ಆನ್‌ಲೈನ್‌ನಲ್ಲಿ ನೂರಾರು ಫ್ರೆಂಡ್ಸ್, ರಿಯಲ್ ಲೈಫ್‌ನಲ್ಲಿ ಯಾರೂ ಇಲ್ಲ! ಭಾರತದ 'ಸಿಂಗಲ್ಸ್'ಗೆ ಕಾಡುತ್ತಿದೆ ಒಂಟಿತನ; ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ
ಕೆಲಸದ ಒತ್ತಡದ ನಡುವೆಯೂ ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಯುವಜನತೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಶೇ. 40ರಷ್ಟು ಸಿಂಗಲ್ಸ್ ಪ್ರಸ್ತುತ ಯಾವುದಾದರೊಂದು ಡೇಟಿಂಗ್ ಆ್ಯಪ್ ಬಳಸುತ್ತಿದ್ದಾರೆ ಎಂಬುವುದು ಡೇಟಿಂಗ್ ಆ್ಯಪ್‌ಗಳ ಪ್ರಸಿದ್ಧ ಸಂಸ್ಥೆ ಮ್ಯಾಚ್ ಗ್ರೂಪ್ ಮತ್ತು ಇಪ್ಸೋಸ್ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
-
ಬೆಂಗಳೂರು, ಅ.05: ಇಂದಿನ ಆಧುನಿಕ ಹಾಗೂ ಡಿಜಿಟಲ್ ಯುಗದಲ್ಲಿ ಯುವಜನತೆ ಸದಾ ಆನ್‌ಲೈನ್‌ನಲ್ಲಿ ಕನೆಕ್ಟ್ ಆಗಿದ್ದರೂ, ನಿಜಜೀವನದಲ್ಲಿ ಆಪ್ತ ಸಂಬಂಧಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೀಗಂತ ಭಾರತದ ಯುವಜನತೆಯ ಮನಸ್ಥಿತಿಯ ಕುರಿತು ನಡೆಸಿದ ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಮೆಟ್ರೋ ಮತ್ತು ಮೊದಲ ಸ್ಥರದ ನಗರಗಳಲ್ಲಿರುವ 18 ರಿಂದ 45 ವರ್ಷ ವಯಸ್ಸಿನ 1,000 ಸಿಂಗಲ್ಸ್‌ಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಡೇಟಿಂಗ್ ಆ್ಯಪ್‌ಗಳ ಪ್ರಸಿದ್ಧ ಸಂಸ್ಥೆ ಮ್ಯಾಚ್ ಗ್ರೂಪ್ ಮತ್ತು ಇಪ್ಸೋಸ್ ಜಂಟಿಯಾಗಿ ಈ ಸಮೀಕ್ಷೆ ನಡೆಸಿದ್ದವು. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ. 35ರಷ್ಟು ಸಿಂಗಲ್ಸ್‌ಗಳು ತಾವು 'ಒಂಟಿ' ಎಂಬ ಭಾವನೆ (Loneliness) ಸದಾ ಕಾಡುತ್ತಿದೆ ಎಂದು ಹೇಳಿದ್ದಾರೆ.
ಒಂಟಿತನ ಕಾಡುತ್ತಿರುವುದೇಕೆ?
ಭಾರತೀಯ ಯುವಜನತೆಗೆ ಸಂಬಂಧಗಳನ್ನು ಬೆಳೆಸಲು ಅವಕಾಶಗಳ ಕೊರತೆಯೇನೂ ಇಲ್ಲ. ಶೇ. 75ರಷ್ಟು ಯುವಕ-ಯುವತಿಯರು ವಾರಕ್ಕೊಮ್ಮೆಯಾದರೂ ಹೊರಗಡೆ ಹೋಗಿ ಜನರನ್ನು ಭೇಟಿಯಾಗುತ್ತಿರುತ್ತಾರೆ. ಆದರೂ, ಕೆಲಸದ ಒತ್ತಡ ಮತ್ತು ಆಯಾಸ ಅವರನ್ನು ಹೈರಾಣಾಗಿಸಿದೆ.
