ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಅವಮಾನ, ಹತಾಶೆ"; ಮಮತಾ ನೆರಳಿನಿಂದ ಹೊರಬಂದು ಬಂಗಾಳದಲ್ಲಿ ಬಿಜೆಪಿ ನಾಯಕನಾಗಿ ಸುವೇಂದು ಅಧಿಕಾರಿ ಬೆಳೆದಿದ್ದು ಹೇಗೆ?

From Trinamool to BJP: ಬಂಗಾಳದ ಇತ್ತೀಚಿನ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಸುವೇಂದು ಅಧಿಕಾರಿ ಅವರ ಕಥೆ 18 ವರ್ಷಗಳ ನಂತರ, ಅಂದರೆ 2011 ರಲ್ಲಿ ಪ್ರಾರಂಭವಾಗುತ್ತದೆ. ಆ ವರ್ಷ, ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಬ್ರಿಗೇಡ್ ಪೆರೇಡ್ ಮೈದಾನ ಮತ್ತು ಧರ್ಮತಾಲಾದಲ್ಲಿ ಒಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬಿಜೆಪಿ ನಾಯಕನಾಗಿ ಸುವೇಂದು ಅಧಿಕಾರಿ ಬೆಳೆದಿದ್ದು ಹೇಗೆ ಗೊತ್ತಾ?

ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ) -

Priyanka P
Priyanka P May 9, 2026 1:57 PM

ಕೋಲ್ಕತ್ತಾ, ಮೇ 9: ಸುವೇಂದು ಅಧಿಕಾರಿ (Suvendu Adhikari) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ 15 ವರ್ಷಗಳ ಮಮತಾ ಬ್ಯಾನರ್ಜಿ (Mamatha Banerjee) ಆಡಳಿತವನ್ನು ಕೊನೆಗೊಳಿಸಿ, ಬಿಜೆಪಿ ನೇತೃತ್ವದ ಸರ್ಕಾರವನ್ನು ತಂದಿದ್ದಾರೆ. ಆದರೆ, ಬಂಗಾಳದಲ್ಲಿ ಕಮಲ ಅರಳುವಂತೆ ಮಾಡಿದ ಸುವೇಂದು ಅಧಿಕಾರಿಯ ರಾಜಕೀಯ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಮಮತಾ ಬ್ಯಾನರ್ಜಿ ಗರಡಿಯಲ್ಲಿ ಬೆಳೆದ ನಾಯಕನಾಗಿ ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್‌ನಲ್ಲಿ ಸಂಘಟನಾ ಶಕ್ತಿಯಾಗಿ ಬೆಳೆದಿದ್ದರು. ಪಕ್ಷದೊಳಗಿನ ಅವಮಾನಗಳು, ಅಧಿಕಾರದ ಒಳಜಗಳಗಳು ಮತ್ತು ನಾಯಕತ್ವದ ಬದಲಾವಣೆಗಳ ನಡುವೆ ನಿಧಾನವಾಗಿ ಮಮತಾ ಬಳಗದಿಂದ ದೂರವಾಗಬೇಕಾಯಿತು.

ಮಮತಾ ಬ್ಯಾನರ್ಜಿಯು ತಮ್ಮ ಹೋರಾಟದ ಹಾದಿಯಿಂದಲೇ ಪಕ್ಷವನ್ನು ಸಂಘಟಿಸಿದವರು. 1993ರಲ್ಲಿ ಮಮತಾ ಬ್ಯಾನರ್ಜಿ ಪಕ್ಷವನ್ನು ಸಂಘಟಿಸಿದರು. ಮಮತಾರ ಆಪ್ರರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಸುವೇಂದು ಅಧಿಕಾರಿ ಅವರ ಕಥೆ 18 ವರ್ಷಗಳ ನಂತರ, ಅಂದರೆ 2011 ರಲ್ಲಿ ಪ್ರಾರಂಭವಾಗುತ್ತದೆ. ಆ ವರ್ಷ, ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಬ್ರಿಗೇಡ್ ಪೆರೇಡ್ ಮೈದಾನ ಮತ್ತು ಧರ್ಮತಾಲಾದಲ್ಲಿ ಒಂದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೃಹತ್ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆ ಹೊತ್ತಿಗಾಗಲೇ ಮಮತಾ ಬ್ಯಾನರ್ಜಿ ಅವರು ಎಡರಂಗದ ಸರ್ಕಾರದ ವಿರುದ್ಧ ಅಪ್ರತಿಮ ಶಕ್ತಿಯಾಗಿ ಹೊರಹೊಮ್ಮಿದ್ದರು ಮತ್ತು ಬಂಗಾಳದಲ್ಲಿ ಪರಿವರ್ತನೆಯ ಕಿಚ್ಚು ಉತ್ತುಂಗಕ್ಕೇರಿತ್ತು.

