ಟೋಲ್ ಕಳ್ಳಾಟಕ್ಕೆ ಕೇಂದ್ರದಿಂದ ಬ್ರೇಕ್: ನಂಬರ್ ಪ್ಲೇಟ್ ಮುಚ್ಚಿದರೆ 6 ಪಟ್ಟು ದಂಡ ಬೀಳುತ್ತೆ ಹುಷಾರ್
ಟೋಲ್ ಹಣ ಉಳಿಸಲು ವಾಹನದ ನಂಬರ್ ಪ್ಲೇಟ್ ಮರೆಮಾಚಿದರೆ ಅಥವಾ ಫಾಸ್ಟ್ಟ್ಯಾಗ್ ತೆಗೆದರೆ ಇನ್ಮುಂದೆ ಜೇಬಿಗೆ ಭಾರಿ ಕತ್ತರಿ ಬೀಳಲಿದೆ. ಬ್ಯಾರಿಯರ್ ಇಲ್ಲದ MLFF ಟೋಲ್ ಪ್ಲಾಜಾಗಳಲ್ಲಿ ಬೇಕೆಂದೇ ಟೋಲ್ ತಪ್ಪಿಸಿಕೊಳ್ಳುವವರಿಗೆ ಅಸಲಿ ಶುಲ್ಕದ ಜೊತೆಗೆ 5 ಪಟ್ಟು ದಂಡ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ಅಂದರೆ 100 ರೂ. ಟೋಲ್ ಕಟ್ಟುವ ಬದಲು ಬರೋಬ್ಬರಿ 600 ರೂ. ಕಟ್ಟಬೇಕಾಗುತ್ತದೆ.
ಸಂಗ್ರಹ ಚಿತ್ರ -
ನವದೆಹಲಿ, ನ.28: ಬ್ಯಾರಿಯರ್ ಇಲ್ಲದ MLFF ಟೋಲ್ ಪ್ಲಾಜಾಗಳಲ್ಲಿ ಟೋಲ್ ಹಣ ತಪ್ಪಿಸಿಕೊಳ್ಳಲು ವಾಹನದ ನಂಬರ್ ಪ್ಲೇಟ್ ಮರೆಮಾಚಿದರೆ, ತಿರುಚಿದರೆ ಅಥವಾ ಫಾಸ್ಟ್ಟ್ಯಾಗ್ (FASTag) ಇಲ್ಲದೆ ದಾಟಿದರೆ ಇನ್ಮುಂದೆ ಜೇಬಿಗೆ ಭಾರಿ ಪೆಟ್ಟು ಬೀಳಲಿದೆ. ಅಸಲಿ ಟೋಲ್ ಶುಲ್ಕದ ಜೊತೆಗೆ 5 ಪಟ್ಟು ಹೆಚ್ಚುವರಿ ದಂಡ ವಿಧಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮುಂದಾಗಿದ್ದು, ಒಟ್ಟು 6 ಪಟ್ಟು ಹಣ ವಸೂಲಿ ಮಾಡಲಾಗುತ್ತದೆ. ಇದರಿಂದ 100 ರೂ. ಟೋಲ್ ಕಟ್ಟುವ ಬದಲು 500 ರೂ. ದಂಡ ಸೇರಿ ಒಟ್ಟು 600 ರೂ. ಪಾವತಿಸಬೇಕಾಗುತ್ತದೆ.
ಗ್ಯಾಂಟ್ರಿಗಳಲ್ಲಿರುವ ಹೈ-ಟೆಕ್ ಫಾಸ್ಟ್ಟ್ಯಾಗ್ ರೀಡರ್ಗಳು ಮತ್ತು ANPR ಕ್ಯಾಮೆರಾಗಳು ವಾಹನಗಳನ್ನು ಗುರುತಿಸಿ ತಂತ್ರಜ್ಞಾನದ ಮೂಲಕವೇ ನಿಯಮ ಉಲ್ಲಂಘನೆಯನ್ನು ಪತ್ತೆ ಹಚ್ಚುತ್ತವೆ. ಹಾಲಿ ಇರುವ ಹಾಗೂ ಹೊಸದಾಗಿ ಆರಂಭವಾಗುವ ಎಲ್ಲಾ MLFF ಟೋಲ್ ಪ್ಲಾಜಾಗಳಲ್ಲಿ ಈ ನಿಯಮ ಅನ್ವಯವಾಗಲಿದ್ದು, ಅನಗತ್ಯ ದಂಡ ತಪ್ಪಿಸಿಕೊಳ್ಳಲು ಸವಾರರು ಸ್ಪಷ್ಟ ನಂಬರ್ ಪ್ಲೇಟ್ ಮತ್ತು ಸರಿಯಾಗಿ ಕೆಲಸ ಮಾಡುವ ಫಾಸ್ಟ್ಟ್ಯಾಗ್ ಇಟ್ಟುಕೊಳ್ಳುವುದು ಒಳ್ಳೆಯದು.
ಇನ್ಮುಂದೆ ಫಾಸ್ಟ್ಟ್ಯಾಗ್ ಬ್ಯಾಂಕ್ ಬದಲಾಯಿಸುವುದು ತೀರಾ ಸುಲಭ: 'OneTag' ವ್ಯವಸ್ಥೆ ಪರಿಚಯಿಸಿದ ನಿತಿನ್ ಗಡ್ಕರಿ!
ಯಾರಿಗೆ ಬೀಳುತ್ತೆ 6 ಪಟ್ಟು ಬಿಲ್?
