ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahatma Gandhi Statue: ಇವರು ಗಾಂಧೀಜಿಯಂತೆ! ವಿರೂಪ ಪ್ರತಿಮೆ ತಯಾರಿಸಿ ರಾಷ್ಟ್ರಪಿತನಿಗೆ ಅಗೌರವ

ಕೇರಳದ ತ್ರಿಶ್ಯೂರ್‌ ಜಿಲ್ಲೆಯ ಗುರುವಾಯೂರು ಮುನ್ಸಿಪಾಲಿಟಿಯ ಬಯೋ ಪಾರ್ಕ್‌ನಲ್ಲಿ ಗಾಂಧೀಜಿ ಅವರ ವಿಕಾರ ರೂಪದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಯಾವ ರೀತಿಯಲ್ಲಿಯೂ ಈ ಪ್ರತಿಮೆ ಗಾಂಧಿ ಅವರನ್ನು ಹೋಲುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿರೂಪ ಪ್ರತಿಮೆ ತಯಾರಿಸಿ ರಾಷ್ಟ್ರಪಿತನಿಗೆ ಅಗೌರವ

ತ್ರಿಶ್ಯೂರ್‌ ಜಿಲ್ಲೆಯ ಗುರುವಾಯೂರು ಮುನ್ಸಿಪಾಲಿಟಿಯ ಬಯೋ ಪಾರ್ಕ್‌ನಲ್ಲಿ ಅಳವಡಿಸಿದ ಗಾಂಧಿ ಪ್ರತಿಮೆ -

Ramesh B Ramesh B Oct 27, 2025 7:23 PM

ತಿರುವನಂತಪುರಂ, ಅ. 27: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ (Mahatma Gandhi) ಅವರಿಗೆ ಇಡೀ ದೇಶ ಮಾತ್ರವಲ್ಲ ಜಗತ್ತೇ ತಲೆ ಬಾಗುತ್ತದೆ. ಇಂದಿಗೂ ಅವರನ್ನು ಗೌರವದಿಂದ ನೋಡಲಾಗುತ್ತದೆ. ಭಾರತೀಯ ನೋಟುಗಳಲ್ಲಿ ಅವರ ಫೋಟೊ ಮುದ್ರಿಸಲಾಗುತ್ತಿದೆ. ಈ ಮಧ್ಯೆ ಗಾಂಧೀಜಿ ಅವರ ವಿಕಾರ ರೂಪದ ಪ್ರತಿಮೆಯನ್ನು (Mahatma Gandhi Statue) ಸಾರ್ವಜನಿಕ ಸ್ಥಳದಲ್ಲಿ ಅನಾವರಣಗೊಳಿಸಲಾಗಿದ್ದು, ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಕೇರಳದ ತ್ರಿಶ್ಯೂರ್‌ ಜಿಲ್ಲೆಯ ಗುರುವಾಯೂರು ಮುನ್ಸಿಪಾಲಿಟಿಯ ಬಯೋ ಪಾರ್ಕ್‌ನಲ್ಲಿ ಅಳವಡಿಸಿದ ಗಾಂಧಿ ಪ್ರತಿಮೆ ಇದೀಗ ವಿವಾದ ಕೇಂದ್ರಬಿಂದು ಎನಿಸಿಕೊಂಡಿದೆ. ಯಾವ ರೀತಿಯಲ್ಲಿಯೂ ಈ ಪ್ರತಿಮೆ ಗಾಂಧಿ ಅವರನ್ನು ಹೋಲುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ಗಾಂಧೀಜಿ ಅವರಿಗೆ ಈ ವಿಕಾರ ಪ್ರತಿಮೆ ಮೂಲಕ ಅವಮಾನ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ವಿವಾದಕ್ಕೆ ಕಾರಣವಾದ ಗಾಂಧೀಜಿ ಪ್ರತಿಮೆ:



ಕನ್ನಡಕ ಮತ್ತು ವಾಕಿಂಗ್ ಸ್ಟಿಕ್ ಹೊರತುಪಡಿಸಿ ಈ ಪ್ರತಿಮೆ ಯಾವ ಕೋನದಿಂದಲೂ ಗಾಂಧೀಜಿ ಅವರಂತೆ ಕಾಣಿಸುತ್ತಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ರಾಷ್ಟ್ರಪಿತ ಎನಿಸಿಕೊಂಡಿರುವವರಿಗೆ ಹೀಗ ಗೌರವ ಸಲ್ಲಿಸುವುದು? ಎಂದು ಕೆಲವರು ಪ್ರಶ್ನಿಸಿದ್ದಾರೆ. ಕೆಲವು ದಿನಗಳಿಂದ ಈ ಜೈವಿಕ ಉದ್ಯಾನವನದಲ್ಲಿ ಪ್ರತಿಮೆ ಕಲಸ ನಡೆಯುತ್ತಿತ್ತು. ಆದರೆ ಪ್ರತಿಮೆಯನ್ನು ಮುಚ್ಚಿದ್ದರಿಂದ ಸಾರ್ವಜನಿಕರ ಕಣ್ಣಿಗೆ ಬಿದ್ದಿರಲಿಲ್ಲ.

