ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karate Training: 40,000 ಹುಡುಗಿಯರಿಗೆ ಉಚಿತ ಕರಾಟೆ ತರಬೇತಿ; ಸಾಮಾಜಿಕ ಬದಲಾವಣೆಗೆ ಮಾದರಿ

ಪ್ರಸ್ತುತ ಸಮಾಜದಲ್ಲಿ ಯುವತಿ ಹಾಗೂ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಿತಿ ಮೀರಿವೆ. ನಡು ರಸ್ತೆಯಲ್ಲೇ ಯುವತಿಯರನ್ನು ಭೀಕರವಾಗಿ ಹತ್ಯೆ ಮಾಡಲಾಗುತ್ತಿದೆ. ಇದನ್ನು ಮನಗಂಡ ಕರಾಟೆ ಮಾಸ್ಟರ್ ಉದಯ್ ಕುಮಾರ್ ಯುವತಿಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ. ‌

ಆತ್ಮರಕ್ಷಣೆಗಾಗಿ ವಿದ್ಯಾರ್ಥಿನಿಯರಿಗೆ ಉಚಿತ ಕರಾಟೆ ತರಬೇತಿ

ಸಾಂದರ್ಭಿಕ ಚಿತ್ರ

Profile Sushmitha Jain Aug 8, 2025 9:23 PM

ರಾಂಚಿ: ಜಾರ್ಖಂಡ್‌ನ (Jharkhand) ಹಜಾರಿಬಾಗ್ (Hazaribagh) ಜಿಲ್ಲೆಯ ಕರಾಟೆ (Karate) ತರಬೇತುದಾರ ಉದಯ್ ಕುಮಾರ್ (Uday Kumar) ಕಳೆದ 32 ವರ್ಷಗಳಿಂದ ಗ್ರಾಮೀಣ ಬಾಲಕಿಯರಿಗೆ ಉಚಿತ ಕರಾಟೆ ತರಬೇತಿ ನೀಡುತ್ತಿದ್ದಾರೆ. ಆತ್ಮನಿರ್ಭರತೆ, ಆತ್ಮವಿಶ್ವಾಸ ಮತ್ತು ಸ್ವರಕ್ಷಣೆಗೆ ಸಾಮರ್ಥ್ಯವನ್ನು ಒದಗಿಸುವುದೇ ಅವರ ಧ್ಯೇಯ.

ಉದಯ್ ತಮಗೆ ಕರಾಟೆ ಒಲವು ಬಾಲ್ಯದಿಂದಲೇ ಆರಂಭವಾಯಿತು ಎಂದು ತಿಳಿಸಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಅನುಭವಿ ತರಬೇತುದಾರರಡಿಯಲ್ಲಿ ತರಬೇತಿ ಪಡೆದ ನಂತರ ಹಜಾರಿಬಾಗ್‌ಗೆ ಮರಳಿದರು. ಹಲವರು ವರ್ಷಗಳಿಂದ ತರಬೇತಿ ನೀಡುತ್ತಿದ್ದಾರೆ. ಬಾಲಕಿಯರು ಎದುರಿಸುವ ಸಾಮಾಜಿಕ ಸವಾಲುಗಳಾದ ಕಿರುಕುಳ ಮತ್ತು ಸುರಕ್ಷತೆಯ ಕೊರತೆಯನ್ನು ಗಮನಿಸಿದ ಉದಯ್, ಕರಾಟೆಯ ಮೂಲಕ ದೈಹಿಕ ಶಕ್ತಿಯ ಜತೆಗೆ ಆತ್ಮವಿಶ್ವಾಸ ಮತ್ತು ಸ್ಥೈರ್ಯವನ್ನು ಬೆಳೆಸಲು ನಿರ್ಧರಿಸಿದರು.

