Ganja Seized: ದೆಹಲಿ-ಹೌರಾ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 6.3 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆ
ಆರ್‌ಪಿಎಫ್ ಮತ್ತು ಸಿಐಬಿ ಜಂಟಿ ಕಾರ್ಯಚರಣೆ ವೇಳೆ ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ 6.3 ಲಕ್ಷ ರೂ. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಇದನ್ನು ಪ್ರಯಾಗ್‌ರಾಜ್‌ಗೆ ತಲುಪಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಂಧಿತ ಯುವಕರು ತಿಳಿಸಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.


ನವದೆಹಲಿ: ರೈಲ್ವೆ ರಕ್ಷಣಾ ಪಡೆ (RPF) ಮತ್ತು ಅಪರಾಧ ತನಿಖಾ ದಳ (CIB) ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ ಹೌರಾ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನ (Delhi-Howrah Rajdhani Express) ಎಸಿ ಕೋಚ್‌ನಲ್ಲಿ (AC Coach) ಸುಮಾರು 6.3 ಲಕ್ಷ ರೂ. ಮೌಲ್ಯದ ಗಾಂಜಾ (Ganja Seized) ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ (Railway Police Station) ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ವೇಳೆ ಲಕ್ಷಾಂತರ ಮೌಲ್ಯದ ಗಾಂಜಾವನ್ನು ಪ್ರಯಾಗ್‌ರಾಜ್‌ಗೆ ತಲುಪಿಸಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಂಧಿತ ಯುವಕರು ತಿಳಿಸಿದ್ದಾರೆ.
ಅತ್ಯುತ್ತಮ ಎಸಿ ಕೋಚ್ ಸೇವೆಗೆ ಹೆಸರುವಾಸಿಯಾಗಿರುವ 12301 ಹೌರಾ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ಹೌರಾದಿಂದ ಹೊರಡುವ ಪ್ರಮುಖ ರೈಲುಗಳಲ್ಲಿ ಒಂದು.
ರೈಲಿನಲಿ ಪ್ರಯಾಣಿಕರು ಎಂದಿನಂತೆ ಪ್ರಯಾಣಿಸುತ್ತಿದ್ದರು. ಎರಡನೇ ಎಸಿ ಎ-1 ಮತ್ತು ಎ-2 ಕೋಚ್‌ಗಳಲ್ಲಿ ಮೂರು ಮಂದಿ ಯುವಕರು ಕುಳಿತಿದ್ದರು. ಅವರ ಟ್ರಾಲಿಗಳು ಮತ್ತು ಬ್ಯಾಗ್‌ಗಳನ್ನು ನಿಗದಿತ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ಇರಿಸಲಾಗಿತ್ತು. ಅವರ ಸಹ ಪ್ರಯಾಣಿಕರಿಗೆ ಇದು ಅನುಮಾನಾಸ್ಪದವಾಗಿ ಕಂಡು ಬರಲಿಲ್ಲ.
ಇದ್ದಕ್ಕಿದ್ದಂತೆ ರೈಲ್ವೆ ರಕ್ಷಣಾ ಪಡೆ ಮತ್ತು ಅಪರಾಧ ತನಿಖಾ ದಳ ಸಿಬ್ಬಂದಿ ಎಸಿ ಕೋಚ್‌ನೊಳಗೆ ನುಗ್ಗಿ ತನಿಖೆ ಪ್ರಾರಂಭಿಸಿದರು. ಈ ವೇಳೆ ಅನೇಕ ಪ್ರಯಾಣಿಕರು ಗಾಬರಿಗೊಂಡರು. ಗಾಂಜಾ ಸಾಗಿಸುತ್ತಿದ್ದ ಯುವಕರ ಬಳಿ ಅಧಿಕಾರಿಗಳು ಬಂದು ನಿಂತಾಗ ಒಬ್ಬ ಯುವಕ ಉದ್ವಿಗ್ನನಾಗಿ ಕಾಣುತ್ತಿದ್ದ. ತಕ್ಷಣ ಆತನ ಬ್ಯಾಗ್ ತಪಾಸಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಅವನ ಟ್ರಾಲಿಯಲ್ಲಿ ಹದಿನಾಲ್ಕು ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಇತರ ಇಬ್ಬರು ಯುವಕರನ್ನು ಕೂಡ ಅಧಿಕಾರಿಗಳು ಬಂಧಿಸಿದರು. ಮೂವರು ಯುವಕರ ಬ್ಯಾಗ್ ಗಳಿಂದ ತಲಾ 1 ಕೆಜಿ ತೂಕದ ಹದಿನಾಲ್ಕು ಪ್ಯಾಕೆಟ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾದ ಮಾರುಕಟ್ಟೆ ಮೌಲ್ಯ 6,30,000 ರೂ. ಎಂದು ಅಂದಾಜಿಸಲಾಗಿದೆ.
