ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇನ್‌ಸ್ಟಾಗ್ರಾಮ್‌ ಬಳಕೆದಾರರೇ ಗಮನಿಸಿ: 'ಎನ್‌ಕ್ರಿಪ್ಶನ್' ಫೀಚರ್ ಕೈಬಿಡಲು ಮಾರ್ಕ್ ಜುಕರ್‌ಬರ್ಗ್ ನಿರ್ಧಾರ

ಸೋಶಿಯಲ್ ಮೀಡಿಯಾ ದೈತ್ಯ ಮೆಟಾ ತನ್ನ ವೇದಿಕೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ‘ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್’ ಫೀಚರ್ ಅನ್ನು ಮೇ 8ರಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಬಳಕೆದಾರರ ನಡುವೆ ನಡೆಯುವ ಖಾಸಗಿ ಚಾಟ್‌ಗಳನ್ನು ರಕ್ಷಿಸುತ್ತಿದ್ದ ಈ ವ್ಯವಸ್ಥೆಯನ್ನು ಬಳಕೆ ಕಡಿಮೆ ಇರುವುದರಿಂದ ಹಾಗೂ ಮಕ್ಕಳ ಸುರಕ್ಷತೆ ಸಂಬಂಧಿತ ಚಿಂತನೆಯ ಕಾರಣದಿಂದ ತೆಗೆದುಹಾಕಲಾಗುತ್ತಿದೆ. ಬಳಕೆದಾರರು ತಮ್ಮ ಹಳೆಯ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ಉಳಿಸಿಕೊಳ್ಳಲು ಮೇ 8ರ ಮೊದಲು ಡೌನ್‌ಲೋಡ್ ಮಾಡಿಕೊಳ್ಳುವಂತೆ ಮೆಟಾ ಸೂಚಿಸಿದೆ.

ಇನ್‌ಸ್ಟಾಗ್ರಾಮ್‌ ಫೀಚರ್‌ನಲ್ಲಿ ದೊಡ್ಡ ಬದಲಾವಣೆ

ಇನ್‌ಸ್ಟಾಗ್ರಾಮ್‌ (ಸಂಗ್ರಹ ಚಿತ್ರ) -

Profile
Sushmitha Jain Mar 16, 2026 2:08 PM

ದೆಹಲಿ, ಮಾ. 16: ಸೋಶಿಯಲ್ ಮೀಡಿಯಾ (Social Media) ದೈತ್ಯ ಮೆಟಾ (Meta) ತನ್ನ ಜನಪ್ರಿಯ ವೇದಿಕೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಒಂದು ದೊಡ್ಡ ಬದಲಾವಣೆಯನ್ನು ಘೋಷಿಸಿದೆ. ಬಳಕೆದಾರರ ಖಾಸಗಿ ಸಂಭಾಷಣೆಗಳಿಗೆ ರಕ್ಷಣೆ ನೀಡುತ್ತಿದ್ದ 'ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್' (End-to-End Encryption) ಸೌಲಭ್ಯವನ್ನು ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ. ಮೆಟಾದ ಅಧಿಕೃತ ಸಪೋರ್ಟ್ ಪೇಜ್ ಅಪ್‌ಡೇಟ್ (support page update) ಪ್ರಕಾರ, ಈ ಫೀಚರ್ ಮೇ 8ರ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿರುವುದಿಲ್ಲ. ಇದು ಬಳಕೆದಾರರ ಗೌಪ್ಯತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಧಾರವೆಂದು ಪರಿಗಣಿಸಲಾಗಿದೆ.

