ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಯೋತ್ಪಾದಕ ಅಡಗುತಾಣದಿಂದ ನೇರಳೆ ಕ್ರಾಂತಿಯವರೆಗೆ: ಜಮ್ಮು-ಕಾಶ್ಮೀರದ ಈ ಪಟ್ಟಣದ ಭವಿಷ್ಯವನ್ನೇ ಬದಲಾಯಿಸಿದ ಲ್ಯಾವೆಂಡರ್ ಹೂವು

Purple Revolution: ಈ ಹಿಂದೆ ಹಿಂಸಾಚಾರದ ನೆರಳನ್ನು ಕಂಡಿದ್ದ ಬೆಟ್ಟ-ಗುಡ್ಡಗಳು ಇಂದು ಲಾವೆಂಡರ್ ಹೂವಿನ ತೋಟಗಳಿಂದ ಕಂಗೊಳಿಸುತ್ತಿವೆ. ದಶಕಗಳಿಂದ, ಸ್ಥಳೀಯ ರೈತರು ವಿಶಾಲವಾದ ಭೂಮಿಯಲ್ಲಿ ಮೆಕ್ಕೆಜೋಳ ಕೃಷಿಯ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದರು. ಆದರೆ ಲಾವೆಂಡರ್ ಕೃಷಿಯ ಪರಿಚಯದಿಂದ ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.

ಜಮ್ಮು-ಕಾಶ್ಮೀರದ ಭವಿಷ್ಯವನ್ನೇ ಬದಲಾಯಿಸಿದ ಲ್ಯಾವೆಂಡರ್ ಹೂವು

ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿರುವ ಲ್ಯಾವೆಂಡರ್ ಹೂವುಗಳು -

Priyanka P
Priyanka P Jun 10, 2026 2:36 PM

ಜಮ್ಮು, ಜೂ.10: ಒಂದು ಕಾಲದಲ್ಲಿ ಭಯೋತ್ಪಾದಕರ ಅಡಗುತಾಣವಾಗಿ ಗುರುತಿಸಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ (Jammu and Kashmir) ದೋಡಾ ಜಿಲ್ಲೆಯ ಭದರ್‌ವಾಹ್ ಈಗ ಅಚ್ಚರಿಯ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಹಿಂದೆ ಹಿಂಸಾಚಾರದ ನೆರಳನ್ನು ಕಂಡಿದ್ದ ಬೆಟ್ಟ-ಗುಡ್ಡಗಳು ಇಂದು ಲಾವೆಂಡರ್ ಹೂವಿನ (Lavender Flowers) ತೋಟಗಳಿಂದ ಕಂಗೊಳಿಸುತ್ತಿವೆ. ಇದು ರೈತರಿಗೆ ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಿದ್ದು, ಪ್ರವಾಸಿಗರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ.

ದಶಕಗಳಿಂದ, ಸ್ಥಳೀಯ ರೈತರು ವಿಶಾಲವಾದ ಭೂಮಿಯಲ್ಲಿ ಮೆಕ್ಕೆಜೋಳ ಕೃಷಿಯ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದರು. ಆದರೆ ಲಾವೆಂಡರ್ ಕೃಷಿಯ ಪರಿಚಯದಿಂದ ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈ ಸುಗಂಧಭರಿತ ಬೆಳೆಯಿಂದ ಹೊರತೆಗೆಯುವ ಲಾವೆಂಡರ್ ಎಣ್ಣೆಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆ ದೊರೆಯುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಬರುವ ನಿರೀಕ್ಷೆಯಿದೆ.

ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಸಮೃದ್ಧಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಸ್ಥಳೀಯ ನಿವಾಸಿ ಅತಿಕಾ ಹೇಳಿದರು. ಪ್ರವಾಸಿ ಆಕರ್ಷಣೆಯಾಗಿ ಹೊರಹೊಮ್ಮಿರುವ ಲ್ಯಾವೆಂಡರ್ ಹೊಲಗಳು ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಸೋಷಿಯಲ್‌ ಮೀಡಿಯಾ ಮೂಲಕ ಪರಿಚಯ: ಜಮ್ಮು-ಕಾಶ್ಮೀರದ ಪ್ರಿಯತಮೆಯನ್ನು ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಆಕ್ರಮಿತ ಕಾಶ್ಮೀರದ ಯುವಕ

