ಬ್ಯಾರಿಕೇಡ್ ಮುರಿಯುವುದೇಕೆ? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತರಾಟೆ
Delhi High Court: ದೆಹಲಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ರದ್ದಾದ ಬಳಿಕವೂ ಅಲ್ಲಿಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಬ್ಯಾರಿಕೇಡ್ಗಳನ್ನು ಮುರಿದು ಪ್ರವೇಶಿಸಲು ಯತ್ನಿಸಿರುವುದನ್ನು ಪ್ರಶ್ನಿಸಿದ ನ್ಯಾಯಾಲಯ, ನ್ಯಾಯಾಂಗ ಬಂಧನ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಅರ್ಜಿಯನ್ನು ಹಿಂಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ. 21: ಜಂತರ್ ಮಂತರ್ನಲ್ಲಿ (Jantar Mantar) ಪ್ರತಿಭಟನೆ ನಡೆಸಲು ನಿಗದಿಪಡಿಸಿದ್ದ ಅನುಮತಿಯನ್ನು ರದ್ದುಗೊಳಿಸಿದ ಬಳಿಕವೂ ಅಲ್ಲಿಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party – CJP) ನಾಯಕರಾದ ಸೌರವ್ ದಾಸ್ (Saurav Das) ಮತ್ತು ಆಶುತೋಷ್ ರಂಕಾ (Ashutosh Ranka) ಅವರನ್ನು ದೆಹಲಿ ಹೈಕೋರ್ಟ್ (Delhi High Court) ಬುಧವಾರ ತರಾಟೆಗೆ ತೆಗೆದುಕೊಂಡಿದೆ.
“ಬ್ಯಾರಿಕೇಡ್ಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಹಾಕಲಾಗಿರುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರೂ ಅರ್ಜಿಯನ್ನು ಹಿಂಪಡೆದಿದ್ದಾರೆ.
ಜಂತರ್ ಮಂತರ್ನ ಬೀಗ ಹಾಕಿದ್ದ ಗೇಟ್ಗಳನ್ನು ಹತ್ತಿ ಒಳನುಗ್ಗಲು ಯತ್ನಿಸಿದ ಆರೋಪದ ಮೇಲೆ ಅಕ್ಟೋಬರ್ 14ರಿಂದ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರೊಂದಿಗೂ ಸೇರಿ ಜೂನ್–ಜುಲೈಯಲ್ಲಿ ಜಂತರ್ ಮಂತರ್ನಲ್ಲಿ ನಡೆಸಿದ್ದ ಪ್ರತಿಭಟನೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಗಿತ್ತು. ಈ ತಿಂಗಳ ಆರಂಭದಲ್ಲಿ ಜಂತರ್ ಮಂತರ್ಗೆ ನಿಗದಿತ ಪ್ರತಿಭಟನಾ ಸ್ಥಳವಾಗಿದ್ದ ಮಾನ್ಯತೆಯನ್ನು ರದ್ದುಗೊಳಿಸಲಾಗಿತ್ತು.
ಬ್ಯಾರಿಕೇಡ್ ಮುರಿಯುವುದೇಕೆ? ಹೈಕೋರ್ಟ್ ಪ್ರಶ್ನೆ
ಅನುಮತಿಯಿಲ್ಲದೆ ಬ್ಯಾರಿಕೇಡ್ಗಳನ್ನು ದಾಟಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಾಯಕರ ವರ್ತನೆಯನ್ನು ನ್ಯಾಯಾಲಯ ಪ್ರಶ್ನಿಸಿದ್ದು, ಅರ್ಜಿದಾರರ ಪರ ವಕೀಲ ಅಭಿಕ್ ಚಿಮ್ನಿ ಅವರನ್ನು ಉದ್ದೇಶಿಸಿ, ಬ್ಯಾರಿಕೇಡ್ಗಳನ್ನು ಮುರಿದಾಗ ಇತರರೂ ಗುಂಪಾಗಿ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಹೇಳಿದೆ.
ವಿದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಘಟನೆಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಪ್ರತಿಭಟನೆ ಶಾಂತಿಯುತವಾಗಿರಬಹುದು ಎಂದು ಸಂಘಟಕರು ಹೇಳಿದರೂ, ಅನಗತ್ಯ ವ್ಯಕ್ತಿಗಳು ಗುಂಪಿಗೆ ಸೇರಿ ಪರಿಸ್ಥಿತಿಯನ್ನು ಹದಗೆಡಿಸುವ ಸಾಧ್ಯತೆಯಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಘಟನೆಗಳನ್ನು ತಡೆಯುವ ಉದ್ದೇಶದಿಂದಲೇ ಪೊಲೀಸರ ಅನುಮತಿ ಅಗತ್ಯ ಎಂದು ಆದೇಶ ನೀಡಲಾಗಿತ್ತು ಎಂದು ಹೇಳಿದೆ.
