ರಸ್ತೆ ಕಾಮಗಾರಿ ಸ್ಥಳದಲ್ಲಿ ಮಲಗಿದ ಕಾರ್ಮಿಕ ಮಣ್ಣಿನ ರಾಶಿಗೆ ಸಿಲುಕಿ ಸಾವು; ಕೈ ಹೊರ ಬಂದಿದ್ದರಿಂದ ಬಯಲಾಯ್ತು ಘಟನೆ
ಉತ್ತರ ಪ್ರದೇಶ ಗೋರಖ್‌ಪುರದ ರಸ್ತೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಮಿಂತು ಮೃತಪಟ್ಟಿದ್ದಾರೆ. ಡಿವೈಡರ್ ಸಮತಟ್ಟು ಮಾಡುವ ವೇಳೆ ಮಣ್ಣಿನಿಂದ ಕೈ ಹೊರಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಡಂಪರ್‌ಗಳಿಂದ ಮಣ್ಣು ಸುರಿದಾಗ ಆತ ಮಣ್ಣಿನಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಮಣ್ಣಿನಡಿ ಮೃತಪಟ್ಟ ಕಾರ್ಮಿಕ -
ಲಖನೌ, ಜೂ. 5: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ (Road Construction Work) ವೇಳೆ ದಾರುಣ ಘಟನೆ (Tragic Incident) ಸಂಭವಿಸಿದ್ದು, ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಗುರುವಾರ (ಜೂನ್ 4) ನಾಲ್ಕು ಲೇನ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ಘಟನೆ ನಡೆದಿದೆ. ರಸ್ತೆ ವಿಭಜಕ ಮೇಲೆ ಮಣ್ಣನ್ನು ಸಮತಟ್ಟು ಮಾಡುವ ವೇಳೆ, ಮಣ್ಣಿನ ರಾಶಿಯಿಂದ ಮಾನವನ ಕೈ ಹೊರಗೆ ಕಾಣಿಸಿಕೊಂಡಿದ್ದು, ಸ್ಥಳೀಯರ ಅನುಮಾನಕ್ಕೆ ಕಾರಣವಾಯಿತು. ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಜೆಸಿಬಿ ಹಾಗೂ ಕಾರ್ಮಿಕರ ಸಹಾಯದಿಂದ ಮಣ್ಣನ್ನು ತೆರವುಗೊಳಿಸಿದಾಗ ವ್ಯಕ್ತಿಯ ಮೃತದೇಹ ಪತ್ತೆಯಾಯಿತು. ಈ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಜನಸಮೂಹ ಜಮಾಯಿಸಿತು. ಮೃತದೇಹದ ಸಮೀಪ ಪತ್ತೆಯಾದ ಬ್ಯಾಗ್‌ನಲ್ಲಿ ಆಹಾರ ಪದಾರ್ಥಗಳು, ದೇಶಿ ಮದ್ಯದ ಪೌಚ್, ಹಸಿರು ಮೆಣಸಿನಕಾಯಿ, ಚಿಲ್ಲಂ, ಮೊಬೈಲ್ ಚಾರ್ಜರ್ ಹಾಗೂ ಶಾಲ್ ಪತ್ತೆಯಾಗಿವೆ. ಇದರಿಂದ ಆತ ಕಾಮಗಾರಿ ಸ್ಥಳದಲ್ಲೇ ರಾತ್ರಿ ತಂಗಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳೀಯರ ಪ್ರಕಾರ, ರಾತ್ರಿ ವೇಳೆ ಮಣ್ಣು ಸಾಗಿಸುವ ಡಂಪರ್‌ಗಳು ನಿರಂತರವಾಗಿ ಓಡಾಡುತ್ತಿದ್ದವು. ಡಿವೈಡರ್ ಮೇಲೆ ನಿದ್ದೆ ಮಾಡುತ್ತಿದ್ದ ವ್ಯಕ್ತಿಯಿರುವುದನ್ನು ಗಮನಿಸದೇ ಚಾಲಕರು ಮಣ್ಣನ್ನು ಸುರಿದಿರುವ ಸಾಧ್ಯತೆ ಇದೆ. ಇದರ ಪರಿಣಾಮ ಆತ ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕೆಲವು ಗಂಟೆಗಳ ಬಳಿಕ ಸ್ಥಳಕ್ಕೆ ಬಂದ ಮಹಿಳೆಯೊಬ್ಬರು ಮೃತನನ್ನು ತಮ್ಮ ಪತಿ ಎಂದು ಗುರುತಿಸಿದ್ದಾರೆ.
ಮೀನಿನ ಹೆಸರಿನಲ್ಲಿ ಗೋಮಾಂಸ ಅಕ್ರಮ ಮಾರಾಟ: ಉತ್ತರ ಪ್ರದೇಶದಲ್ಲಿ ಕಸಾಯಿಖಾನೆಗೆ ಬೀಗ
ಮೃತ ವ್ಯಕ್ತಿಯನ್ನು ಮಿಂತು ಎಂದು ಗುರುತಿಸಲಾಗಿದ್ದು, ದೇವರಿಯಾ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಪತ್ನಿ ನೀತಾ ದೇವಿ ಪ್ರಕಾರ, ಮಿಂತು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಸುಮಾರು 10 ದಿನಗಳ ಹಿಂದೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗುಲ್ರಿಹಾ ಠಾಣೆಯ ಎಸ್‌ಎಚ್‌ಒ ಜಗದೀಶ್ ಪಾಲ್ ತಿಳಿಸಿದ್ದಾರೆ. ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವ ಈ ಘಟನೆ ರಸ್ತೆ ಕಾಮಗಾರಿಗಳಲ್ಲಿ ಸುರಕ್ಷತಾ ಕ್ರಮಗಳ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.