ವಿಶ್ವದ ಬಲಿಷ್ಠ ದೇಶಗಳ ಪ್ರಧಾನಿಗಳ ವೇತನ ಎಷ್ಟು? ಅತೀ ಹೆಚ್ಚು ಸಂಬಳ ಪಡೆಯುವವರು ಯಾರು?
ವಿಶ್ವದ ವಿವಿಧ ದೇಶಗಳನ್ನು ಮುನ್ನಡೆಸುವ ನಾಯಕರು ಪಡೆಯುವ ವಾರ್ಷಿಕ ವೇತನದ ಕುರಿತ ಹೊಸ ವರದಿಯೊಂದು ಹೊರಬಿದ್ದಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಪ್ರಪಂಚದ ಬಲಿಷ್ಠ ರಾಷ್ಟ್ರಗಳ ಮುಖ್ಯಸ್ಥರ ವೇತನಕ್ಕಿಂತ ಸಿಂಗಾಪುರ ಪ್ರಧಾನಿಯ ವಾರ್ಷಿಕ ವೇತನವೇ ಅತಿ ಹೆಚ್ಚಾಗಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ದೇಶವೊಂದನ್ನು ಮುನ್ನಡೆಸುವುದು ಬರಿ ಅಧಿಕಾರವಷ್ಟೇ ಅಲ್ಲ, ಅದು ಜವಾಬ್ದಾರಿಯ ದೊಡ್ಡ ಹೊಣೆ. ಆದರೆ, ಜಗತ್ತಿನ ಪ್ರಮುಖ ದೇಶಗಳ ನಾಯಕರು ಈ ಜವಾಬ್ದಾರಿಗೆ ಪಡೆಯುವ ವೇತನ ಎಷ್ಟು ಗೊತ್ತಾ? (Highest paid pm in the world) ಕೇವಲ ರಾಜಕೀಯ ಪ್ರಭಾವ ಅಥವಾ ದೇಶದ ಗಾತ್ರದಿಂದಷ್ಟೇ ನಾಯಕರ ಮೌಲ್ಯ ನಿರ್ಧಾರವಾಗುವುದಿಲ್ಲ ಎಂಬುದಕ್ಕೆ ಜಾಗತಿಕ ನಾಯಕರ ಸಂಬಳದ ಪಟ್ಟಿಯೇ ಸಾಕ್ಷಿ. ಬಲಿಷ್ಠ ರಾಷ್ಟ್ರಗಳ ಮುಖ್ಯಸ್ಥರನ್ನೂ ಹಿಂದಿಕ್ಕಿ, ಪುಟ್ಟ ದೇಶ ಸಿಂಗಾಪುರದ ಪ್ರಧಾನಿ ಪಡೆಯುತ್ತಿರುವ ವಾರ್ಷಿಕ ವೇತನವು ಈಗ ವಿಶ್ವದಾದ್ಯಂತ ಕೂತುಹಲವನ್ನು ಹುಟ್ಟುಹಾಕಿದೆ.
ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳನ್ನೇ ಆಳುವ ನಾಯಕರ ಸಂಬಳವನ್ನು ಕೇಳಿದರೆ ಯಾರಾದರೂ ಬೆರಗಾಗುವುದು ಖಂಡಿತ, ಆದರೆ, ಜಗತ್ತಿನ ಜಿಡಿಪಿಯಲ್ಲಿ ದೊಡ್ಡ ಮಟ್ಟದ ಪಾಲನ್ನ ಹೊಂದಿರುವ ಪ್ರಭಾವಿ ನಾಯಕರನ್ನು ಹಿಂದಿಕ್ಕಿ ಪುಟ್ಟ ದೇಶವೊಂದರ ಪ್ರಧಾನಿ ಪಡೆಯುತ್ತಿರುವ ವಾರ್ಷಿಕ ವೇತನ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಅಮೆರಿಕದ ಅಧ್ಯಕ್ಷನಿಗಿಂತಲೂ ಸರಿಸುಮಾರು 4 ಪಟ್ಟು ಹೆಚ್ಚು ಸಂಬಳ ಪಡೆಯುವ ಮೂಲಕ ಸಿಂಗಾಪುರದ ಪ್ರಧಾನಿ ಇಡೀ ಜಗತ್ತೇ ಹುಬ್ಬೇರಿಸುವಂತೆ ಮಾಡಿದ್ದಾರೆ. ವರ್ಷಕ್ಕೆ ಬರೋಬ್ಬರಿ 27 ಕೋಟಿ ರೂಪಾಯಿ ವಾರ್ಷಿಕ ಸಂಬಳವನ್ನು ಇವರು ಪಡೆಯುತ್ತಾರೆ. ಹಾಗಾದರೆ ಯಾವ ದೇಶದ ಪ್ರಧಾನಿಗೆ ಎಷ್ಟು ಸಂಬಳವಿದೆ? ಮೋದಿ ಪಡೆದುಕೊಳ್ಳುವ ಭತ್ಯೆ ಎಷ್ಟು? ಇಲ್ಲಿದೆ ಮಾಹಿತಿ.