40,000 ಬಾಲಕಿಯರಿಗೆ ತರಬೇತಿ

ತನ್ನ ವೃತ್ತಿ ಜೀವನದಲ್ಲಿ ಉದಯ್ ಸುಮಾರು 40,000 ಬಾಲಕಿಯರಿಗೆ ತರಬೇತಿ ನೀಡಿದ್ದಾರೆ. ಅವರ ಹಲವು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದಾರೆ ಎನ್ನುವುದು ವಿಶೇಷ. ಆರಂಭದಲ್ಲಿ ಗ್ರಾಮೀಣ ಸಮುದಾಯಗಳಿಂದ ತೀವ್ರ ವಿರೋಧ ಎದುರಾಯಿತು. ಕುಟುಂಬಗಳು ತಮ್ಮ ಹೆಣ್ಣುಮಕ್ಕಳಿಗೆ ಕರಾಟೆ ಕಲಿಯಲು ಅವಕಾಶ ನೀಡಲು ಹಿಂಜರಿದವು. ಆದರೆ, ಸಮಯ ಕಳೆದಂತೆ ಮತ್ತು ವಿಶ್ವಾಸ ಬೆಳೆದಂತೆ, ಹೆಚ್ಚಿನ ಬಾಲಕಿಯರು ತರಬೇತಿಗೆ ಸೇರಿದರು. ಇದೀಗ ಕೆಲವರು ಇತರ ಗ್ರಾಮಗಳಲ್ಲಿ ಕರಾಟೆ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Viral Post: ಟೈರ್ ಪಂಕ್ಚರ್ ಸ್ಕ್ಯಾಮ್‌ನಿಂದ 8,000 ರೂ. ಕಳೆದುಕೊಂಡ ವ್ಯಕ್ತಿ; ಇಲ್ಲಿದೆ ವಂಚನೆಯ ಕಥೆ

ಗ್ರಾಮೀಣ ಬಾಲಕಿಯರಿಗೆ ಒತ್ತು

ಉದಯ್ ಕುಮಾರ್ ನಗರ ಪ್ರದೇಶಗಳಲ್ಲಿ ಕ್ರೀಡೆ ಮತ್ತು ತರಬೇತಿ ಸೌಲಭ್ಯಗಳು ಲಭ್ಯವಿರುವಾಗ, ಗ್ರಾಮೀಣ ಬಾಲಕಿಯರು ಹಿಂದೆ ಉಳಿಯುತ್ತಾರೆ ಎಂದು ಗಮನಿಸಿದರು. ಈ ಅಂತರವನ್ನು ಕಡಿಮೆ ಮಾಡಲು ಗ್ರಾಮಗಳಿಗೆ ತೆರಳಿ ಅಗತ್ಯವಿರುವ ಸ್ಥಳಗಳಲ್ಲಿ ತರಬೇತಿ ನೀಡಿದರು. ಅವರ ಈ ಶ್ರಮವು ಗ್ರಾಮೀಣ ಬಾಲಕಿಯರಿಗೆ ಆತ್ಮರಕ್ಷಣೆಯ ಜೊತೆಗೆ ಸಾಮಾಜಿಕ ಗೌರವವನ್ನೂ ಒದಗಿಸಿದೆ.

ಉದಯ್ ಕುಮಾರ್‌ ಅವರ ಸಮರ್ಪಣೆ ಮತ್ತು ಸೇವಾ ಮನೋಭಾವವು ಜೀವನಗಳನ್ನು ಪರಿವರ್ತಿಸುವ ಶಕ್ತಿಯನ್ನು ತೋರಿಸಿದೆ. ಗ್ರಾಮೀಣ ಜಾರ್ಖಂಡ್‌ನಾದ್ಯಂತ ಮತ್ತು ಅದರಾಚೆಗೆ, ಅವರ ಕಾರ್ಯವು ಬಾಲಕಿಯರಿಗೆ ಸಬಲೀಕರಣದ ದಾರಿದೀಪವಾಗಿದೆ. ಈ ಉದಾತ್ತ ಕಾರ್ಯವು ಕೇವಲ ಕರಾಟೆ ತರಬೇತಿಯನ್ನು ಮೀರಿ, ಸಾಮಾಜಿಕ ಬದಲಾವಣೆಗೆ ಒಂದು ಮಾದರಿ ಎನಿಸಿಕೊಂಡಿದೆ.