ಭಾನುವಾರ ಹಮ್ಮಿಕೊಂಡಿದ್ದ ಪ್ರತಿಮೆಯ ಉದ್ಘಾಟನಾ ಸಮಾರಂಭ ಹಾಜರಿದ್ದ ಹಲವರು "ಇವರು ಗಾಂಧೀಜಿಯೆ?" ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ಕೆಲವರು ತಾವು ಕಂಡದ್ದನ್ನು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಗದ್ದಲದ ನಡುವೆಯೂ ಗುರುವಾಯೂರು ಪುರಸಭೆ ಅಧ್ಯಕ್ಷ ಎಂ. ಕೃಷ್ಣದಾಸ್ ಮತ್ತು ಐಎಎಸ್ ಅಧಿಕಾರಿ ದಿವ್ಯಾ ಎಸ್. ಅಯ್ಯರ್ ಪ್ರತಿಮೆಯನ್ನು ಉದ್ಘಾಟಿಸಿದರು.

ಗಾಂಧೀಜಿಯನ್ನು ಈ ಮೂಲಕ ಅವಮಾನಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಪ್ರತಿಮೆ ಕೆತ್ತಿದ ಶಿಲ್ಪಿ ಇದನ್ನು ಸಮರ್ಥಿಸಿಕೊಂಡಿದ್ದು, ಗಾಂಧಿವಾದಿ ವಿಚಾರಗಳನ್ನು ಇದರಲ್ಲಿ ತುಂಬಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: Gandhi Statue Vandalism: ಲಂಡನ್‌ನಲ್ಲಿ ಗಾಂಧಿ ಪ್ರತಿಮೆ ಧ್ವಂಸ; ನಾಚಿಕೆಗೇಡಿನ ಕೃತ್ಯ ಎಂದ ಭಾರತ

ಪ್ರತಿಮೆಯು ಇನ್ನೂ ಅಪೂರ್ಣವಾಗಿದ್ದು, ಇದನ್ನು ಸರಿಪಡಿಸಲಾಗುವುದು ಎಂದು ಪುರಸಭೆ ಹೇಳಿದೆ. ಕೃಷ್ಣದಾಸ್ ಈ ಬಗ್ಗೆ ಮಾತನಾಡಿ, ಉದ್ದೇಶಪೂರ್ವಕವಾಗಿ ಅವಮಾನ ಮಾಡಲಾಗಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೆಎಸ್‌ಯು ತ್ರಿಶೂರ್ ಜಿಲ್ಲಾಧ್ಯಕ್ಷ ಗೋಕುಲ್ ಈ ಬಗ್ಗೆ ಗುರುವಾಯೂರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಎಲ್‌ಡಿಎಫ್ ನೇತೃತ್ವದ ಪುರಸಭೆಯು ಮಹಾತ್ಮ ಗಾಂಧಿ ಅವರಿಗೆ ಮಾಡಿದ ಅವಮಾನಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರಸ್ತುತ ಪ್ರತಿಮೆಯು ಮರದ ಆಕೃತಿಯಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಬಾರಿ ಚರ್ಚೆ

ಹರೀಶ್‌ ಎನ್ನುವವರು ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ʼʼಶೇ. 100ರಷ್ಟು ಸಾಕ್ಷರತೆ ಹೊಂದಿರುವ ಕೇರಳದಲ್ಲಿ ಮತ್ತೊಂದು ಪ್ರಮಾದ. ಪ್ರತಿಮೆಯಲ್ಲಿ ಯಾರನ್ನು ಚಿತ್ರಿಸಲಾಗಿದೆ ಎಂದು ತಿಳಿದರೆ ನೀವು ಅಚ್ಚರಿಗೆ ಒಳಗಾಗುತ್ತೀರಿ. ಇವರು ಗಾಂಧೀಜಿಯಂತೆ! ಈ ಘೋರ ಪ್ರತಿಮೆಯನ್ನು ಗುರುವಾಯೂರು ಮುನ್ಸಿಪಲ್ ಪಾರ್ಕ್‌ನಲ್ಲಿ ಸ್ಥಾಪಿಸಲಾಗಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.