Sabarimala Gold Theft: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇರಳ ಸಚಿವ ಭಾಗಿ; ಬಿಜೆಪಿ ಆರೋಪ
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ಕಳವು ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕೇರಳ ಪೊಲೀಸರ ವಿಶೇಷ ತನಿಖಾ ತಂಡ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಪರಿಶೀಲನೆ ನಡೆಸಿದೆ. ಈ ಮಧ್ಯೆ ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಚಿನ್ನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವವರೊಂದಿಗೆ ಕೇರಳದ ದೇವಸ್ವಂ ಸಚಿವ ವಿ.ಎನ್. ವಾಸವನ್ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ -
ತಿರುವನಂತಪುರ, ಅ. 27: ಶಬರಿಮಲೆ ದೇವಾಲಯದ (Sabarimala temple) ಚಿನ್ನ ಕಳ್ಳತನ ಪ್ರಕರಣ (gold theft case)ದಲ್ಲಿ ಭಾಗಿಯಾಗಿರುವವರೊಂದಿಗೆ ಕೇರಳ (Kerala)ದ ದೇವಸ್ವಂ ಸಚಿವ ವಿ.ಎನ್. ವಾಸವನ್ (VN Vasavan) ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ (BJP) ಆರೋಪಿಸಿದೆ. ಅಲ್ಲದೇ ಈ ಪ್ರಕರಣ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ (SIT)ಗೆ ವಹಿಸುವಂತೆ ಪಕ್ಷ ಆಗ್ರಹಿಸಿದೆ.
ಸಚಿವ ವಾಸವನ್ ಅವರ ಸಂಪರ್ಕ ಸ್ಪಷ್ಟ: ಬಿಜೆಪಿ ರಾಜ್ಯಾಧ್ಯಕ್ಷ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ (Rajeev Chandrasekhar), “ಸಚಿವ ವಿ.ಎನ್.ವಾಸವನ್ ಮತ್ತು ಶಬರಿಮಲೆ ದೇವಾಲಯದಿಂದ 4.5 ಕಿಲೋ ಚಿನ್ನ ದೋಚಿದವರ ನಡುವೆ ಸಂಪರ್ಕ ಇರುವುದು ಸರ್ಕಾರದ ಮೂಲಗಳಿಂದ ಸ್ಪಷ್ಟವಾಗಿದೆ. ಅವರೇ ತಪ್ಪಿತಸ್ಥರು ಎಂದು ನಾವು ಬೆರಳು ಮಾಡಿ ಹೇಳುತ್ತಿಲ್ಲ. ಆದರೆ ನ್ಯಾಯಸಮ್ಮತ ತನಿಖೆಗಾಗಿ ಅವರು ತಮ್ಮ ಸ್ಥಾನದಿಂದ ತಾತ್ಕಾಲಿಕವಾಗಿ ಹಿಂದೆ ಸರಿಯಬೇಕು” ಎಂದಿದ್ದಾರೆ. ಅಲ್ಲದೇ ದೇವಸ್ವಂ ಮಂಡಳಿಯನ್ನು ವಿಸರ್ಜಿಸಿ, ಕೇಂದ್ರ ತನಿಖಾ ಸಂಸ್ಥೆಯಿಂದ ಈ ಪ್ರಕರಣದ ತನಿಖೆ ನಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಈ ಸುದ್ದಿಯನ್ನು ಓದಿ: Viral Video: ದೀಪಾವಳಿಯಂದು ಸಿಬ್ಬಂದಿಗೆ ಸಿಹಿತಿಂಡಿಗಳ ಬಾಕ್ಸ್ ಜೊತೆಗೆ 10,000 ರೂ. ನಗದು ನೀಡಿದ ಅಮಿತಾಬ್ ಬಚ್ಚನ್; ಇಷ್ಟೆನಾ ಎಂದ ನೆಟ್ಟಿಗರು
ಏನಿದು ಪ್ರಕರಣ?
2019ರಲ್ಲಿ ಶಬರಿಮಲೆ ದೇವಾಲಯದ ಹೊರಗಿನ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಮರುಲೇಪನ ಕಾರ್ಯ ನಡೆಯುತ್ತಿತ್ತು. ಈ ವೇಳೆ ದ್ವಾರಪಾಲಕ ವಿಗ್ರಹಕ್ಕೆ ಹೊದಿಸಿದ 42.8 ಕೆಜಿ ತೂಕದ ಕವಚಗಳನ್ನು ಮರುಲೇಪನಕ್ಕಾಗಿ ತೆಗೆದುಕೊಂಡು ಹೋದಾಗ 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಹಳೆಯ ತಾಮ್ರ ಮತ್ತು ಚಿನ್ನದ (Gold) ಲೇಪನ ಮೂರ್ತಿಗಳ ತೂಕದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಆಯುಕ್ತರು ಆರೋಪಿಸಿದ್ದರು.
ತನಿಖೆಯ ಪ್ರಗತಿ
ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (SIT) ಇದುವರೆಗೆ ಕಳ್ಳತನವಾದ ಚಿನ್ನದಲ್ಲಿ ಸುಮಾರು 400 ಗ್ರಾಂ ಚಿನ್ನವನ್ನು ಕರ್ನಾಟಕದ ಬಳ್ಳಾರಿಯ ಒಬ್ಬ ಆಭರಣ ವ್ಯಾಪಾರಿಯಿಂದ ವಶಪಡಿಸಿಕೊಂಡಿದೆ ಎಂದು ತಿಳಿಸಿದೆ. ಮುಖ್ಯ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಮತ್ತು ಮಾಜಿ ತಿರುವಾಂಕೂರು ದೇವಸ್ವಂ ಮಂಡಳಿ(TDB) ಅಧಿಕಾರಿ ಬಿ. ಮುರಾರಿ ಬಾಬು ಅವರನ್ನು ಬಂಧಿಸಲಾಗಿದೆ. ಇವರಿಬ್ಬರೂ ಚಿನ್ನದ ತಾಳೆಗಳನ್ನು ತಾಮ್ರದ ತಾಳೆ ಎಂದು ತೋರಿಸಿ ತಪ್ಪು ಮಾಹಿತಿ ನೀಡಿದ್ದರೆಂಬ ಆರೋಪವಿದೆ.
ದೇವಾಲಯದ ಅಧಿಕಾರಿಗಳೂ ಭಾಗಿಯಾಗಿರುವ ಶಂಕೆ
SIT ವರದಿಯ ಪ್ರಕಾರ, ಸಬರಿಮಲೆ ದೇವಾಲಯದ ಕೆಲ ಅಧಿಕಾರಿಗಳೂ ಚಿನ್ನದ ದುರುಪಯೋಗದಲ್ಲಿ ಭಾಗಿಯಾಗಿದ್ದರೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ತನಿಖೆ ಮುಂದುವರಿದಿದ್ದು, ಉಳಿದವರ ಪಾತ್ರವನ್ನು ಖಚಿತಪಡಿಸಲು ತಂಡ ಇನ್ನಷ್ಟು ವಿಚಾರಣೆ ನಡೆಸುತ್ತಿದೆ. ದೇವಾಲಯದ ಈ ಅಮೂಲ್ಯ ಬಂಗಾರದ ಕವಚಗಳು ಮಾಯವಾದ ಹಿನ್ನೆಲೆ ಕೇರಳ ಸರ್ಕಾರವು ಎಸ್ಐಟಿ ತಂಡ ರಚಿಸಿ ತನಿಖೆ ಆರಂಭಿಸಿತ್ತು.