ಸಿಂಗಾಪುರ ಪ್ರಧಾನಿಗೆ ವಾರ್ಷಿಕ 27 ಕೋಟಿ ರೂಪಾಯಿ!
ಜಾಗತಿಕ ನಾಯಕರ ವೇತನ ಪಟ್ಟಿಯಲ್ಲಿ ಸಿಂಗಪುರದ ಪ್ರಧಾನಿ ಅತ್ಯಂತ ಎತ್ತರದ ಸ್ಥಾನದಲ್ಲಿದ್ದಾರೆ. ಸಿಂಗಪುರ ಪ್ರಧಾನಿಯ ವಾರ್ಷಿಕ ವೇತನವು ಸರಿಸುಮಾರು 27 ಕೋಟಿರೂಪಾಯಿ ಅಂದಾಜು $2.2 ಮಿಲಿಯನ್ ಸಿಂಗಾಪುರ್ ಡಾಲರ್ ಆಗಿದೆ. ಇದು ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರವಾದ ಅಮೆರಿಕಾದ ಅಧ್ಯಕ್ಷ ಪಡೆಯುವ ವೇತನಕ್ಕಿಂತಲೂ 4 ಪಟ್ಟು ಹೆಚ್ಚಾಗಿದೆ. ಸಾಮಾನ್ಯವಾಗಿ ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಡೆಯಲು, ಉನ್ನತ ಪ್ರತಿಭೆಗಳನ್ನು ಸರ್ಕಾರಿ ರಂಗಕ್ಕೆ ಆಕರ್ಷಿಸಲು ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಸಿಂಗಾಪುರ ತನ್ನ ನಾಯಕರಿಗೆ ಮತ್ತು ಸಚಿವರಿಗೆ ಖಾಸಗಿ ವಲಯದ ಉನ್ನತ ಸಿಇಒಗಳ ಮಟ್ಟದಲ್ಲೇ ಅಧಿಕ ವೇತನವನ್ನು ನೀಡುತ್ತದೆ.
ಕೆನಡಾ
ಕೆನಡಾ ಪ್ರಧಾನ ಮಂತ್ರಿ ವಾರ್ಷಿಕ ವೇತನ ಸುಮಾರು 2.4 ಕೋಟಿ ರೂಪಾಯಿ (400,000 CAD).ಕೆನಡಾ ಸಂತ್ತಿನ ನಿಯಮಗಳ ಪ್ರಕಾರ ಪ್ರಧಾನಿಯ ವೇತನವನ್ನು ಪ್ರತಿವರ್ಷ ಆರ್ಥಿಕ ಸೂಚ್ಯಂಕಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ.
ಭಾರತ
ಭಾರತದ ಪ್ರಧಾನ ಮಂತ್ರಿಯ ವಾರ್ಷಿಕ ಮೂಲ ವೇತನ ಮತ್ತು ಭತ್ಯೆಗಳು ಸೇರಿ ಸುಮಾರು 24 ರಿಂದ 28 ಲಕ್ಷ ರೂಪಾಯಿ, ಮಾಸಿಕ ಅಂದಾಜು ₹2 ಲಕ್ಷಕ್ಕಿಂತ ಸ್ವಲ್ಪ ಹೆಚ್ಚು. ಜಾಗತಿಕ ನಾಯಕರಿಗೆ ಹೋಲಿಸಿದರೆ ಇದು ಕಡಿಮೆಯಾಗಿದ್ದರೂ, ನಿವಾಸ, ಭದ್ರತೆ ಮತ್ತು ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಅಮೆರಿಕ
ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷರ ವಾರ್ಷಿಕ ವೇತನ 3.3 ಕೋಟಿ ರೂಪಾಯಿ ($400,000 USD). 2001 ರಿಂದಲೂ ಅಮೆರಿಕ ಅಧ್ಯಕ್ಷರ ಮೂಲ ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲವಾದರೂ, ಅಧಿಕೃತ ವೆಚ್ಚಗಳಿಗಾಗಿ ಹೆಚ್ಚುವರಿ ಭತ್ಯೆಗಳನ್ನು ನೀಡಲಾಗುತ್ತದೆ.
