ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ನನಗೆ 8 ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕಿತ್ತು": ಪ್ರಶಸ್ತಿ ಸಮಿತಿ ವಿರುದ್ಧ ಟ್ರಂಪ್ ಆಕ್ರೋಶ

2026ನೇ ಸಾಲಿನ ಜಾಗತಿಕ ನೊಬೆಲ್ ಶಾಂತಿ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಹಿರಿಯ ನ್ಯಾಯಾಧೀಶೆ ಹಾಗೂ ತಮಿಳು ಮೂಲದ ಕಾನೂನು ತಜ್ಞೆ ನವನೀಥಂ 'ನವಿ' ಪಿಳ್ಳೈ ಅವರಿಗೆ ಘೋಷಿಸಲಾಗಿದೆ. ಆದರೆ, ನೊಬೆಲ್ ಪ್ರಶಸ್ತಿ ಸಮಿತಿಯ ಈ ನಿರ್ಧಾರವನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೊಬೆಲ್‌ ಪ್ರಶಸ್ತಿ ಸಮಿತಿ ವಿರುದ್ಧ ಟ್ರಂಪ್ ಆಕ್ರೋಶ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 10, 2026 5:04 PM

ವಾಷಿಂಗ್ಟನ್: 2026ನೇ ಸಾಲಿನ ಜಾಗತಿಕ ನೊಬೆಲ್ ಶಾಂತಿ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಹಿರಿಯ ನ್ಯಾಯಾಧೀಶೆ ಹಾಗೂ ತಮಿಳು ಮೂಲದ ಕಾನೂನು ತಜ್ಞೆ ನವನೀಥಂ 'ನವಿ' ಪಿಳ್ಳೈ ಅವರಿಗೆ ಘೋಷಿಸಲಾಗಿದೆ. ಆದರೆ, ನೊಬೆಲ್ ಪ್ರಶಸ್ತಿ ಸಮಿತಿಯ ಈ ನಿರ್ಧಾರವನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, (Donald Trump) ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾನು ಜಾಗತಿಕವಾಗಿ ಸುಮಾರು 8 ದೊಡ್ಡ ಯುದ್ಧ ಮತ್ತು ಸಂಘರ್ಷಗಳನ್ನು ಇತ್ಯರ್ಥಪಡಿಸಿದ್ದೇನೆ. ನನ್ನ ಈ ಸಾಧನೆಗೆ ಕನಿಷ್ಠ 8 ನೊಬೆಲ್ ಶಾಂತಿ ಪ್ರಶಸ್ತಿಗಳನ್ನು ನೀಡಬೇಕಿತ್ತು" ಎಂದು ಟ್ರಂಪ್ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹಾಗೂ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಪ್ರಶಸ್ತಿ ಆಯ್ಕೆ ಸಮಿತಿಯನ್ನು ಕಟುವಾಗಿ ಟೀಕಿಸಿದ್ದಾರೆ. "ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ, ಕೇವಲ ನಾಲ್ಕೈದು ಜನರಿಗಷ್ಟೇ ಗೊತ್ತಿರುವ ಉದಾರವಾದಿ ವ್ಯಕ್ತಿಗೆ ನೀಡಲಾಗಿದೆ. ಇಂತಹ ನಿರ್ಧಾರಗಳಿಂದ ನೊಬೆಲ್ ಪ್ರಶಸ್ತಿಯ ಮೌಲ್ಯ ಸಂಪೂರ್ಣವಾಗಿ ಕುಸಿದಿದೆ" ಎಂದು ಆರೋಪಿಸಿದ್ದಾರೆ.

"ಅಮೆರಿಕ ಅಧ್ಯಕ್ಷನಾಗಿ ನನ್ನ ದೇಶಕ್ಕೆ ಬರಬೇಕಿದ್ದ ಗೌರವವನ್ನು ಕಸಿದುಕೊಳ್ಳಲಾಗಿದೆ. ಇದು ನಾರ್ವೆ ದೇಶಕ್ಕೆ ಎದುರಾದ ಕಳಂಕ, ನಾರ್ವೆಯ ಈ ನಡೆಯನ್ನು ನಾವು ಎಂದಿಗೂ ಮರೆಯುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಕಾಂಬೋಡಿಯಾ-ಥೈಲ್ಯಾಂಡ್, ಕೊಸೊವೊ-ಸೆರ್ಬಿಯಾ, ಭಾರತ-ಪಾಕಿಸ್ತಾನ, ಇಸ್ರೇಲ್-ಇರಾನ್ ಹಾಗೂ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷಗಳನ್ನು ತಾನೇ ಪರಿಹರಿಸಿರುವುದಾಗಿ ಪ್ರತಿಪಾದಿಸಿದ್ದಾರೆ.

