ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇರಳದಾದ್ಯಂತ ಭಾರಿ ಮಳೆ: ಭೂಕುಸಿತದಿಂದ ಮೂವರ ಸಾವು, ಹಲವು ಮನೆಗಳು ಜಲಾವೃತ

ಕೇರಳದಾದ್ಯಂತ ಭಾರಿ ಮಳೆಯಿಂದ ಮೂವರು ಸಾವನ್ನಪ್ಪಿದ್ದಾರೆ. ಹಲವಾರು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ರಸ್ತೆಗಳು ಮುಚ್ಚಿ ಹೋಗಿವೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿದೆ. ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕೇರಳದಾದ್ಯಂತ ಭಾರಿ ಮಳೆ: ಮೂವರು ಸಾವು

ಸಂಗ್ರಹ ಚಿತ್ರ -

ಕೇರಳ: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ (heavy rain) ಅಲ್ಲಲ್ಲಿ ಭೂಕುಸಿತ (Landslides), ಪ್ರವಾಹ (flood) ಪರಿಸ್ಥಿತಿ ನಿರ್ಮಾಣವಾಗಿದೆ. ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಪತ್ತನಂತಿಟ್ಟ, ಕೊಲ್ಲಂ, ಕೋಯಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್‌ ಜಿಲ್ಲೆಗಳಲ್ಲೂ ಮಳೆಯಿಂದ ಅಪಾರ ಹಾನಿಯಾಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹವಾಮಾನ ಇಲಾಖೆಯು ಹೆಚ್ಚಿನ ಮಳೆಯಾಗುವ ಮುನ್ಸೂಚನೆ ನೀಡಿದ್ದರಿಂದ ರಕ್ಷಣಾ ತಂಡಗಳನ್ನು ಮುಂಚಿತವಾಗಿ ಹಲವಾರು ಪ್ರದೇಶಗಳಿಗೆ ನಿಯೋಜಿಸಲಾಗಿತ್ತು ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.

ಇಡುಕ್ಕಿ ಜಿಲ್ಲೆಯ ಕುಡಯತ್ತೂರು ಬಳಿಯ ಅಡೂರ್‌ಮಾಲಾದಲ್ಲಿ ಮನೆ ಕುಸಿತವಾಗಿ ಸುಮತಿ ಎಂಬವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಅವರ ಪತಿ ಮತ್ತು ಮಗನನ್ನು ನೆರೆಹೊರೆಯವರು ರಕ್ಷಿಸಿ ತೊಡುಪುಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಮನೆ ಸಂಪೂರ್ಣ ನಾಶವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ಸುಮತಿ ಅವರ ಶವ ಪತ್ತೆಯಾಗಿದೆ.

ಭಾರಿ ಮಳೆಯಿಂದ ಕೇರಳಂನಲ್ಲಿ ತುಂಬು ಹರಿಯುತ್ತಿರುವ ನದಿಗಳು:



ಇನ್ನೊಂದು ಪ್ರಕರಣದಲ್ಲಿ ಕೊಟ್ಟಾಯಂ ಜಿಲ್ಲೆಯಲ್ಲಿ, ಜಾನಿ ಎಂಬವರ ಮಗ ಜೋಸೆಫ್ ಎಂಬಾತ ಸಾವನ್ನಪ್ಪಿದ್ದಾನೆ. ಪೂಂಜಾರ್‌ನ ಪಯ್ಯನಿತೋಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಜೋಸೆಫ್ ಮತ್ತು ಅವರ ತಾಯಿ ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದು, ಜೋಸೆಫ್ ನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ. ಆತನ ತಾಯಿಗಾಗಿ ಹುಡುಕಾಟ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ʻಆರ್‌ಸಿಬಿಯ ನಿಜವಾದ ರಾಣಿʼ: ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಅನನ್ಯಾ ಬಿರ್ಲಾ!

ಇಡುಕ್ಕಿಯ ವಾಗಮೋನ್ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತ ಪ್ರಕರಣದಲ್ಲಿ ಕೊಟ್ಟಾಯಂನ ವೈಕೋಮ್ ಮೂಲದ ಪ್ರಭಾಕರನ್ ನಾಯರ್ ಎಂಬವರು ಸಾವನ್ನಪ್ಪಿದ್ದಾರೆ. ಸಂಬಂಧಿಕರ ಮನೆಯಲ್ಲಿ ಮಲಗಿದ್ದ ಅವರು ಭೂಕುಸಿತದಿಂದ ಸಾವನ್ನಪ್ಪಿದ್ದಾರೆ. ಹಲವಾರು ಗಂಟೆಗಳ ಕಾಲ ಹುಡುಕಾಟದ ಬಳಿಕ ಅವರ ಶವ ಪತ್ತೆಯಾಗಿದೆ.