ಪಾಕಿಸ್ತಾನ
ಪಾಕಿಸ್ತಾನದ ಪ್ರಧಾನ ಮಂತ್ರಿಯ ವಾರ್ಷಿಕ ಮೂಲ ವೇತನ ಸರಿಸುಮಾರು 28 ಲಕ್ಷ ಪಾಕಿಸ್ತಾನಿ ರೂಪಾಯಿ (PKR) ಆಗಿದೆ (ಮಾಸಿಕ ಅಂದಾಜು 2 ಲಕ್ಷ PKR). ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಇದು ವರ್ಷಕ್ಕೆ 8.27 ಲಕ್ಷ ರೂಪಾಯಿ ಮಾತ್ರವಾಗುತ್ತದೆ. ಪಾಕಿಸ್ತಾನದ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಹಣದುಬ್ಬರದ ಹಿನ್ನೆಲೆಯಲ್ಲಿ, ಅಲ್ಲಿನ ಪ್ರಧಾನಿಯ ವೇತನವು ವಿಶ್ವದ ಇತರ ದೇಶಗಳ ನಾಯಕರಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಆದಾಗ್ಯೂ, ಪ್ರಧಾನಿಗೆ ಅಧಿಕೃತ ನಿವಾಸ, ಭದ್ರತೆ, ಪ್ರಯಾಣ ಹಾಗೂ ಆಡಳಿತಾತ್ಮಕ ವೆಚ್ಚಗಳಿಗಾಗಿ ಪ್ರತ್ಯೇಕ ಭತ್ಯೆಗಳನ್ನು ಒದಗಿಸಲಾಗುತ್ತದೆ.
ಚೀನಾ
ಚೀನಾದ ಅಧ್ಯಕ್ಷರ ವಾರ್ಷಿಕ ಮೂಲ ವೇತನ ಸರಿಸುಮಾರು 22 ಲಕ್ಷ ರೂಪಾಯಿ (ಅಂದಾಜು $22,000 USD / 1.5 ಲಕ್ಷ ಯುವಾನ್). ಕಮ್ಯುನಿಸ್ಟ್ ತತ್ತ್ವಶಾಸ್ತ್ರದ ಪ್ರಕಾರ ಚೀನಾದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಅಧಿಕೃತವಾಗಿ ಹೆಚ್ಚಿನ ವೇತನ ನೀಡಲಾಗುವುದಿಲ್ಲ. ಆದಾಗ್ಯೂ, ಅಧ್ಯಕ್ಷರ ವಸತಿ, ಪ್ರಯಾಣ, ಭದ್ರತೆ ಮತ್ತು ದೈನಂದಿನ ಎಲ್ಲಾ ವೆಚ್ಚಗಳನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತದೆ.
ದಕ್ಷಿಣ ಕೊರಿಯಾ
ದಕ್ಷಿಣ ಕೊರಿಯಾದ ಅಧ್ಯಕ್ಷರ ವಾರ್ಷಿಕ ವೇತನ ಸರಿಸುಮಾರು 1.5 ಕೋಟಿ ರೂಪಾಯಿ (ಅಂದಾಜು 240 ಮಿಲಿಯನ್ KRW / $180,000 USD). ದೇಶದ ಉನ್ನತ ಜೀವನ ವೆಚ್ಚ ಮತ್ತು ಬಲವಾದ ಆರ್ಥಿಕತೆಗೆ ಅನುಗುಣವಾಗಿ ಅಧ್ಯಕ್ಷರ ವೇತನ ಮತ್ತು ಭತ್ಯೆಗಳನ್ನು ಕಾನೂನುಬದ್ಧವಾಗಿ ನಿಗದಿಪಡಿಸಲಾಗಿದೆ.