ಶೇ. 64ರಷ್ಟು ಮಂದಿ ತಮ್ಮ ಸಾಮಾಜಿಕ ಜೀವನಕ್ಕಿಂತ ಓದು ಮತ್ತು ಕೆಲಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದಾಗಿ ಹೇಳಿದ್ದಾರೆ. ಈ ಕೆಲಸವೇ ಮೊದಲು ಎಂಬ ಮಂತ್ರ, ಅವರನ್ನು ಒಂಟಿತನಕ್ಕೆ ತಳ್ಳಿದೆ. ಎರಡನೇ ಕಾರಣ ಸುಸ್ತು, ಆಯಾಸ. ಶೇ. 55ರಷ್ಟು ಸಿಂಗಲ್ಸ್, ದಿನದ ಕೆಲಸ ಮುಗಿದ ಮೇಲೆ ಯಾರನ್ನಾದರೂ ಭೇಟಿಯಾಗಲು ಅಥವಾ ಮಾತನಾಡಲು ಸಾಧ್ಯವಾಗದಷ್ಟು ಸುಸ್ತಾಗಿರುತ್ತಾರೆ. ಮತ್ತೊಂದೆಡೆ ಶೇ. 58ರಷ್ಟು ಮಂದಿ, "ಆನ್‌ಲೈನ್‌ನಲ್ಲಿ ನಾವು ಎಲ್ಲರೊಂದಿಗೂ ಬೆರೆತಿರುತ್ತೇವೆ, ಆದರೆ ನಿಜಜೀವನದಲ್ಲಿ ನಮಗೆ ಒಂಟಿತನ ಕಾಡುತ್ತದೆ," ಎಂದು ಸತ್ಯ ಒಪ್ಪಿಕೊಂಡಿದ್ದಾರೆ.
ನೂರಾರು ಜನರಲ್ಲ, ಆಪ್ತರೊಬ್ಬರು ಬೇಕು; 'ನಿಜ ಪ್ರೀತಿ' ಮೇಲಿದೆ ಅಪಾರ ನಂಬಿಕೆ!
ಒಂಟಿತನ ಕಾಡುತ್ತಿದ್ದರೂ, ಪ್ರೀತಿ ಮತ್ತು ಸಂಬಂಧಗಳ ಮೇಲಿನ ನಂಬಿಕೆಯನ್ನು ಯುವಜನತೆ ಕಳೆದುಕೊಂಡಿಲ್ಲ. ಬದಲಾಗಿ, ತಮಗೆ ಎಂಥವರ ಸಾಂಗತ್ಯ ಬೇಕು ಎಂಬುದರ ಬಗ್ಗೆ ಹೆಚ್ಚು ಸ್ಪಷ್ಟತೆ ಹೊಂದಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 70ರಷ್ಟು ಮಂದಿ ಹೊಸ ಸಂಬಂಧಗಳನ್ನು ಬೆಳೆಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ. ಶೇ. 72ರಷ್ಟು ಯುವಜನತೆಗೆ ನೂರಾರು ಸ್ನೇಹಿತರ ಬದಲು, ಬೆರಳೆಣಿಕೆಯಷ್ಟಿದ್ದರೂ 'ಗಾಢವಾದ ಮತ್ತು ಆಪ್ತವಾದ' ಸಂಬಂಧಗಳ ಅಗತ್ಯ ಇದೆ ಎಂದು ತಿಳಿಸಿದ್ದಾರೆ.
ಶೇ. 78ರಷ್ಟು ಯುವಜನರು ಈಗಲೂ 'ನಿಜವಾದ ಪ್ರೀತಿ' ಇದೆ ಎಂದು ನಂಬಿದ್ದಾರೆ ಮತ್ತು ಶೇ. 77ರಷ್ಟು ಜನ ತಮಗಾಗಿ ಹುಟ್ಟಿದ 'ಆ ವಿಶೇಷ ವ್ಯಕ್ತಿ' ಖಂಡಿತಾ ಸಿಗುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ. ಶೇ. 85ರಷ್ಟು ಮಂದಿ 'ದೀರ್ಘಕಾಲಿಕ ಸಂಬಂಧ'ಗಳನ್ನು ಎದುರು ನೋಡುತ್ತಿದ್ದಾರೆ. ಅದರಲ್ಲೂ 'ಜೆನ್-ಝೀ' ಯುವಜನತೆಯಲ್ಲಿ ಈ ಪ್ರಮಾಣ ಶೇ. 89ರಷ್ಟಿದೆ. ಅಷ್ಟೇ ಅಲ್ಲದೆ ತಮಗೆ ಒಗ್ಗದ ವ್ಯಕ್ತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬದಲು, ತಮಗೆ ಸೂಕ್ತವಾದ ವ್ಯಕ್ತಿ ಸಿಗುವವರೆಗೂ ಕಾಯಲು ಶೇ. 63ರಷ್ಟು ಮಂದಿ ಸಿದ್ಧರಿದ್ದಾರೆ.