ಆ ಸಮಯದಲ್ಲಿ ಸುವೇಂದು ಅಧಿಕಾರಿ ಯುವ ತೃಣಮೂಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪಕ್ಷವನ್ನು ತಳಮಟ್ಟದಲ್ಲಿ, ವಿಶೇಷವಾಗಿ ಪೂರ್ವ ಮಿಡ್ನಾಪುರ ಮತ್ತು ಪಕ್ಕದ ಪ್ರದೇಶಗಳಲ್ಲಿ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮುಖ ಸಂಘಟನಾ ವ್ಯಕ್ತಿ ಅವರು. ಅವರು ಆ ದಿನ ವೇದಿಕೆಯಲ್ಲಿದ್ದರು. ಆದರೆ, ಈ ಕಾರ್ಯಕ್ರಮವನ್ನು ಸಂಪೂರ್ಣ ನಿರ್ವಹಿಸಿದ್ದು ಮಮತಾ ಬ್ಯಾನರ್ಜಿಯವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಕುನಾಲ್ ಘೋಷ್. ಸಂಘಟನಾ ಮಟ್ಟದಲ್ಲಿ ಪ್ರಭಾವಿ ಸ್ಥಾನ ಹೊಂದಿದ್ದರೂ, ಸುವೇಂದು ವೇದಿಕೆಯಲ್ಲಿ ಬಹುತೇಕ ಮೌನವಾಗಿಯೇ ಉಳಿದರು. ಅನೇಕರಿಗೆ, ಅವರನ್ನು ವೇದಿಕೆಯಲ್ಲಿ ಕೇವಲ ಒಬ್ಬ ವ್ಯಕ್ತಿ ಬೇಕು ಅದಕ್ಕೆ ಇರಿಸಲಾಗಿದೆ ಎಂಬಂತೆ ಅವರನ್ನು ಕೂರಿಸಲಾಗಿದೆ ಎಂಬಂತೆ ತೋರುತ್ತಿತ್ತು.

ನಂದಿಗ್ರಾಮದಿಂದ ನಬನ್ನದವರೆಗೆ: ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಲು ಕಾರಣವಾದ ಪ್ರಮುಖ ಹಂತಗಳು

ಸುವೇಂದು ಅಧಿಕಾರಿಯಂತಹ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಸಂಘಟನಾ ಬದ್ಧ ವ್ಯಕ್ತಿಗೆ, ಅದು ಸಾಮಾನ್ಯ ಅವಮಾನವಾಗಿರಲಿಲ್ಲ. ಮೇಲ್ನೋಟಕ್ಕೆ ಏನೂ ಆಗದಂತೆ ಕಂಡುಬಂದರೂ, ಮಮತಾ ಅವರಿಂದ ದೂರವಾಗುವ ಮೊದಲ ಬೀಜಗಳು ಆಗಲೇ ಬಿತ್ತಲ್ಪಟ್ಟಿದ್ದವು. ಆ ಕ್ಷಣದಿಂದಲೇ, ಅವರ ಮನದಲ್ಲಿ ಘಾಸಿಗೊಂಡ ಸ್ವಾಭಿಮಾನದ ಕಿಚ್ಚು ಮೆಲ್ಲಗೆ ಹೊತ್ತಿಕೊಳ್ಳಲು ಪ್ರಾರಂಭಿಸಿತು.