ಉತ್ತರ ಕೊರಿಯಾ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರಿಗೆ ಯಾವುದೇ ನಿರ್ದಿಷ್ಟ ಅಥವಾ ಅಧಿಕೃತ ವೇತನ ಶ್ರೇಣಿ ಇಲ್ಲ. ದೇಶದ ಸಂಪೂರ್ಣ ಆಸ್ತಿ ಮತ್ತು ಖಜಾನೆಯ ಮೇಲೆ ಅವರದೇ ಏಕಸ್ವಾಮ್ಯವಿರುವುದರಿಂದ, ಅವರ ವಾರ್ಷಿಕ ಆದಾಯ ಅಥವಾ ಖರ್ಚಿನ ಅಧಿಕೃತ ಮಾಹಿತಿಯನ್ನು ಸರ್ಕಾರ ಎಲ್ಲೂ ಪ್ರಕಟಿಸುವುದಿಲ್ಲ. ಸರಳವಾಗಿ ಹೇಳುವುದಾದರೆ, ಇಡೀ ದೇಶದ ಸಂಪತ್ತೇ ಅವರ ನಿಯಂತ್ರಣದಲ್ಲಿರುತ್ತದೆ.
ಹಾಂಗ್ ಕಾಂಗ್
ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಾಹಕರು ಜಾಗತೀಕವಾಗಿ ಎರಡನೇ ಅತಿಹೆಚ್ಚು ವೇತನ ಪಡೆಯುವ ನಾಯಕರಾಗಿದ್ದಾರೆ. ಇವರ ವಾರ್ಷಿಕ ವೇತನ ಸುಮಾರು 5.5 ಕೋಟಿ ರೂಪಾಯಿ ($670,000 USD). ಸಿಂಗಾಪುರದ ಮಾದರಿಯಲ್ಲೇ ಇಲ್ಲೂ ಉನ್ನತ ಮಟ್ಟದ ಆಡಳಿತಾತ್ಮಕ ಜವಾಬ್ದಾರಿಗೆ ತಕ್ಕಂತೆ ಹೆಚ್ಚಿನ ವೇತನ ನಿಗದಿಪಡಿಸಲಾಗಿದೆ.
ಸ್ವಿಟ್ಜರ್ಲೆಂಡ್
ಸ್ವಿಟ್ಜರ್ಲೆಂಡ್‌ನ ಒಕ್ಕೂಟದ ಅಧ್ಯಕ್ಷರು (President of the Swiss Confederation) ವಾರ್ಷಿಕವಾಗಿ ಸರಿಸುಮಾರು 4.5 ಕೋಟಿ ರೂಪಾಯಿ (495,000 CHF) ವೇತನ ಪಡೆಯುತ್ತಾರೆ. ದೇಶದ ಉನ್ನತ ಜೀವನ ವೆಚ್ಚ ಮತ್ತು ಅಲ್ಲಿನ ಶಕ್ತಿಶಾಲಿ ಆರ್ಥಿಕತೆಗೆ ಅನುಗುಣವಾಗಿ ಅಧ್ಯಕ್ಷರ ವೇತನವನ್ನು ನಿಗದಿ ಮಾಡಲಾಗಿದೆ.
ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ವಾರ್ಷಿಕವಾಗಿ ಸುಮಾರು 3.2 ಕೋಟಿ ರೂಪಾಯಿ (590,000 AUD) ಗಳಿಸುತ್ತಾರೆ. ದೇಶದ ಸಂಸದೀಯ ಮಂಡಳಿಯು ಜಾಗತಿಕ ಮಾನದಂಡಗಳು ಮತ್ತು ಆರ್ಥಿಕ ಮಾನದಂಡಗಳನ್ನು ಆಧರಿಸಿ ಇವರ ವೇತನವನ್ನು ನಿಯಮಿತವಾಗಿ ಪರಿಷ್ಕರಿಸುತ್ತದೆ.