ಒಡಿಶಾದ ಅಂಗುಲ್‌ನ ಸಂಜಯ್ ಎಂಬ ವ್ಯಕ್ತಿ ತಮಗೆ ಟ್ರಾಲಿ ಬ್ಯಾಗ್‌ಗಳನ್ನು ನೀಡಿದ್ದಾಗಿ ಯುವಕರು ವಿಚಾರಣೆ ವೇಳೆ ತಿಳಿಸಿದ್ದಾರೆ. ಹೌರಾ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲಿರುವ ರಾಮ್‌ಕುಮಾರ್ ಎಂಬ ವ್ಯಕ್ತಿಗೆ ತಲುಪಿದರೆ ಅದಕ್ಕೆ ಪ್ರತಿಯಾಗಿ ತಮಗೆ ಹಣ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ರೋಹಿತ್; ನಂಬರ್ ಪ್ಲೇಟ್ ರಹಸ್ಯವೇನು?
ಬಂಧಿತರೆಲ್ಲ 18ರಿಂದ 24 ವರ್ಷದವರಾಗಿದ್ದು, ಇವರನ್ನು ನಳಂದದ ಸೌರಭ್ ಕುಮಾರ್, ಸಿವಾನ್‌ನ ಅಖಿಲೇಶ್ ಮೋಹನ್ ಮತ್ತು ಹರಿಯಾಣದ ಪಾಣಿಪತ್‌ನಲ್ಲಿ ನೆಲೆಸಿರುವ ರಂಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಇವರಿಂದ ಮೊಬೈಲ್ ಫೋನ್‌ಗಳು, 2,100 ರೂ. ನಗದು ಮತ್ತು ಒಂದು ಬ್ಯಾಗ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಅಜಯ್ ಪ್ರಕಾಶ್, ಎಸ್‌ಐ ಮನೀಶಾ ಕುಮಾರಿ, ಎಸ್‌ಐ ಪಾಲಿಕ್ ಮಿಂಜ್, ರಾಕೇಶ್ ಕುಮಾರ್, ಸತ್ಯೇಂದ್ರ ಪ್ರಸಾದ್, ರಾಮ್ ಪ್ರಸಾದ್, ಸಿಐಬಿ ಇನ್‌ಸ್ಪೆಕ್ಟರ್ ಅರವಿಂದ್ ಕುಮಾರ್ ರಾಮ್, ಎಎಸ್‌ಐ ಸುಶೀಲ್ ಕುಮಾರ್, ಶಶಿಕಾಂತ್ ತಿವಾರಿ, ಜಿಆರ್‌ಪಿ ಎಎಸ್‌ಐ ನಂದಲಾಲ್ ರಾಮ್, ದಿಲೀಪ್ ಕುಮಾರ್ ಪಾಲ್ ಮತ್ತು ರಾಜಕುಮಾರ್ ಪಾಸ್ವಾನ್ ಸೇರಿದಂತೆ 19 ಮಂದಿ ಪಾಲ್ಗೊಂಡಿದ್ದರು.