ಸುವೇಂದು ಅವರು ತೃಣಮೂಲ ಕಾಂಗ್ರೆಸ್‌ನ ಯುವ ನಾಯಕರಲ್ಲೊಬ್ಬರಾಗಿದ್ದರು. ಹಠಮಾರಿ ಸ್ವಭಾವ ಮತ್ತು ಆತ್ಮಗೌರವ ಹೊಂದಿದ್ದ ಅವರು, ಯಾವುದನ್ನೂ ಸುಲಭವಾಗಿ ಮರೆತು ಬಿಡುವವರಲ್ಲ. ಬ್ರಿಗೇಡ್ ಮತ್ತು ಧರ್ಮತಲಾದಲ್ಲಿ ನಡೆದ ಆ ಘಟನೆ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿಬಿಟ್ಟಿತು. ಶೀಘ್ರದಲ್ಲೇ ಅವರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಯಿತು. ಸುವೇಂದು ಅವರನ್ನು ಸಂಘಟನಾ ವಲಯದಿಂದ ಸಂಪೂರ್ಣವಾಗಿ ಹೊರಗಿಡಲಾಯಿತು. ಇದು ಅವರ ಆತ್ಮಗೌರವಕ್ಕೆ ಉಂಟಾದ ದೊಡ್ಡ ಹೊಡೆತವಾಗಿತ್ತು.

ಬಿಜೆಪಿ ಸೇರುವ ಬಗ್ಗೆ ಸುವೇಂದು ಅಧಿಕಾರಿ ಮನಸ್ಸು ಮಾಡಿದ್ದರು. ಬಿಜೆಪಿಯಿಂದಲೂ ಅವರಿಗೆ ಆಹ್ವಾನ ಬಂದಿತ್ತು. ಆದರೆ, ತೃಣಮೂಲ ಕಾಂಗ್ರೆಸ್ ತೊರೆಯುವುದು ಅಷ್ಟು ಸುಲಭವಿರಲಿಲ್ಲ. ಏಕೆಂದರೆ, ಅವರ ತಂದೆ ಸಿಶಿರ್ ಅಧಿಕಾರಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಪಕ್ಷದೊಳಗಿನ ಒಳಜಗಳಗಳು, ಭಿನ್ನಾಭಿಪ್ರಾಯಗಳು ಅಧಿಕಾರಿಯನ್ನು ಬಿಜೆಪಿ ಸೇರುವಂತೆ ಮಾಡಿತ್ತು.

ದಶಕಗಳ ಹಿಂದೆ ಎಲ್.ಕೆ. ಅಡ್ವಾಣಿ ಅವರು ಮಮತಾ ಬ್ಯಾನರ್ಜಿ ಅವರಲ್ಲಿ ಕಂಡಿದ್ದಂತಹ ಗುಣಲಕ್ಷಣವೊಂದನ್ನು ಸುವೇಂದು ಅವರಲ್ಲಿ ಬಿಜೆಪಿ ಹಿರಿಯ ನಾಯಕರು ಗುರುತಿಸಿದ್ದರು. ಆಡಳಿತ ವ್ಯವಸ್ಥೆಯ ವಿರುದ್ಧ ಜನರು ಹೊಂದಿದ್ದ ಅಸಮಾಧಾನವನ್ನು ರಾಜಕೀಯ ಶಕ್ತಿಯಾಗಿ ರೂಪಿಸುವ ಸಾಮರ್ಥ್ಯವನ್ನು ಅಧಿಕಾರಿ ಹೊಂದಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ಮನಗಂಡಿದ್ದರು.

ಕೊನೆಗೆ ಡಿಸೆಂಬರ್ 19, 2020 ರಂದು, ಸುವೇಂದು ಅಧಿಕಾರಿ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದರು. 2021 ರ ವಿಧಾನಸಭಾ ಚುನಾವಣೆಯಲ್ಲಿ, ಅವರು ಮಮತಾ ಬ್ಯಾನರ್ಜಿ ಅವರನ್ನು ನಂದಿಗ್ರಾಮದಲ್ಲಿ ಸೋಲಿಸಿದ್ದರು. ಸುವೇಂದು ಅಧಿಕಾರಿ ತೃಣಮೂಲ ಮತ್ತು ಮಮತಾ ಅವರ ನೆರಳಿನಿಂದ ಹೊರಬಂದು ಬಂಗಾಳದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡರು. ಪಶ್ಚಿಮ ಬಂಗಾಳದಲ್ಲಿ ಕಮಲ ಅರಳುವಂತೆ ಮಾಡಿದ ಕೀರ್ತಿ ನಿಜಕ್ಕೂ ಸುವೇಂದು ಅಧಿಕಾರಿಗೆ ಸಲ್ಲುತ್ತದೆ.