ಡೇಟಿಂಗ್ ಆ್ಯಪ್‌ಗಳ ಪಾತ್ರ ಮತ್ತು 'ಸುರಕ್ಷತೆ' ಗಿದೆ ಡಿಮಾಂಡ್
ಕೆಲಸದ ಒತ್ತಡದ ನಡುವೆಯೂ ಹೊಸ ಪರಿಚಯಗಳನ್ನು ಮಾಡಿಕೊಳ್ಳಲು ಯುವಜನತೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಶೇ. 40ರಷ್ಟು ಸಿಂಗಲ್ಸ್ ಪ್ರಸ್ತುತ ಯಾವುದಾದರೊಂದು ಡೇಟಿಂಗ್ ಆ್ಯಪ್ ಬಳಸುತ್ತಿದ್ದಾರೆ. ಶೇ. 63ರಷ್ಟು ಮಂದಿ, ಡೇಟಿಂಗ್ ಆ್ಯಪ್‌ಗಳಿಂದ ತಮ್ಮ ಒಂಟಿತನ ದೂರವಾಗಿದೆ ಎಂದಿದ್ದಾರೆ. ಮುಂದಿನ 12 ತಿಂಗಳಲ್ಲಿ ಡೇಟಿಂಗ್ ಆ್ಯಪ್ ಬಳಸುವುದಾಗಿ ಶೇ. 55ರಷ್ಟು ಮಂದಿ ಹೇಳಿದ್ದಾರೆ.
ಆನ್‌ಲೈನ್‌ನಲ್ಲಿ ಪರಿಚಯ ಬೆಳೆಸುವಾಗ ಸುರಕ್ಷತೆಯ ಬಗ್ಗೆಯೂ ಯುವಜನತೆ ಎಚ್ಚರ ವಹಿಸಿದ್ದಾರೆ. ಶೇ. 60ರಷ್ಟು ಜನರಿಗೆ ಆನ್‌ಲೈನ್ ಡೇಟಿಂಗ್‌ನಲ್ಲಿ 'ಸುರಕ್ಷತೆ'ಯ ಬಗ್ಗೆ ಕಳವಳವಿದೆ. ಹೀಗಾಗಿ, ಡೇಟಿಂಗ್ ಆ್ಯಪ್‌ಗಳನ್ನು ಆಯ್ಕೆ ಮಾಡುವಾಗ 'ವೆರಿಫೈಡ್ ಪ್ರೊಫೈಲ್' (ಖಚಿತಪಡಿಸಿದ ಖಾತೆಗಳು) ಮತ್ತು ಭದ್ರತಾ ನಿಯಮಗಳಿರುವ ಆ್ಯಪ್‌ಗಳಿಗೇ ಶೇ. 52ರಷ್ಟು ಜನ ಮೊದಲ ಆದ್ಯತೆ ನೀಡುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ
ಈ ಬಗ್ಗೆ ಮಾತನಾಡಿರುವ ಮ್ಯಾಚ್ ಗ್ರೂಪ್‌ನ ಇಂಡಿಯಾ ಮತ್ತು ಮಧ್ಯಪ್ರಾಚ್ಯದ ಪ್ರಾದೇಶಿಕ ಮುಖ್ಯಸ್ಥ ಅನುಕೂಲ್ ಕುಮಾರ್, "ಇಂದಿನ ಯುವಜನತೆ ತಮಗೆ ಎಂಥವರ ಒಡನಾಟ ಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಯಾಂತ್ರಿಕವಾಗಿರುವ ಜೀವನಶೈಲಿಯಲ್ಲಿ ಆಪ್ತ ಸಂಬಂಧಗಳನ್ನು ಹುಡುಕುವುದು ಕಷ್ಟವಾಗುತ್ತಿದೆ. ಇಂಥ ಸಮಯದಲ್ಲಿ, ಜನರ ಆಸಕ್ತಿ ಮತ್ತು ಮನಸ್ಥಿತಿಗೆ ತಕ್ಕಂತಹ, ನೈಜ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಕಲ್ಪಿಸಿಕೊಡುವಲ್ಲಿ ತಂತ್ರಜ್ಞಾನ (ಡೇಟಿಂಗ್ ಆ್ಯಪ್‌ಗಳು) ಪ್ರಮುಖ ಪಾತ್ರ ವಹಿಸುತ್ತಿವೆ" ಎಂದು ವಿಶ್ಲೇಷಿಸಿದ್ದಾರೆ.