ನಾರ್ವೆ
ನಾರ್ವೆಯ ಪ್ರಧಾನ ಮಂತ್ರಿಗಳು ವರ್ಷಕ್ಕೆ ಸುಮಾರು 1.5 ರಿಂದ 1.8 ಕೋಟಿ ರೂಪಾಯಿ (1.8 ಮಿಲಿಯನ್ NOK) ವೇತನ ಪಡೆಯುತ್ತಾರೆ. ನಾರ್ವೆ ತನ್ನ ನಾಯಕರಿಗೆ ಅತಿಯಾದ ವೇತನ ನೀಡದೆ, ದೇಶದ ಸಾಮಾನ್ಯ ಜನರ ಆದಾಯದ ನಡುವೆ ಸಮತೋಲನ ಕಾಯ್ದುಕೊಳ್ಳುವ ಸಾಮಾಜಿಕ ಮಾದರಿಯನ್ನು ಅನುಸರಿಸುತ್ತದೆ.
ಐರ್ಲೆಂಡ್
ಐರ್ಲೆಂಡ್‌ನ ಪ್ರಧಾನ ಮಂತ್ರಿಗಳು (Taoiseach) ವಾರ್ಷಿಕವಾಗಿ ಸರಿಸುಮಾರು 2.1 ಕೋಟಿ ರೂಪಾಯಿ (€230,000) ವೇತನವನ್ನು ಪಡೆಯುತ್ತಾರೆ. ಯುರೋಪಿಯನ್ ಯೂನಿಯನ್‌ನ ಇತರ ಪ್ರಮುಖ ನಾಯಕರಿಗೆ ಹೋಲಿಸಿದರೆ ಇವರ ವೇತನ ಸಮಾನ ಮಟ್ಟದಲ್ಲಿದೆ.
ನ್ಯೂಜಿಲೆಂಡ್
ನ್ಯೂಜಿಲೆಂಡ್ ಪ್ರಧಾನಿಯ ವಾರ್ಷಿಕ ವೇತನ ಸರಿಸುಮಾರು 2.4 ಕೋಟಿ ರೂಪಾಯಿ (470,000 NZD). ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಸಾರ್ವಜನಿಕ ವಲಯದ ವೇತನ ಶ್ರೇಣಿಗೆ ಅನುಗುಣವಾಗಿ ಇವರ ಸಂಬಳವನ್ನು ನಿಗದಿಪಡಿಸಲಾಗುತ್ತದೆ.
ಬ್ರಿಟನ್
ಬ್ರಿಟನ್ ಪ್ರಧಾನ ಮಂತ್ರಿಗಳು ವರ್ಷಕ್ಕೆ ಸುಮಾರು 1.7 ಕೋಟಿ ರೂಪಾಯಿ (£167,000) ಗಳಿಸುತ್ತಾರೆ. ಈ ಮೊತ್ತದಲ್ಲಿ ಅವರು ಸಂಸದರಾಗಿ ಪಡೆಯುವ ವೇತನ ಮತ್ತು ಪ್ರಧಾನಿಯಾಗಿ ಪಡೆಯುವ ಅಧಿಕೃತ ಭತ್ಯೆ ಎರಡೂ ಸೇರಿವೆ.
ವೇತನದಲ್ಲಿ ಯಾಕಿಷ್ಟು ದೊಡ್ಡ ವ್ಯತ್ಯಾಸ?
ವಿವಿಧ ದೇಶಗಳು ತಮ್ಮ ನಾಯಕರಿಗೆ ನೀಡುವ ವೇತನದಲ್ಲಿ ಈ ಮಟ್ಟದ ವ್ಯತ್ಯಾಸವಿರಲು ಆಯಾ ದೇಶಗಳ ಜೀವನ ವೆಚ್ಚ, ಆರ್ಥಿಕ ಸ್ಥಿತಿ ಮತ್ತು ಸರ್ಕಾರಿ ನೀತಿಗಳು ಪ್ರಮುಖ ಕಾರಣ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಜೀವನ ವೆಚ್ಚ ಹೆಚ್ಚಾಗಿರುವುದರಿಂದ ವೇತನಗಳು ಹೆಚ್ಚಾಗಿವೆ. ಆದರೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪ್ರಧಾನಿ ಹುದ್ದೆಯನ್ನು ಜನಸೇವೆ ಎಂದು ಪರಿಗಣಿಸಲಾಗುವುದರಿಂದ ಮೂಲ ವೇತನಕ್ಕಿಂತ ಗೌರವ ಮತ್ತು ಅಧಿಕಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.