ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kurnool Bus Fire: ಕರ್ನೂಲ್ ದುರಂತ; ಬಸ್ ಚಾಲಕನ ಬಂಧನ

ಆಂಧ್ರ ಪ್ರದೇಶದ ಕರ್ನೂಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಬಸ್‌ ಬೆಂಕಿ ದುರಂತಕ್ಕೆ ಕಾರಣನಾದ ಖಾಸಗಿ ಬಸ್‌ನ ಚಾಲಕನನ್ನು ಬಂಧಿಸಲಾಗಿದೆ. ಬಸ್‌ಗೆ ಬೆಂಕಿ ಹೊತ್ತಿಕೊಂಡ ಬಳಿಕ ಚಾಲಕ ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವ ಬದಲು ಭಯಭೀತನಾಗಿ ಓಡಿ ಹೋಗಿದ್ದಾನೆ ಎಂದು ಆರೋಪಿಸಲಾಗಿದೆ.

20 ಜನರ ಸಾವಿಗೆ ಕಾರಣನಾದ ಬಸ್ ಚಾಲಕನ ಬಂಧನ

-

ಹೈದರಾಬಾದ್‌: ಆಂಧ್ರ ಪ್ರದೇಶದ (Andhra Pradesh) ಕರ್ನೂಲ್ ಬಳಿ ಶುಕ್ರವಾರ ಮುಂಜಾನೆ ಸಂಭವಿಸಿದ ಭೀಕರ ಬಸ್‌ ಬೆಂಕಿ ದುರಂತದಲ್ಲಿ (Kurnool Bus Fire) 20 ಜನರು ಸಾವನ್ನಪ್ಪಿದ ಬಳಿಕ ಖಾಸಗಿ ಬಸ್‌ನ ಚಾಲಕನನ್ನು (Bus driver arrested) ಬಂಧಿಸಲಾಗಿದೆ. ಬಸ್ ಬೆಂಕಿ ಹೊತ್ತಿಕೊಂಡ ಬಳಿಕ ಬಸ್‌ನ ಚಾಲಕ ಒಳಗೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸುವ ಬದಲು ಭಯಭೀತನಾಗಿ ಓಡಿಹೋಗಿದ್ದನು. ಇದರಿಂದ ಬಸ್‌ನಲ್ಲಿದ್ದ 44 ಜನರಲ್ಲಿ 19 ಜನ ಸಜೀವ ದಹನಗೊಂಡಿದ್ದರೆ, ಬಸ್‌ಗೆ ಡಿಕ್ಕಿಯಾದ ಮೋಟಾರ್‌ಸೈಕಲ್‌ನ ಸವಾರ ಕೂಡ ಸಾವನ್ನಪ್ಪಿದ್ದ. ಪ್ರಕರಣಕ್ಕೆ ಸಂಬಂಧಿಸಿ ಇದೀಗ ಬಸ್ ಚಾಲಕನನ್ನು ಬಂಧಿಸಲಾಗಿದೆ.

ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ಬೆಂಕಿ ಹೊತ್ತಿಕೊಂಡು 20 ಜನರ ಸಾವಿಗೆ ಕಾರಣವಾದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌ ಚಾಲಕ ಮಿರಿಯಾಲ ಲಕ್ಷ್ಮಯ್ಯ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

5ನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿರುವ ಲಕ್ಷ್ಮಯ್ಯ 10ನೇ ತರಗತಿಯ ನಕಲಿ ಪ್ರಮಾಣ ಪತ್ರಗಳನ್ನು ಪಡೆದು ಭಾರೀ ವಾಹನ ಚಾಲನಾ ಪರವಾನಗಿಯನ್ನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿದ ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್, ಬಸ್‌ಗೆ ಬೆಂಕಿ ಹೊತ್ತಿಕೊಂಡಾಗ ಲಕ್ಷ್ಮಯ್ಯ ಪ್ರಯಾಣಿಕರ ಬಾಗಿಲಿನಿಂದ ಹಾರಿ ಬೆಂಕಿಯಿಂದ ಪಾರಾಗಿದ್ದಾನೆ. ಆದರೆ ಪರಿಸ್ಥಿತಿಯ ತೀವ್ರತೆ ಗ್ರಹಿಸುವಲ್ಲಿ ವಿಫಲನಾಗಿದ್ದಾನೆ ಎಂದು ಹೇಳಿದ್ದಾರೆ.