ಹೊಸ ನಿಯಮದ ಪ್ರಕಾರ, ತಪ್ಪಿತಸ್ಥರು ಅಸಲಿ ಟೋಲ್ ಜೊತೆಗೆ 5 ಪಟ್ಟು ದಂಡ ಸೇರಿ ಒಟ್ಟು 6 ಪಟ್ಟು ಹಣ ಪಾವತಿಸಬೇಕು. ಅಂದರೆ 100 ರೂ. ಟೋಲ್ ತಪ್ಪಿಸಿಕೊಂಡರೆ, 500 ರೂ. ದಂಡ ಸೇರಿ ಒಟ್ಟು 600 ರೂ. ಕಟ್ಟಬೇಕಾಗುತ್ತದೆ. ಮುಂಭಾಗ, ಹಿಂಭಾಗ ಅಥವಾ ಎರಡೂ ನಂಬರ್ ಪ್ಲೇಟ್ಗಳನ್ನು ಮರೆಮಾಚಿರುವುದು ಅಥವಾ ತಿರುಚಿರುವುದು ಕಂಡುಬಂದು, ಫಾಸ್ಟ್ಟ್ಯಾಗ್ ಕೂಡ ಸ್ಕ್ಯಾನ್ ಆಗದಿದ್ದರೆ ಈ ದಂಡ ಅನ್ವಯವಾಗುತ್ತದೆ.
ಟೋಲ್ ತಪ್ಪಿಸುವ ಉದ್ದೇಶದಿಂದಲೇ ಫಾಸ್ಟ್ಟ್ಯಾಗ್ ಅಂಟಿಸದೆ ವಾಹನ ಚಲಾಯಿಸುವವರಿಗೂ ಇದೇ ದಂಡ ಬೀಳಲಿದೆ. ಹಳೆಯ ಹಾಗೂ ಮುಂದೆ ಆರಂಭವಾಗುವ ಎಲ್ಲಾ ಮಲ್ಟಿ-ಲೇನ್ ಫ್ರೀ ಫ್ಲೋ (MLFF) ಟೋಲ್ ಪ್ಲಾಜಾಗಳಿಗೂ ಈ ನಿಯಮ ಅನ್ವಯವಾಗಲಿದೆ.
ನಂಬರ್ ಪ್ಲೇಟ್ ಇಲ್ಲದಿದ್ದರೂ ಹಿಡಿಯುವುದು ಹೇಗೆ?
MLFF ವ್ಯವಸ್ಥೆಯಲ್ಲಿ ವಾಹನಗಳು ನಿಲ್ಲದೆ ಸಾಗಬಹುದು. ಮೇಲ್ಭಾಗದ ಗ್ಯಾಂಟ್ರಿಗಳಲ್ಲಿರುವ FASTag ರೀಡರ್ ಮತ್ತು ANPR ಕ್ಯಾಮೆರಾಗಳು ಶುಲ್ಕ ಕಡಿತಗೊಳಿಸುತ್ತವೆ. ಒಂದು ವೇಳೆ ನಂಬರ್ ಪ್ಲೇಟ್ ಮತ್ತು ಫಾಸ್ಟ್ಟ್ಯಾಗ್ ಎರಡೂ ರೀಡ್ ಆಗದಿದ್ದರೆ, NHAI ಸಂಸ್ಥೆಯು AI ಆಧಾರಿತ ‘ವೆಹಿಕಲ್ ಫಿಂಗರ್ಪ್ರಿಂಟಿಂಗ್’ ತಂತ್ರಜ್ಞಾನ ಮತ್ತು VAHAN ಡೇಟಾಬೇಸ್ ಬಳಸಿ ವಾಹನದ ಮಾಲೀಕರನ್ನು ಪತ್ತೆ ಹಚ್ಚಲಿದೆ. ಮೇ 1ರಂದು ಗುಜರಾತ್ನ ಚೋರ್ಯಾಸಿಯಲ್ಲಿ ದೇಶದ ಮೊದಲ ಬ್ಯಾರಿಯರ್-ಮುಕ್ತ ಟೋಲ್ ಆರಂಭವಾಗಿದ್ದು, ಸದ್ಯ ದೆಹಲಿಯ ಮುಂಡ್ಕಾ ಸೇರಿ ಇನ್ನೂ ಎಂಟು ಕಡೆಗಳಿಗೆ ವಿಸ್ತರಿಸಲಾಗಿದೆ.
ಫಾಸ್ಟ್ಟ್ಯಾಗ್ನಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಏನಾಗುತ್ತದೆ?
ಫಾಸ್ಟ್ಟ್ಯಾಗ್ ವಹಿವಾಟು ವಿಫಲವಾದ ಮಾತ್ರಕ್ಕೆ ಅದನ್ನು ಉದ್ದೇಶಪೂರ್ವಕ ಟೋಲ್ ವಂಚನೆ ಎಂದು ಪರಿಗಣಿಸಲಾಗುವುದಿಲ್ಲ. ಹಳೆಯ ನಿಯಮದಂತೆ, ಬಾಕಿ ಉಳಿದ ಟೋಲ್ಗೆ ವಾಹನ ಮಾಲೀಕರಿಗೆ ಇ-ನೋಟಿಸ್ ಕಳುಹಿಸಲಾಗುತ್ತದೆ. ನೋಟಿಸ್ ಬಂದ 72 ಗಂಟೆಗಳ ಒಳಗೆ ಹಣ ಪಾವತಿಸಿದರೆ ಅಸಲಿ ಟೋಲ್ ಶುಲ್ಕ ಮಾತ್ರ ಕಟ್ಟಿದರೆ ಸಾಕು. 72 ಗಂಟೆ ಮೀರಿದರೆ ಶುಲ್ಕ ದುಪ್ಪಟ್ಟಾಗುತ್ತದೆ.