ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಾಳಿ ವೇಳೆ ಗಾಂಜಾ ಕುಕ್ಕರ್‌ ಒಳಗೆ ಅಡಗಿಸಿಟ್ಟ ʼಬುದ್ಧಿವಂತʼ; ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಹೇಗೆ?

Viral News: ಅತೀ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ವ್ಯಕ್ತಿಯೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕೇರಳಂನ ತ್ರಿಶ್ಶೂರ್‌ನಲ್ಲಿ ನಡೆದಿದೆ. ಪೊಲೀಸ್‌ ದಾಳಿಗೆ ವೇಳೆಗೆ ಗಾಂಜಾವನ್ನು ಪ್ರೆಷರ್‌ ಕುಕ್ಕರ್‌ಗೆ ಹಾಕಿದ್ದು ಅದರ ವಾಸನೆ ಬರುತ್ತಿದ್ದಂತೆ ಕೃತ್ಯ ಬೆಳಕಿಗೆ ಬಂದಿದೆ.

ಗಾಂಜಾ ಕುಕ್ಕರ್‌ ಒಳಗೆ ಅಡಗಿಸಿಟ್ಟು ಸಿಕ್ಕಿಬಿದ್ದ ʼಬುದ್ಧಿವಂತʼ

ಪ್ರಷರ್‌ ಕುಕ್ಕರ್‌ನಲ್ಲಿ ಅಡಗಿಸಿಟ್ಟ ಗಾಂಜಾ ಮತ್ತು ಆರೋಪಿ ಬಿನೀಶ್‌ -

Ramesh Ballamoole
Ramesh Ballamoole Jun 6, 2026 11:25 PM

ತಿರುವನಂತಪುರಂ, ಜೂ. 6: ಕೆಲವರು ಅತಿ ʼಬುದ್ಧಿವಂತಿಕೆʼ ತೋರಿ ಅಪರಾಧ ಕೃತ್ಯ ಎಸಗಲು ಮುಂದಾಗುತ್ತಾರೆ. ಆ ಮೂಲಕ ತಮ್ಮನ್ನು ಯಾರು ಏನೂ ಮಾಡಲಾರರು ಅಂದುಕೊಳ್ಳುತ್ತಾರೆ. ಆದರೆ ಅವರ ಈ ʼಬುದ್ಧಿವಂತಿಕೆʼಯೇ ಅವರಿಗೆ ಮುಳುವಾಗುತ್ತದೆ. ಅವರಿಟ್ಟ ತಪ್ಪು ಹೆಜ್ಜೆಯೇ ಅವರನ್ನು ಕಾನೂನಿನ ಕೈಗೆ ತಂದೊಪ್ಪಿಸುತ್ತದೆ. ಇಷ್ಟೆಲ್ಲ ಪೀಠಿಕೆ ಹಾಕಲೂ ಕಾರಣವಿದೆ. ದಡ್ಡನೊಬ್ಬ ʼಬುದ್ಧಿವಂತಿಕೆʼ ಪ್ರದರ್ಶಿಸಲು ಹೋಗಿ, ಗಾಂಜಾ ಸಮೇತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ (Viral News). ಅಷ್ಟಕ್ಕೂ ಏನಿದು ಪ್ರಕರಣ? ಆತ ಮಾಡಿದ್ದಾದರೂ ಏನು? ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಈ ಸ್ಟೋರಿ ಓದಿ.

ಕೇರಳಂನ ತ್ರಿಶ್ಶೂರ್‌ನಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ. ಕುಣ್ಣಂಕುಲಮ್‌ನಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಗಾಂಜಾವನ್ನು ಕುಕ್ಕರ್‌ನಲ್ಲಿ ಅಡಗಿಸಿಟ್ಟು ಸಿಕ್ಕಿ ಬಿದ್ದಿದ್ದಾನೆ. ಸದ್ಯ ಆತ ಕೃತ್ಯ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಘಟನೆ ವಿವರ

ಅತಿಯಾದ ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸಲು ಪೊಲೀಸರು ಶನಿವಾರ (ಜೂನ್‌ 6) ಕುಣ್ಣಂಕುಲಮ್‌ ಠಾಣೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಸಿಕ್ಕಿಬೀಳುವ ಆತಂಕದಲ್ಲಿ ಬಿನೀಶ್‌ ಎನ್ನುವಾತ ಮನೆಯಲ್ಲಿದ್ದ ಗಾಂಜಾವನ್ನು ಅನ್ನ ಬೇಯುತ್ತಿದ್ದ ಪ್ರಷರ್ ಕುಕ್ಕರ್‌ಗೆ ಹಾಕಿ ಸದ್ಯ ತಾನು ಅಪಾಯದಿಂದ ಪಾರಾದೆ ಎಂದುಕೊಂಡಿದ್ದಾನೆ. ಆದರೆ ಕೆಲವೇ ಹೊತ್ತಲ್ಲಿ ಈ ಪ್ರಕರಣಕ್ಕೆ ಆತ ಊಹಿಸದ ಟ್ವಿಸ್ಟ್‌ ಸಿಕ್ಕಿಬಿಟ್ಟಿತು.