ಬೆಂಕಿಯಿಂದ ತಪ್ಪಿಸಿಕೊಂಡ ಲಕ್ಷ್ಮಯ್ಯ ಬಸ್ಸಿನ ಕೆಳಗಿನ ಲಗೇಜ್ ವಿಭಾಗದಲ್ಲಿ ಮಲಗಿದ್ದ ಹೆಚ್ಚುವರಿ ಚಾಲಕನನ್ನು ಎಚ್ಚರಗೊಳಿಸಿ ಬಸ್ ಒಳಗೆ ಪ್ರವೇಶಿಸುವುದು ಸಾಧ್ಯವಿಲ್ಲ ಎಂದು ಅರಿತು ಇಬ್ಬರೂ, ಟೈರ್ ಬದಲಾಯಿಸಲು ಬಳಸಲಾಗುವ ರಾಡ್‌ನಿಂದ ಕಿಟಕಿ ಗಾಜುಗಳನ್ನು ಒಡೆದರು. ಇದರಿಂದಾಗಿ ಕೆಲವು ಪ್ರಯಾಣಿಕರು ಉರಿಯುತ್ತಿರುವ ಬಸ್ಸಿನಿಂದ ತಪ್ಪಿಸಿಕೊಳ್ಳಲು ಸಹಾಯವಾಯಿತು ಎಂದು ಪಾಟೀಲ್ ತಿಳಿಸಿದ್ದಾರೆ.

ಬಸ್ ಚಾಲಕನನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 125(ಎ) (ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವುದು) ಮತ್ತು 106(1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಾಗಿತ್ತು?

ಕರ್ನೂಲ್ ಜಿಲ್ಲೆಯ ಚಿನ್ನಟೇಕುರು ಗ್ರಾಮದಲ್ಲಿ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು 20 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಬಸ್ಸಿನಲ್ಲಿದ್ದ 44 ಪ್ರಯಾಣಿಕರಲ್ಲಿ ಹಲವು ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಬೈಕ್ ಸವಾರ ಬಿ. ಶಿವಶಂಕರ್ ಬೆಳಗಿನ ಜಾವ 2.24ಕ್ಕೆ ತನ್ನ ಮೋಟಾರ್ ಸೈಕಲ್‌ಗೆ ಇಂಧನ ತುಂಬಿಸಿಕೊಂಡು ಹೋಗುತ್ತಿದ್ದಾಗ 2.39ಕ್ಕೆ ನಿಯಂತ್ರಣ ತಪ್ಪಿದ ಬಸ್ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಇದನ್ನೂ ಓದಿ: Viral video: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ; ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹೊಡೆದು ಕೊಂದ ಜನ, ವಿಡಿಯೋ ನೋಡಿ

ಬೈಕ್ ಸವಾರರಾದ ಶಿವಶಂಕರ್ ಮತ್ತು ಆತನ ಹಿಂಬದಿ ಸವಾರ ಎರ್ರಿ ಸ್ವಾಮಿ ಡಾಬಾದಲ್ಲಿ ಊಟ ಮಾಡಿ ಮದ್ಯ ಸೇವಿಸಿ ಬರುತ್ತಿದ್ದರು. ಶಂಕರ್ ಬೈಕ್‌ನ ನಿಯಂತ್ರಣ ತಪ್ಪಿ ವಿಭಜಕಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಅನಂತರ ಬಸ್ ದ್ವಿಚಕ್ರ ವಾಹನದ ಮೇಲೆ ಡಿಕ್ಕಿ ಹೊಡೆದು ಅದನ್ನು ರಸ್ತೆಯುದ್ದಕ್ಕೂ ಎಳೆದುಕೊಂಡು ಹೋಯಿತು. ಈ ವೇಳೆ ಇಂಧನ ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.