ಅಷ್ಟೇ ಅಲ್ಲದೆ, ಕಾಂಗೋ ಮತ್ತು ರುವಾಂಡಾ, ಈಜಿಪ್ಟ್ ಮತ್ತು ಇಥಿಯೋಪಿಯಾ ಹಾಗೂ ಅಜರ್‌ಬೈಜಾನ್ ದೇಶಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಇನ್ನುಳಿದ ಇರಾನ್ ಮತ್ತು ರಷ್ಯಾ-ಉಕ್ರೇನ್ ಯುದ್ಧವನ್ನೂ ಶೀಘ್ರದಲ್ಲೇ ಇತ್ಯರ್ಥಪಡಿಸಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪರಮಾಣು ದಾಳಿ ತಡೆದು ಜಾಗತಿಕ ಶಾಂತಿ ಕಾಪಾಡಿದ್ದೇನೆ

ತಮ್ಮ ಆಡಳಿತಾವಧಿಯ ಸಾಧನೆಗಳನ್ನು ಸಮರ್ಥಿಸಿಕೊಂಡ ಟ್ರಂಪ್, ʼʼಪರಮಾಣು ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಬಳಕೆಯನ್ನು ತಡೆದು ಸಾವಿರಾರು ಜನರ ಪ್ರಾಣ ಉಳಿಸಿದ್ದೇನೆ. ಇಸ್ರೇಲ್‌ನಲ್ಲಿದ್ದ 28 ಜಿಹಾದಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಕೀರ್ತಿ ನನಗೆ ಸಲ್ಲುತ್ತದೆ. ವೆನೆಜುವೆಲಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಶ್ರಮಿಸಿದ್ದೇನೆ ಹಾಗೂ ಉತ್ತರ-ದಕ್ಷಿಣ ಕೊರಿಯಾ ಮತ್ತು ಚೀನಾ-ತೈವಾನ್ ನಡುವಿನ ಉದ್ವಿಗ್ನತೆ ತಡಯಲು ನೆರವಾಗಿದ್ದೇನೆ" ಎಂದಿದ್ದಾರೆ.

ಯಾರು ಈ ನವಿ ಪಿಳ್ಳೈ? ಪ್ರಶಸ್ತಿ ಸಿಕ್ಕಿದ್ದು ಹೇಗೆ?

85 ವರ್ಷದ ನವನೀಥಂ ನವಿ ಪಿಳ್ಳೈ ಅವರು ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಯ ಕ್ಷೇತ್ರದಲ್ಲಿ ಸಲ್ಲಿಸಿದ ಐತಿಹಾಸಿಕ ಸೇವೆಗಾಗಿ 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ತಮಿಳು ಮೂಲದ ಕುಟುಂಬದಲ್ಲಿ ಜನಿಸಿದ ಇವರು, ವರ್ಣಭೇದ ನೀತಿಯ ವಿರುದ್ಧ ಹೋರಾಡಿ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾಗಿ ಹಾಗೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಜಾಗತಿಕವಾಗಿ ಯುದ್ಧ ಅಪರಾಧಗಳು ಹಾಗೂ ಜನಾಂಗೀಯ ಹತ್ಯೆಗಳ ವಿರುದ್ಧ ಕಾನೂನು ಹೋರಾಟ ರೂಪಿಸಿದ್ದಕ್ಕಾಗಿ ನೊಬೆಲ್ ಸಮಿತಿ ಇವರನ್ನು ಗೌರವಿಸಿದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಟ್ರಂಪ್ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ನವಿ ಪಿಳ್ಳೈ, ʼʼಒಂದು ವೇಳೆ ಪ್ರಶಸ್ತಿಯನ್ನು ಹಂಚಿಕೊಳ್ಳಲು ಅವಕಾಶವಿದ್ದರೆ, ನಾನು ಖಂಡಿತ ಟ್ರಂಪ್ ಅವರೊಂದಿಗೆ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಿದ್ದೆʼʼ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.