ಅಮೆರಿಕದಲ್ಲಿ ಬಟ್ಟೆ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ಳು ಕಳ್ಳಿ! ಭಾರೀ ವೈರಲ್‌ ಆಗ್ತಿದ್ದಂತೆ ಈ ವಿಡಿಯೊ

ಖಚಿತ ಮಾಹಿತಿ ಮೇರೆಗೆ ಬಿನೀಶ್‌ ಮನೆಗೆ ಲಗ್ಗೆ ಇಟ್ಟ ಪೊಲೀಸರಿಗೆ ಆರಂಭದಲ್ಲಿ ಏನೂ ಸಿಕ್ಕಿರಲಿಲ್ಲ. ಗಾಂಜಾ ಅಡಗಿಸಿಡಬಹುದಾದ ಎಲ್ಲ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿದರೂ ಅಲ್ಲಿ ಏನೂ ಇರಲಿಲ್ಲ. ತಮಗೆ ಸಿಕ್ಕ ಮಾಹಿತಿ ಸುಳ್ಳಿರಬಹುದೆಂದು ಪೊಲೀಸರು ಇನ್ನೇನು ಮನೆಯಿಂದ ಹೊರಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಕುಕ್ಕರ್‌ ವಿಷಲ್‌ ಹಾಕತೊಡಗಿತು. ಅದರೊಂದಿಗೆ ಗಾಂಜಾ ವಾಸನೆಯೂ ತೇಲಿ ಬರಬಂತು. ಜತೆಗೆ ಆತನ ಬಂಡವಾಳವೂ ಬಯಲಾಯ್ತು.

ಕೂಡಲೇ ಸಂದೇಹಗೊಂಡ ಪೊಲೀಸರು ಕುಕ್ಕರ್‌ ಮುಚ್ಚಲ ತೆಗೆದರು. ಆಗ ಅನ್ನದ ಮಧ್ಯೆ ಕಂಡುಬಂತು ಗಾಂಜಾ. ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಸುಮಾರು 401 ಗ್ರಾಂ ಗಾಂಜಾವನ್ನು ಬಿನೀಶ್‌ ಅಡಗಿಸಿಟ್ಟಿರುವುದು ಬೆಳಕಿಗೆ ಬಂತು.

ಪೊಲೀಸರು ಹೇಳಿದ್ದೇನು?

ʼʼಸ್ಥಳೀಯವಾಗಿ ಬಿನೀಶ್‌ ಅನೇಕ ವರ್ಷಗಳಿಂದ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ. ಇದಲ್ಲದೆ ಇತರ ಹಲವು ಅಪರಾಧ ಕೃತ್ಯಗಳಲ್ಲೂ ಆತ ಭಾಗಿಯಾಗಿದ್ದಾನೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ಕುಣ್ಣಂಕುಲಮ್‌ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದ್ದು ಪ್ರಕರಣ ದಾಖಲಿಸಲಾಗಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಕಳ್ಳತನಕ್ಕೂ ಮುನ್ನ ಈ ಕಿಲಾಡಿ ಕಳ್ಳ ಮಾಡಿದ್ದೇನು ಗೊತ್ತಾ?

ನೆಟ್ಟಿಗರು ಹೇಳಿದ್ದೇನು?

ಸದ್ಯ ಈ ಘಟನೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಕಟ್ಟೆ ಸದ್ದು ಮಾಡುತ್ತಿದೆ. ಬಿನೇಶ್‌ನನ್ನು ಟ್ರೋಲ್‌ ಮಾಡಲಾಗುತ್ತಿದೆ. ಅಕ್ಕಿ ಬೇಯುತ್ತಿರುವ ಕುಕ್ಕರ್‌ಗೆ ಗಾಂಜಾ ಹಾಕಿದ್ದು ಬಿನೇಶ್‌ನ ದಡ್ಡತನದ ನಿರ್ಧಾರವಾಗಿತ್ತು ಎಂದು ಅನೇಕರು ಹೇಳಿದ್ದಾರೆ. ತಪ್ಪು ಮಾಡಿದರು ಸಿಕ್ಕಿ ಬೀಳಲೇಬೇಕು ಎಂದು ಇನ್ನು ಹಲವರು ಕಮೆಂಟ್‌ ಮಾಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.