ಕೈಗಾರಿಕೋದ್ಯಮಿ ಕಾಜಲ್ ಶಾ ಅವರಿಗೆ ಈ ಪ್ರವಾಸವು ಒಂದು ಮರೆಯಲಾಗದ ವೈಯಕ್ತಿಕ ಕ್ಷಣವಾಗಿ ಪರಿಣಮಿಸಿತು. “ನಮ್ಮ ಮದುವೆಯಾಗಿ 36 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ನನ್ನ ಪತಿ ನನಗೆ ಎಂದಿಗೂ ಪ್ರೇಮ ನಿವೇದನೆ ಮಾಡಿರಲಿಲ್ಲ. ಆದರೆ ಈ ಬಾರಿ ಅವರು ಲಾವೆಂಡರ್ ಹೂವುಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಆ ಹೂವುಗಳೇ ಅದ್ಭುತ ಮಾಡಿವೆ” ಎಂದು ಅವರು ಹೇಳಿದರು.

ಭದರ್‌ವಾಹ್‌ನ ಲಾವೆಂಡರ್ ಯಶೋಗಾಥೆಗೆ ರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಪ್ರದೇಶದ ನೇರಳೆ ಕ್ರಾಂತಿ ಬಗ್ಗೆ ಉಲ್ಲೇಖಿಸಿದರು. ದೂರದ ಹಿಮಾಲಯ ಪಟ್ಟಣದ ರೈತರು ಹೂವಿನ ಕೃಷಿಯ ಮೂಲಕ ಹೊಸ ಆದಾಯದ ಮೂಲಗಳನ್ನು ಹೇಗೆ ಕಂಡುಕೊಳ್ಳುತ್ತಿದ್ದಾರೆ ಎಂಬುದನ್ನು ದೇಶದ ಗಮನಕ್ಕೆ ತಂದಿದ್ದರು.

“ಒಂದು ದಶಕದ ಹಿಂದೆ, ಭದೇರ್ವಾದಲ್ಲಿ ಮೆಕ್ಕೆಜೋಳದ ಹೊಲಗಳು ಅಥವಾ ಬಂಜರು ಭೂಮಿ ಇತ್ತು. ನಾವು ಕೃಷಿ ಆರಂಭಿಸಿದಾಗ ದೈಹಿಕ ಮತ್ತು ಮಾನಸಿಕ ಅಡೆತಡೆಗಳು ಇದ್ದವು. ಜನರು ತಮ್ಮ ಭೂಮಿಯನ್ನು ಬಿಟ್ಟುಕೊಡಲು ಹಿಂಜರಿಯುತ್ತಿದ್ದರು. ಆದ್ದರಿಂದ ನಾವು ಉಳಿದ ಪ್ರದೇಶಗಳಲ್ಲಿ ಲ್ಯಾವೆಂಡರ್ ಕೃಷಿಯನ್ನು ಪ್ರಾರಂಭಿಸಿದೆವು. ಅದು ವಿಫಲವಾದರೆ ಗ್ರಾಮಸ್ಥರಿಗೆ ಅವರ ಭೂಮಿಯನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದೇವೆ” ಎಂದು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದರು.

ಆ ಪ್ರಯೋಗ ಶೀಘ್ರದಲ್ಲೇ ಫಲ ನೀಡಿತು. ರೈತರು ರಾತ್ರೋರಾತ್ರಿ ಸಂಪತ್ತು ಗಳಿಸಿದಾಗ, ಇಡೀ ಗ್ರಾಮವೇ ಮುಂದೆ ಬಂದಿತು ಎಂದು ಡಾ. ಸಿಂಗ್ ಹೇಳಿದರು. ಇದು ಒಂದು ಪ್ರಮುಖ ಪರಿಕಲ್ಪನೆಯನ್ನು ಸಮರ್ಥಿಸಿತು. ಒಂದು ನವೋದ್ಯಮಕ್ಕೆ ಐಟಿ ಪದವಿ ಅಥವಾ ಪಿಎಚ್‌ಡಿ ಅಗತ್ಯವಿಲ್ಲ. ಇಲ್ಲಿನ ಅನೇಕ ಯುವ ಉದ್ಯಮಿಗಳು ಪದವೀಧರರೂ ಅಲ್ಲ. ಕೆಲವರು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿಲ್ಲ. ಮನ್ ಕಿ ಬಾತ್‌ನಲ್ಲಿ ಪ್ರಧಾನಮಂತ್ರಿ ಈ ಉಪಕ್ರಮದ ಬಗ್ಗೆ ಪ್ರಸ್ತಾಪಿಸಿದ್ದು, ಈ ಆಂದೋಲನಕ್ಕೆ ಮತ್ತಷ್ಟು ವೇಗ ನೀಡಿದೆ ಎಂದು ಅವರು ಹೇಳಿದರು.