆ ಇದ್ದ ಸಂಬಂಧದ ಬಗ್ಗೆ ಇವರಿಗೂ ಯಾವುದೇ ಸುಳಿವಿರಲಿಲ್ಲ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪೊಲೀಸರ ಮುಂದೆ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಸಿಯಾ ಇಂತಹ ಕೆಲಸ ಮಾಡಬಹುದೆಂದು ನಾವು ಎಂದಿಗೂ ಊಹಿಸಿರಲಿಲ್ಲ. ಸಿಯಾ ಮತ್ತು ಕೇತನ್ ಇಬ್ಬರೂ ಉತ್ತಮ ನಡತೆಯುಳ್ಳವರು, ವಿನಯವಂತರು ಮತ್ತು ದಯಾಳುಗಳಾಗಿದ್ದರು ಎಂದು ನರೇಂದ್ರ ಮಿತ್ತಲ್ ತಿಳಿಸಿದ್ದಾರೆ. ʼʼನಮಗೆ ಸಿಯಾ ಬಾಲ್ಯದಿಂದಲೂ ಗೊತ್ತು. ಅವಳು ಈ ರೀತಿಯ ಘೋರ ಕೃತ್ಯ ಎಸಗುತ್ತಾಳೆ ಎಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲʼʼ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಜೂನ್ 18ರಂದು ಕೇತನ್, ಸಿಯಾ ಜತೆ ಟ್ರೆಕ್ಕಿಂಗ್‌ಗೆ ಹೋಗಿದ್ದಾಗ ಪುಣೆಯ ಲೋಹಗಢ್ ಕೋಟೆಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಆಕೆ ಇದನ್ನು ಒಂದು ಆಕಸ್ಮಿಕ ಅಪಘಾತ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಳು. ಆದರೆ, ಆಕೆಯ ಅನುಮಾನಾಸ್ಪದ ನಡವಳಿಕೆಯಿಂದ ಆತಂಕಗೊಂಡ ಕೇತನ್ ಅಗರ್ವಾಲ್ ಅವರ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದರು. ತದನಂತರ ತೀವ್ರ ತನಿಖೆ ನಡೆಸಿದ ಪೊಲೀಸರು ಈ ಕೊಲೆಯ ಸಂಚನ್ನು ಪತ್ತೆಹಚ್ಚಿ, ಸತ್ಯವನ್ನು ಹೊರಗೆಳೆದಿದ್ದಾರೆ.
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ: ವಕೀಲರಾಗಲು ಉಜ್ವಲ್ ನಿಕಂಗೆ ಸಿಎಂ ದೇವೇಂದ್ರ ಫಡ್ನವೀಸ್ ಕರೆ
ಪೊಲೀಸರ ಪ್ರಕಾರ, ಸಿಯಾ ಚೇತನ್‌ನನ್ನು ಪ್ರೀತಿಸುತ್ತಿದ್ದಳು. ಕೇತನ್ ಅಗರ್ವಾಲ್ ತನ್ನ ಪ್ರೀತಿಗೆ ಮುಳ್ಳಾಗಿದ್ದಾನೆ ಎಂದು ಭಾವಿಸಿದ್ದಳು. ಕೋಟೆಯ ಮೇಲಿದ್ದಾಗ ಸಿಯಾ ತನ್ನ ಪ್ರೇಮಿ ಚೇತನ್‌ಗೆ ಸನ್ನೆ ಮಾಡಿದ್ದಾಳೆ ಎನ್ನಲಾಗಿದ್ದು, ಆತ ತಕ್ಷಣವೇ ಕೇತನ್‌ನನ್ನು ಪ್ರಪಾತಕ್ಕೆ ತಳ್ಳಿದ್ದಾನೆ. ನಂತರ 400 ಅಡಿ ಆಳದ ಕಂದಕದಲ್ಲಿ ಕೇತನ್ ಮೃತದೇಹ ಪತ್ತೆಯಾಗಿತ್ತು.
ರೇಣು ಮಿತ್ತಲ್ ಸಿಯಾ ಪರವಾಗಿ ಭರವಸೆ ನೀಡಿದ್ದರು. ಸಿಯಾ ಕುಟುಂಬಕ್ಕೆ ಚೇತನ್ ಜತೆಗಿನ ಆಕೆಯ ಸಂಬಂಧದ ಬಗ್ಗೆ ತಿಳಿದಿತ್ತು ಎಂದು ಮೃತನ ತಂದೆ ವಿಶಾಲ್ ಅಗರ್ವಾಲ್ ಆರೋಪಿಸಿದ್ದಾರೆ.