ಈ ತಂತ್ರಜ್ಞಾನವು ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆಯನ್ನು ಮೂರನೇ ವ್ಯಕ್ತಿಗಳು ಓದದಂತೆ ರಕ್ಷಿಸುತ್ತದೆ. ಮೆಸೇಜ್ ಕಳುಹಿಸುವವರು ಮತ್ತು ಸ್ವೀಕರಿಸುವವರು ಮಾತ್ರ ಈ ಸಂದೇಶಗಳನ್ನು ಓದಲು ಸಾಧ್ಯವಿರುತ್ತದೆ. ಹ್ಯಾಕರ್ಸ್ ಅಥವಾ ಸ್ವತಃ ಮೆಟಾ ಸಂಸ್ಥೆಯೂ ಸಹ ಇಂತಹ ಸಂದೇಶಗಳನ್ನು ಅಥವಾ ಕರೆಗಳನ್ನು ಪ್ರವೇಶಿಸಲು ಸಾಧ್ಯವಿರುವುದಿಲ್ಲ. ಪ್ರತಿಯೊಂದು ಸಾಧನಕ್ಕೂ ವಿಶಿಷ್ಟವಾದ 'ಕ್ರಿಪ್ಟೋಗ್ರಾಫಿಕ್ ಕೀ' ಇರುವುದರಿಂದ ಮಾಹಿತಿ ಸೋರಿಕೆಯ ಭಯವಿರುವುದಿಲ್ಲ. ಸದ್ಯ ಈ ಆಪ್ಶನ್‌ ತೆಗೆದು ಹಾಕಲು ನಿರ್ಧರಿಸಲಾಗಿದೆ.

ಈ ಫೀಚರ್ ತೆಗೆದುಹಾಕಲು ಕಾರಣವೇನು?

ಮೆಟಾ ಈ ನಿರ್ಧಾರಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ನೀಡಿದೆ. ಮೊದಲನೆಯದಾಗಿ, ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೀಚರ್ ಅನ್ನು ಬಳಸುವವರ ಸಂಖ್ಯೆ ತೀರಾ ವಿರಳವಾಗಿದೆ. ಎರಡನೆಯದಾಗಿ, ಈ ತಂತ್ರಜ್ಞಾನವು ಅಪರಾಧಿಗಳಿಗೆ ರಕ್ಷಣೆ ನೀಡುತ್ತದೆ ಎಂಬ ಗಂಭೀರ ಟೀಕೆಗಳು ಕೇಳಿಬಂದಿವೆ. ವಿಶೇಷವಾಗಿ ಮಕ್ಕಳ ಸುರಕ್ಷತೆಗಾಗಿ ಶ್ರಮಿಸುವ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ಈ ಎನ್‌ಕ್ರಿಪ್ಶನ್ ವ್ಯವಸ್ಥೆಯನ್ನು ವಿರೋಧಿಸಿವೆ. ಇದರಿಂದಾಗಿ ಆನ್‌ಲೈನ್‌ನಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಪತ್ತೆಹಚ್ಚುವುದು ಮತ್ತು ತಡೆಯುವುದು ಕಷ್ಟವಾಗುತ್ತದೆ ಎಂಬುದು ಅವರ ವಾದ.

ಬಳಕೆದಾರರಿಗೆ ಸೂಚನೆಗಳು

ಮೇ 8ರ ಗಡುವಿನ ನಂತರ ಎನ್‌ಕ್ರಿಪ್ಟ್ ಮಾಡಲಾದ ಚಾಟ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಬೆಂಬಲಿತವಾಗುವುದಿಲ್ಲ. ಹೀಗಾಗಿ, ತಮ್ಮ ಹಳೆಯ ಚಾಟ್‌ಗಳು ಅಥವಾ ಮೀಡಿಯಾ ಫೈಲ್‌ಗಳನ್ನು ಉಳಿಸಿಕೊಳ್ಳಲು ಬಯಸುವ ಬಳಕೆದಾರರು ಅವುಗಳನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಲು ಮೆಟಾ ಸೂಚಿಸಿದೆ. ಇದಕ್ಕಾಗಿ ಆ್ಯಪ್‌ನಲ್ಲಿ ವಿಶೇಷ ಸೂಚನೆಗಳನ್ನು ನೀಡಲಾಗುವುದು. ಈ ಪ್ರಕ್ರಿಯೆಗಾಗಿ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯ. ಈ ಬದಲಾವಣೆಯು ಇನ್‌ಸ್ಟಾಗ್ರಾಮ್‌ನಲ್ಲಿನ ಗೌಪ್ಯತೆಯ ಸ್ವರೂಪವನ್ನು ಸಂಪೂರ್ಣವಾಗಿ ಬದಲಿಸಲಿದೆ.