ʼʼಉಪಾವಾಸ ಅಂತ್ಯಗೊಳಿಸಲು ಮನವಿ ಮಾಡಬೇಡಿ; ಜುಲೈ 20ರಂದು ಸಂಸತ್ ಮುತ್ತಿಗೆ ಹಾಕಲು ಬನ್ನಿʼʼ: ಬೆಂಬಲಿಗರಿಗೆ ಸೋನಮ್ ವಾಂಗ್ಚುವ್ ಕರೆ
Sonam Wangchuk: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ತಮ್ಮ ಅನಿರ್ದಿಷ್ಠಾವಧಿ ಉಪಾವಾಸ ಸತ್ಯಾಗ್ರಹವನ್ನು ಆರಂಭಿಸಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುವ್ ಇದನ್ನು ಹಿಂಪಡೆಯಲು ನಿರಾಕರಿಸಿದರು. ಸರ್ಕಾರದಿಂದ ಯಾವುದೇ ಭರವಸೆ ಇಲ್ಲದೆ ಉಪಾವಾಸ ಸತ್ಯಾಗ್ರಹವನ್ನು ರದ್ದುಗೊಳಿಸುವುದು ತಪ್ಪು ಸಂದೇಶ ರವಾನಿನಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಸೋನಮ್ ವಾಂಗ್ಚುವ್ (ಸಂಗ್ರಹ ಚಿತ್ರ) -
ನವದೆಹಲಿ, ಜು. 16: ಬೆಂಬಲಿಗರು ಮತ್ತು ರಾಜಕೀಯ ನಾಯಕರ ಮನವಿಗಳ ಹೊರತಾಗಿಯೂ ತಮ್ಮ ಅನಿರ್ದಿಷ್ಠಾವಧಿ ಉಪಾವಾಸ ಸತ್ಯಾಗ್ರಹವನ್ನು (Hunger strike) ಕೊನೆಗೊಳಿಸಲು ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುವ್ (Sonam Wangchuk) ನಿರಾಕರಿಸಿದರು. ಬುಧವಾರ (ಜುಲೈ 15) ತಡರಾತ್ರಿ ನೀಡಿದ ವಿಡಿಯೊ ಸಂದೇಶವೊಂದರಲ್ಲಿ ಅವರು ಈ ಹೇಳಿಕೆ ನೀಡಿದರು. ಸರ್ಕಾರದಿಂದ ಯಾವುದೇ ಭರವಸೆ ಇಲ್ಲದೆ ಉಪಾವಾಸ ಸತ್ಯಾಗ್ರಹವನ್ನು ರದ್ದುಗೊಳಿಸುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಸ್ಪಷ್ಟನೆ ನೀಡಿದರು.
ಉಪಾವಾಸ ಅಂತ್ಯಗೊಳಿಸಲು ಮನವಿ ಮಾಡುವ ಬದಲು, ಜುಲೈ 20ರಂದು ಸಂಸತ್ತಿಗೆ ನಡೆಯಲಿರುವ ಮೆರವಣಿಗೆಯಲ್ಲಿ ಜನರು ಭಾಗಿಯಾಗಬೇಕೆಂದು ಕರೆ ನೀಡಿದರು. “ನಾನು ಊಟ ಮಾಡಿದರೆ ಯಾವ ಸಂದೇಶ ರವಾನೆಯಾಗುತ್ತದೆ? ಸರ್ಕಾರಕ್ಕೆ ಹೊಣೆಗಾರಿಕೆಯ ಅಗತ್ಯವೇ ಇಲ್ಲ ಎಂಬ ಸಂದೇಶವೇ ಹೋಗುತ್ತದೆ. ಪ್ರತಿಭಟನಾಕಾರರು ಕುಳಿತು ನಂತರ ಎದ್ದು ಹೋಗುತ್ತಾರೆ ಎಂದುಕೊಳ್ಳುತ್ತಾರೆ” ಎಂಬುದಾಗಿ ಅವರು ತಿಳಿಸಿದರು.
