Road Accident: ಭೀಕರ ಅಪಘಾತ; ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿ ಸಾವು, ಪತ್ನಿ ಸ್ಥಿತಿ ಗಂಭೀರ
ದೆಹಲಿ ಕ್ಯಾಂಟ್ ಮೆಟ್ರೋ ನಿಲ್ದಾಣದ ಬಳಿಯ ರಿಂಗ್ (Road Accident) ರಸ್ತೆಯಲ್ಲಿ ಭಾನುವಾರ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಕೇಂದ್ರ ಹಣಕಾಸು ಸಚಿವಾಲಯದ (Finance Ministry) ಹಿರಿಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

-

ನವದೆಹಲಿ: ದೆಹಲಿ ಕ್ಯಾಂಟ್ ಮೆಟ್ರೋ ನಿಲ್ದಾಣದ ಬಳಿಯ ರಿಂಗ್ (Road Accident) ರಸ್ತೆಯಲ್ಲಿ ಭಾನುವಾರ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಕೇಂದ್ರ ಹಣಕಾಸು ಸಚಿವಾಲಯದ (Finance Ministry) ಹಿರಿಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ 52 ವರ್ಷದ ನವತೋಜ್ ಸಿಂಗ್, ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ತಮ್ಮ ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.
ನವತೋಜ್ ಸಿಂಗ್ ಅವರ ಮಗ ಅಪಘಾತದ ಕುರಿತು ಮಾತನಾಡಿದ್ದು, ನನ್ನ ತಂದೆ ತಾಯಿ ಅಪಘಾತಕ್ಕೀಡಾದರು. ಅವರನ್ನು 17 ಕಿ.ಮೀ ದೂರದ ಜಿಟಿಬಿ ನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನನ್ನ ತಂದೆ ಮೃತಪಟ್ಟಿದ್ದಾರೆ ಮತ್ತು ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಕಾರನ್ನು ಚಲಾಯಿಸುತ್ತಿದ್ದ ಮಹಿಳೆಯನ್ನು ಗಗನ್‌ಪ್ರೀತ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಪರೀಕ್ಷಿತ್ ಪ್ರಯಾಣಿಕ ಸೀಟಿನಲ್ಲಿದ್ದರು. ಅಪಘಾತದ ಸ್ಥಳವನ್ನು ತಲುಪಿದಾಗ, ರಸ್ತೆಯ ಪಕ್ಕದಲ್ಲಿ ಬಿಎಂಡಬ್ಲ್ಯೂ ಕಾರು ಬಿದ್ದಿರುವುದು ಮತ್ತು ರಸ್ತೆ ವಿಭಜಕದ ಬಳಿ ನಿಂತಿದ್ದ ಮೋಟಾರ್ ಸೈಕಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಾಗ ಮಹಿಳೆಯೊಬ್ಬರು ಕಾರನ್ನು ಚಾಲನೆ ಮಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಬಿಎಂಡಬ್ಲ್ಯೂ ಕಾರು ಮತ್ತು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅಪಘಾತದ ಸ್ಥಳವನ್ನು ಅಪರಾಧ ತಂಡ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲಿಸಿದ್ದಾರೆ. ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಿಂದಾಗಿ ಆ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಾನಿಗೊಳಗಾದ ವಾಹನಗಳನ್ನು ರಸ್ತೆಯಿಂದ ತೆಗೆದು ಹಾಕಲಾಗಿದೆ.
ಈ ಸುದ್ದಿಯನ್ನೂ ಓದಿ: Road Accident: ಗಣೇಶ ವಿಸರ್ಜನೆ ವೀಕ್ಷಿಸಲು ಹೊರಟವರ ಕಾರು ಅಪಘಾತ, ಇಬ್ಬರ ಸಾವು
ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಬಳಿಕ ಟ್ಯಾಕ್ಸಿ ಮೂಲಕ ದಂಪತಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನವಜೋತ್ ಸಿಂಗ್ ಅವರನ್ನು ಜಿಟಿಬಿ ನಗರದ ನ್ಯೂಲೈಫ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರು ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಅವರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಅಪಘಾತ ಹೇಗಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇನ್ನೂ ತಿಳಿದುಬಂದಿಲ್ಲ ಎಂದು ಕುಟುಂಬಸ್ಥತರು ತಿಳಿಸಿದ್ದಾರೆ.