ಜಾಮೀನು ಬಾಂಡ್ ಉಲ್ಲಂಘನೆ ಕುರಿತು ಪ್ರಶ್ನೆ
ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅಕ್ಟೋಬರ್ 11ರಂದು ತಲಾ ₹50,000 ಮೊತ್ತದ ಜಾಮೀನು ಬಾಂಡ್ ಸಲ್ಲಿಸಿದ್ದರು. ಆದರೆ ನಂತರ ಮತ್ತೆ ಬಂಧನಕ್ಕೊಳಗಾದರು. ಜಾಮೀನು ಬಾಂಡ್ ಉಲ್ಲಂಘನೆಯಾದ ಸಂದರ್ಭದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಏಕೆ ಅನುಸರಿಸಲಿಲ್ಲ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಜಾಮೀನು ಬಾಂಡ್ ಉಲ್ಲಂಘನೆಯಾದರೆ ಜಾಮೀನುದಾರರ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿ ಕಾನೂನಿನಲ್ಲಿ ನಿರ್ದಿಷ್ಟ ಕ್ರಮಗಳಿವೆ. ಅಂತಹ ಕ್ರಮಗಳನ್ನು ಅನುಸರಿಸುವ ಬದಲು ಹೊಸ ನೋಟಿಸ್ ನೀಡಿರುವುದು ಆರೋಪಿಗಳಿಗೆ ಅನುಕೂಲಕರವಾಗಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
CJP ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ನ್ಯಾಯಾಂಗ ಬಂಧನ 2 ದಿನ ವಿಸ್ತರಣೆ
ನ್ಯಾಯಾಂಗ ಬಂಧನ ವಿಸ್ತರಣೆ ಪ್ರಶ್ನಿಸಿ ಅರ್ಜಿ
ಅಕ್ಟೋಬರ್ 19ರಂದು ದೆಹಲಿಯ ಮಂದಿರ್ ಮಾರ್ಗ ಪೊಲೀಸ್ ಠಾಣೆಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಇಬ್ಬರ ನ್ಯಾಯಾಂಗ ಬಂಧನವನ್ನು ಎರಡು ದಿನಗಳ ಕಾಲ ವಿಸ್ತರಿಸಿದ್ದರು. ಸಾರ್ವಜನಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂಬ ಕಾರಣವನ್ನು ನೀಡಲಾಗಿತ್ತು. ನಿಗದಿತ ಪ್ರತಿಭಟನಾ ಸ್ಥಳದ ಮಾನ್ಯತೆ ರದ್ದಾದ ಬಳಿಕವೂ ಅಲ್ಲಿ ಪ್ರತಿಭಟನೆಗೆ ಕರೆ ನೀಡುತ್ತಿರುವುದು ಕಾನೂನಿಗೆ ಗೌರವ ನೀಡದ ವರ್ತನೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಇಬ್ಬರೂ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಸೂಕ್ತ ಕಾನೂನು ಪರಿಹಾರವನ್ನು ಪಡೆದು ನಂತರ ಹೈಕೋರ್ಟ್ಗೆ ಬರಬಹುದಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿತು. ಇದರ ಬೆನ್ನಲ್ಲೇ ಅರ್ಜಿಯನ್ನು ಹಿಂಪಡೆಯಲಾಯಿತು.
ಅಕ್ಟೋಬರ್ 10ರಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ದಾಸ್ ಮತ್ತು ರಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಿಎನ್ಎಸ್ಎಸ್ನ ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವೆಂದು ಗುರುತಿಸಿದ್ದ ಮಾನ್ಯತೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್ಗಳಲ್ಲಿ ಪ್ರಶ್ನಿಸಲಾಗಿದೆ.
ಇನ್ನೊಂದೆಡೆ, ಅಕ್ಟೋಬರ್ 19ರ ಆದೇಶದಲ್ಲಿ ಉಲ್ಲೇಖಿಸಿರುವ ಭವಿಷ್ಯದ ತಕ್ಷಣದ ಬೆದರಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯಾವುದೇ ನಿರ್ದಿಷ್ಟ ಮಾಹಿತಿ ಅಥವಾ ಸಾಕ್ಷ್ಯವನ್ನು ನೀಡಿಲ್ಲ ಎಂದು ನಾಯಕರ ಪರ ವಕೀಲರು ವಾದಿಸಿದ್ದಾರೆ.