ಇಡುಕ್ಕಿಯ ವಿವಿಧ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ್ಪುತರಾದಲ್ಲಿ ನಿಲ್ಲಿಸಿದ್ದ ಪೊಲೀಸ್ ಜೀಪ್ ಭೂಕುಸಿತದಲ್ಲಿ ಸಿಲುಕಿ ಹಾನಿಗೀಡಾಗಿದೆ. ಪುಲ್ಲಕಾಯಾರ್ ನದಿ ಉಕ್ಕಿ ಹರಿದು ಕೊಕ್ಕಯಾರ್ ಕೆಳಮಟ್ಟದ ಕ್ರಾಸಿಂಗ್ ಅನ್ನು ಮುಳುಗಿಸಿದೆ. ಸುಮಾರು ಆರು ಮನೆಗಳು ಜಲಾವೃತಗೊಂಡಿದ್ದು, ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರಿ ಮಳೆಯಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಪ್ಪನ- ವಾಝವರ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ. ವಂಡಿಪೆರಿಯಾರ್‌ನಲ್ಲಿ ಚೊಟ್ಟುಪಾರ ಹೊಳೆಯಲ್ಲಿ ನೀರು ಹೆಚ್ಚಳವಾಗಿ ರಾಷ್ಟ್ರೀಯ ಹೆದ್ದಾರಿ 183 ರಲ್ಲಿ ನೀರು ನಿಂತಿದೆ. ನೆಲ್ಲಿಮಲದಲ್ಲಿ ರಸ್ತೆ ನಿರ್ಬಂಧಿಸಲಾಗಿದೆ. ಜಿಲ್ಲೆಯ ಸಣ್ಣ ಅಣೆಕಟ್ಟುಗಳ ಕವಾಟಗಳನ್ನು ತೆರೆಯುವುದಾಗಿ ಅಧಿಕಾರಿಗಳು ಘೋಷಿಸಿದರು.

ಕೊಟ್ಟಾಯಂನಲ್ಲಿ ಭಾರೀ ಮಳೆಯಿಂದಾಗಿ ಎರಟ್ಟುಪೆಟ್ಟ, ಕಾಂಜಿರಪ್ಪಳ್ಳಿ, ಕೂಟ್ಟಿಕಲ್ ಮತ್ತು ಎರುಮೇಲಿಯಲ್ಲಿ ಪ್ರವಾಹ ಉಂಟಾಗಿ, ವಸತಿ ಪ್ರದೇಶಗಳು ಜಲಾವೃತಗೊಂಡಿವೆ. ಸಂಚಾರಕ್ಕೆ ಅಡ್ಡಿಯಾಗಿದೆ. ಎರಟ್ಟುಪೆಟ್ಟದಲ್ಲಿ ರಾತ್ರಿಯಿಡೀ ಮಳೆ ಸುರಿದು ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದೆ. ನಡಕ್ಕಲ್ ಮತ್ತು ಮುರಿಕ್ಕೋಲಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮನೆಗಳು ಜಲಾವೃತಗೊಂಡಿದ್ದು, ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸ್ಥಳೀಯರ ಸಹಾಯದಿಂದ ರಕ್ಷಣಾ ಸಿಬ್ಬಂದಿ, ಮನೆಗಳ ಮೇಲಿನ ಮಹಡಿಗಳಲ್ಲಿ ಸಿಲುಕಿಕೊಂಡಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಈ ಪ್ರದೇಶದಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೂಟ್ಟಿಕಲ್, ಮುಂಡಕ್ಕಾಯಂನಲ್ಲಿ ಮಣಿಮಾಲ ಮತ್ತು ಪುಲ್ಲಕಾಯಾರ್ ನದಿಗಳು ಉಕ್ಕಿ ಹರಿಯುತ್ತಿದೆ. ಕೂಟ್ಟಿಕಲ್ ಕಾಸ್‌ವೇ ಮತ್ತು ಕೆಳಮಟ್ಟದ ಕ್ರಾಸಿಂಗ್ ಮುಳುಗಿ, ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಮುಂಡಕ್ಕಾಯಂ ಕಾಸ್‌ವೇ ನೀರಿನಿಂದ ಆವೃತವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.

ಪತ್ತನಂತಿಟ್ಟ ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿವೆ. ರಾನ್ನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ರಾನ್ನಿ ಶಾಸಕ ಪಳಕುಲಂ ಮಧು, ನದಿ ಮಟ್ಟ ಅಪಾಯಕಾರಿಯಾಗಿದ್ದು, ಹಲವಾರು ಮನೆ ಮತ್ತು ಅಂಗಡಿಗಳು ಜಲಾವೃತಗೊಂಡಿವೆ. ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ರಾನ್ನಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ದೋಣಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಪರಿಹಾರ ಶಿಬಿರಗಳನ್ನು ಕೂಡ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಕೋಝಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಸಣ್ಣಪುಟ್ಟ ಭೂಕುಸಿತಗಳು ಉಂಟಾಗಿವೆ. ಕೋಝಿಕ್ಕೋಡ್‌ನ ಚಾಲಿಯಂನಲ್ಲಿ ಒಂದು ಮೀನುಗಾರಿಕಾ ದೋಣಿ ಅಲೆಗಳಲ್ಲಿ ಸಿಲುಕಿಕೊಂಡಿತ್ತು. ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸಲಾಗಿದೆ.

ರಸ್ತೆ, ಹಾಸ್ಟೆಲ್ ಬಳಿಕ ಇದೀಗ ಬಾತ್‌ರೂಂಗೂ ನುಗ್ಗಿದ ಮೊಸಳೆ; ರಕ್ಷಣಾ ಕಾರ್ಯಾಚರಣೆಯ ವಿಡಿಯೊ ವೈರಲ್‌

ಕೇರಳದ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದ್ದು, ಹಲವಾರು ಭಾಗಗಳಲ್ಲಿ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.