ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪತ್ತೆ; ಹೈ ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ

ಕೇರಳದಲ್ಲಿ ಮತ್ತೆ ನಿಫಾ ವೈರಸ್ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಬುಧವಾರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಪ್ರಾಥಮಿಕ ಸ್ವ್ಯಾಬ್ ಪರೀಕ್ಷೆಯಲ್ಲಿ ಫೆರೋಕ್‌ನ 43 ವರ್ಷದ ವ್ಯಕ್ತಿಗೆ ನಿಫಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೇರಳದಲ್ಲಿ ಮತ್ತೆ  ನಿಫಾ ವೈರಸ್‌ ಪತ್ತೆ;  ಹೈ ಅಲರ್ಟ್ ಘೋಷಣೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 11, 2026 12:21 PM

ತಿರುವನಂತಪುರಂ: ಕೇರಳದಲ್ಲಿ (Kerala) ಮತ್ತೆ ನಿಫಾ ವೈರಸ್ (Nipah Virus) ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಬುಧವಾರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಪ್ರಾಥಮಿಕ ಸ್ವ್ಯಾಬ್ ಪರೀಕ್ಷೆಯಲ್ಲಿ ಫೆರೋಕ್‌ನ 43 ವರ್ಷದ ವ್ಯಕ್ತಿಗೆ ನಿಫಾ ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಗಿಯನ್ನು ವೈದ್ಯಕೀಯ ಕಾಲೇಜಿನ ವಿಶೇಷ ಪ್ರತ್ಯೇಕ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗ್ತಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಆರಂಭಿಕ ಪರೀಕ್ಷೆಯನ್ನು ಕೋಝಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾಯಿತು. ಅಂದಿನಿಂದ ಮಾದರಿಗಳನ್ನು ದೃಢೀಕರಣಕ್ಕಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದ್ದು, ಅಂತಿಮ ಫಲಿತಾಂಶಗಳು ಶೀಘ್ರದಲ್ಲಿ ಬರುವ ನಿರೀಕ್ಷೆಯಿದೆ. ಫೆರೋಕ್‌ನ ಉದ್ಯಮಿಯಾಗಿರುವ ಈ ರೋಗಿಯನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಗಳವಾರ ಸಂಜೆ ನಿಪಾ ಸೋಂಕು ಶಂಕಿತವಾಗಿದ್ದರಿಂದ, ಅವರನ್ನು ವಿಶೇಷ ವೀಕ್ಷಣೆಗೆ ಸ್ಥಳಾಂತರಿಸಲಾಯಿತು. ಆ ಬಳಿಕ ಮಧ್ಯರಾತ್ರಿಯ ಸುಮಾರಿಗೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಜಿಲ್ಲೆಯಲ್ಲಿ ಈ ಹಿಂದೆ ನಿಪಾ ಹರಡಿದ ಸಂದರ್ಭದಲ್ಲಿ ಬಳಸಲಾಗಿದ್ದ ಅದೇ ವಿಶೇಷ ವಾರ್ಡ್‌ಗೆ ರೋಗಿಯನ್ನು ದಾಖಲಿಸಲಾಗಿತ್ತು. ಅಂತಿಮ ದೃಢೀಕರಣಕ್ಕಾಗಿ ಸ್ವ್ಯಾಬ್ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದ್ದು, ಇಂದು (ಗುರುವಾರ) ಸಂಜೆಯ ವೇಳೆಗೆ ಫಲಿತಾಂಶಗಳು ಬರುವ ನಿರೀಕ್ಷೆಯಿದೆ.

ಸೋಂಕಿತ ವ್ಯಕ್ತಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಫೆರೋಕ್‌ನಲ್ಲಿ ಹಳೆಯ ಕಟ್ಟಡವನ್ನು ಸ್ವಚ್ಛಗೊಳಿಸಿದ್ದರು. ಅಲ್ಲಿ ಸಿಕ್ಕಾಪಟ್ಟೆ ಬಾವಲಿಗಳು ಇದ್ದಿದ್ದರಿಂದ ಆ ವ್ಯಕ್ತಿಗೆ ವೈರಸ್ ಸೋಂಕು ತಗುಲಿರಬಹುದು ಎಂದು ಊಹಿಸಲಾಗಿದೆ. ಆತ ನಿಯಮಿತವಾಗಿ ಮದ್ಯ ಸೇವಿಸುತ್ತಿದ್ದ ಕಾರಣ, ಸಂಬಂಧಿಕರು ಈ ಲಕ್ಷಣಗಳನ್ನು ಮದ್ಯಪಾನದಿಂದ ಸಂಭವಿಸಿದೆ ಎಂದು ತಪ್ಪಾಗಿ ಭಾವಿಸಿ ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಆತ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯಸನ ಮುಕ್ತಿ ಕೇಂದ್ರದಲ್ಲಿ ಉಳಿದುಕೊಂಡಿದ್ದರಿಂದ, ಹೆಚ್ಚಿನ ಸಂಖ್ಯೆಯ ಜನರ ಸಂಪರ್ಕಕ್ಕೆ ಬಂದಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Ebola outbreak: ಎಬೋಲಾ ವೈರಸ್‌ ಆತಂಕ ಹಿನ್ನೆಲೆ ರಾಜ್ಯದಲ್ಲಿ ಹೈ ಅಲರ್ಟ್‌; ಮಾರ್ಗಸೂಚಿ ಪ್ರಕಟ

ಇದೀಗ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ವೈದ್ಯಕೀಯ ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದ್ದು, ಕ್ಯಾಂಪಸ್‌ಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.