ಕೇತನ್ ಮತ್ತು ಸಿಯಾ ಅವರ ವಿವಾಹದ ಬಗ್ಗೆ ಎರಡು ಕುಟುಂಬಗಳ ನಡುವೆ 2026ರ ಜನವರಿಯಲ್ಲಿ ಚರ್ಚೆ ಪ್ರಾರಂಭವಾದವು ಎಂದು ಮಿತ್ತಲ್ ಪೊಲೀಸರಿಗೆ ತಿಳಿಸಿದ್ದಾರೆ. ನಂತರ, ಕೇತನ್ ಮತ್ತು ಸಿಯಾ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನವೆಂಬರ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭವನ್ನು ನಿಗದಿಪಡಿಸಲಾಗಿತ್ತು.
ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಿತ್ತಲ್, ಈ ಮದುವೆ ವಿಷಯದಲ್ಲಿ ತಮ್ಮ ಪಾತ್ರ ಕೇವಲ ಎರಡು ಕುಟುಂಬಗಳನ್ನು ಪರಸ್ಪರ ಪರಿಚಯಿಸುವುದು ಮತ್ತು ಮದುವೆಯ ಮಾತುಕತೆಗಾಗಿ ಅವರು ಒಂದೆಡೆ ಭೇಟಿಯಾಗುವಂತೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಗ್ ಧರಿಸಿದ್ದಕ್ಕೆ ಭಾವೀ ಪತಿಯನ್ನು ಕೊಂದಳಾ ಸಿಯಾ? ಕೇತನ್ ತಂದೆ ಹೇಳಿದ್ದೇನು?
ತನಿಖೆ ವೇಳೆ ಸಿಯಾ ಹೇಳಿದ್ದೇನು?
ಮೂಲಗಳ ಪ್ರಕಾರ, ಸಿಯಾ ಗೋಯಲ್ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತನ್ನ ಕುಟುಂಬದವರನ್ನು ಎದುರಿಸಿ ಮದುವೆ ನಿಲ್ಲಿಸುವಂತೆ ಕೇಳಿಕೊಳ್ಳುವುದಕ್ಕಿಂತ, ಕೇತನ್ ಅಗರ್ವಾಲ್‌ನನ್ನು ಕೊಲೆ ಮಾಡುವುದೇ ತನಗೆ ಸುಲಭದ ದಾರಿ ಎಂದು ಅನಿಸಿತು ಎಂದು ಅವಳು ಪೊಲೀಸರಿಗೆ ತಿಳಿಸಿದ್ದಾಳೆ.
ಕುಟುಂಬದವರ ಭಾವನೆಗಳಿಗೆ ಧಕ್ಕೆ ತರಲು ಇಷ್ಟಪಡದ ಕಾರಣ, ಅವಳು ಮದುವೆಯನ್ನು ರದ್ದುಗೊಳಿಸುವ ಬದಲು ತನ್ನ ಭಾವಿ ಪತಿಯನ್ನೇ ಕೊಲ್ಲುವ ದಾರಿಯನ್ನು ಆರಿಸಿಕೊಂಡಳು. ಸಿಯಾಳ ಸಹೋದರ ಸಾಹಿಲ್ ಪ್ರಕಾರ, ಕ್ರಿಕೆಟ್ ಪಂದ್ಯವೊಂದರ ಸಮಯದಲ್ಲಿ ಸಿಯಾಗೆ ಚೇತನ್ ಚೌಧರಿಯ ಪರಿಚಯವಾಗಿತ್ತು. ಕಾಲಕ್ರಮೇಣ ಅವರಿಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು.
ಮತ್ತೊಂದೆಡೆ, ಸಿಯಾಳ ಪೋಷಕರು ಒಂದು ವೇಳೆ ಆಕೆ ಕೊಲೆ ಮಾಡಿರುವುದು ಸಾಬೀತಾದರೆ ಆಕೆಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ತಮಗೆ ಚೇತನ್ ಚೌಧರಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ತಾವು ಅವನನ್ನು ಎಂದಿಗೂ ಭೇಟಿಯಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೃತನ ತಂದೆ ವಿಶಾಲ್ ಅಗರ್ವಾಲ್ ಮಾತನಾಡಿ, ಸಿಯಾಳ ಈ ಪ್ರೇಮ ಸಂಬಂಧದ ಬಗ್ಗೆ ತನಗಾಗಲಿ ಅಥವಾ ತನ್ನ ಮಗನಿಗಾಗಲಿ ಯಾವುದೇ ಸುಳಿವಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಸಿಯಾಳ ಫೋನ್ ಪ್ರತಿದಿನ ಗಂಟೆಗಟ್ಟಲೆ ಬಿಜಿಯಾಗಿರುತ್ತಿತ್ತು ಎಂಬ ವಿಷಯವನ್ನು ಕೇತನ್ ಈ ಹಿಂದೆ ತನಗ ತಿಳಿಸಿದ್ದಾಗಿ ಅವರು ಹೇಳಿದ್ದಾರೆ.