ಜುಲೈ 20ರಂದು ಕಾಕ್ರೋಚ್ ಜನತಾ ಪಾರ್ಟಿ ನಡೆಸಲು ಉದ್ದೇಶಿಸಿದ ಚಲೋ ಸಂಸತ್ ಮೆರವಣಿಗೆಯಲ್ಲಿ ಭಾಗವಹಿಸಲು 59 ವರ್ಷದ ಕಾರ್ಯಕರ್ತ ಸೋನಮ್ ನಾಗರಿಕರನ್ನು ಆಗ್ರಹಿಸಿದರು.
ಇಲ್ಲಿದೆ ವಿಡಿಯೊ:
I’m Not in good shape but not so bad either...
— Sonam Wangchuk (@Wangchuk66) July 15, 2026
Rather than asking me to break my fast please join me on 20th July... Peaceful March to the Parliament.#cockroachjanataparty #jantarmantar #cjpprotest #chalosansad pic.twitter.com/QZ6VyxVMAR
ಉಪಾವಾಸ ಸತ್ಯಾಗ್ರಹದ 18ನೇ ದಿನದಂದು ಹಂಚಿಕೊಂಡಿರುವ ವಿಡಿಯೊದಲ್ಲಿ ಸೋನಮ್ ವಾಂಗ್ಚುವ್ ತಮ್ಮ ಉಪಾವಾಸವನ್ನು ಕೊನೆಗೊಳಿಸಲು ಬೆಂಬಲಿಗರಿಂದ ಸಾವಿರಾರು ವಿನಂತಿಗಳು ಬಂದಿವೆ ಎಂದು ಹೇಳಿದರು. ಜತೆಗೆ ಹಲವು ಹಿರಿಯ ರಾಜಕೀಯ ನಾಯಕರು ಸಹ ಕಳವಳ ವ್ಯಕ್ತಪಡಿಸಿದರು. ಕೆಲವರು ತನಗೆ ಬಲವಂತವಾಗಿ ಊಟ ಮಾಡಿಸುವಂತೆ ನಿರ್ದೇಶನಗಳನ್ನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಅವರು ತಿಳಿಸಿದರು.
ಸೋನಮ್ ವಾಂಗ್ಚುಕ್‌ಗೆ ಬಲವಂತವಾಗಿ ದ್ರವಾಹಾರ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಪಿಐಎಲ್
ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ ವಾಂಗ್ಚುವ್, ವೈದ್ಯಕೀಯ ಪರೀಕ್ಷೆಗಳು ಯಾವುದೇ ಅಪಾಯವನ್ನು ತೋರಿಸಿಲ್ಲ. ಉಪಾವಾಸ ಮುಂದುವರಿಸಲು ಅರ್ಹ ಎಂದಿದೆ ಎಂದರು. “ಅನೇಕ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. 18 ದಿನಗಳ ಉಪಾವಾಸದ ಫಲಿತಾಂಶಗಳು ಸಾಕಷ್ಟು ಸಾಮಾನ್ಯವಾಗಿದೆ. ಇಸಿಜಿ ಕೂಡ ಮಾಡಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ನಾನು ಇನ್ನೂ ಹಲವು ದಿನಗಳವರೆಗೆ ಉಪಾವಾಸ ಮುಂದುವರಿಸಬಹುದು” ಎಂದು ಅವರು ಹೇಳಿದರು.
ಇದಲ್ಲದೆ, ವಾಂಗ್ಚುವ್ ಜುಲೈ 20 ಅನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಅನುಭವ ಶಿಕ್ಷಣದ ದಿನವೆಂದು ಗುರುತಿಸಲು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಮನವಿ ಮಾಡಿದರು. ಅಂದು ವಿದ್ಯಾರ್ಥಿಗಳು ರಾಜಕೀಯ ವಿಜ್ಞಾನ ಮತ್ತು ಪ್ರಜಾಪ್ರಭುತ್ವದ ನಿಜವಾದ ಪಾಠಕ್ಕೆ ಸಾಕ್ಷಿಯಾಗುತ್ತಾರೆ ಎಂದು ಅವರು ಹೇಳಿದರು.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲ ದಿನವಾದ ಜುಲೈ 20ರಂದು ಚಲೋ ಸಂಸತ್ ಮೆರವಣಿಗೆಯನ್ನು ಸಿಜೆಪಿ ಘೋಷಿಸಿದೆ. ಇದಕ್ಕೆ ವಾಂಗ್ಚುವ್ ಬೆಂಬಲ ಸೂಚಿಸಿದ್ದಾರೆ.