ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India-China Direct Flights: ಭಾರತದಿಂದ ಚೀನಾಕ್ಕೆ ನೇರ ವಿಮಾನ ಪ್ರಯಾಣ ಆರಂಭ

ಸುಮಾರು ಐದು ವರ್ಷಗಳ ಬಳಿಕ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಹಾರಾಟ ಭಾನುವಾರ ರಾತ್ರಿ ಪ್ರಾರಂಭವಾಗಲಿದೆ. ಉಭಯ ದೇಶಗಳ ನಡುವಿನ ಮೊದಲ ವಿಮಾನ ಭಾರತದ ಕೋಲ್ಕತ್ತಾದಿಂದ ಚೀನಾದ ಗುವಾಂಗ್ಝೌ ರಾತ್ರಿ 10 ಗಂಟೆಗೆ ಪ್ರಯಾಣ ಬೆಳೆಸಲಿದೆ. ಇನ್ನು ಶಾಂಘೈನಿಂದ ನವದೆಹಲಿಗೆ ವಿಮಾನಗಳು ನವೆಂಬರ್ 9ರಿಂದ ಆರಂಭಗೊಳ್ಳಲಿವೆ.

ಭಾರತ-ಚೀನಾ ನೇರ ವಿಮಾನ ಹಾರಾಟ ಆರಂಭ

-

ನವದೆಹಲಿ: ಐದು ವರ್ಷಗಳ ಬಳಿಕ ಭಾರತ (India) ಮತ್ತು ಚೀನಾ (China) ನಡುವಿನ ನೇರ ವಿಮಾನ ಹಾರಾಟ ಭಾನುವಾರ (ಅಕ್ಟೋಬರ್‌ 26) ರಾತ್ರಿ ಪ್ರಾರಂಭಗೊಳ್ಳಲಿದೆ. ಕೋವಿಡ್ ಸಾಂಕ್ರಾಮಿಕದ (Covid Epidemic) ಸಮಯದಲ್ಲಿ ಸ್ಥಗಿತಗೊಂಡಿದ್ದ ನೇರ ವಿಮಾನ (India-China Direct Flights) ಹಾರಾಟ ಇದೀಗ ಮತ್ತೆ ಪ್ರಾರಂಭವಾಗಲಿದೆ. ವಿಮಾನ ಹಾರಾಟ ಪ್ರಾರಂಭವು ಎರಡು ದೇಶಗಳ ನಡುವಿನ ಸಕಾರಾತ್ಮಕ ಹೆಜ್ಜೆ ಎಂದು ಈ ಹಿಂದೆ ಚೀನಾ (China) ಹೇಳಿತ್ತು. ಉಭಯ ದೇಶಗಳ ನಡುವಿನ ಮೊದಲ ವಿಮಾನ ಹಾರಾಟ ಭಾರತದಿಂದ ರಾತ್ರಿ 10 ಗಂಟೆಗೆ ಹೊರಡಲಿದೆ.

ಕೋಲ್ಕತ್ತಾ ಮತ್ತು ಗುವಾಂಗ್ಝೌ ನಡುವಿನ ಇಂಡಿಗೋ ವಿಮಾನವು ಅಕ್ಟೋಬರ್ 26ರಂದು ರಾತ್ರಿ ಹಾರಾಟ ನಡೆಸಲಿದೆ. ಶಾಂಘೈನಿಂದ ನವದೆಹಲಿಗೆ ವಿಮಾನಗಳು ನವೆಂಬರ್ 9ರಿಂದ ಆರಂಭಗೊಳ್ಳಲಿದೆ. ಇನ್ನು ದೆಹಲಿಯಿಂದ ಗುವಾಂಗ್ಝೌ ಇಂಡಿಗೋ ವಿಮಾನವು ನವೆಂಬರ್ 10ರಿಂದ ಹಾರಾಟ ಪ್ರಾರಂಭಿಸಲಿದೆ.

ಚೀನಾಕ್ಕೆ ನೇರ ವಿಮಾನ ಹಾರಾಟ ಅಕ್ಟೋಬರ್ 26ರಂದು ಪುನರಾರಂಭಗೊಳ್ಳಲಿವೆ ಎಂದು ಗಾಂಧಿ ಜಯಂತಿಯಂದು ಭಾರತ ಘೋಷಣೆ ಮಾಡಿತ್ತು.

ಈ ಬಗ್ಗೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, ಚೀನಾ ಮತ್ತು ಭಾರತದ ನಡುವಿನ ನೇರ ವಿಮಾನಗಳು ಕೋಲ್ಕತ್ತಾ ಮತ್ತು ಗುವಾಂಗ್ಝೌ ನಿಂದ ಪ್ರಾರಂಭವಾಗುತ್ತದೆ. ಶಾಂಘೈ ಮತ್ತು ನವದೆಹಲಿ ನವೆಂಬರ್ 9ರಿಂದ ಪ್ರಾರಂಭವಾಗುತ್ತದೆ. ವಾರಕ್ಕೆ 3 ಬಾರಿ ಹಾರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Kurnool Bus Fire: ಕರ್ನೂಲ್ ದುರಂತ; ಬಸ್ ಚಾಲಕನ ಬಂಧನ

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅಂದರೆ 2020ರಲ್ಲಿ ಎರಡು ದೇಶಗಳ ನಡುವಿನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಪೂರ್ವ ಲಡಾಖ್‌ನಲ್ಲಿ ಸಂಘರ್ಷದ ವಾತಾವರಣ ಉದ್ಭವವಾಗಿದ್ದರಿಂದ ಮತ್ತೆ ವಿಮಾನ ಹಾರಾಟವನ್ನು ಪ್ರಾರಂಭಿಸಿರಲಿಲ್ಲ.



ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆ (SCO)ಯ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡುವಿನ ಮಾತುಕತೆ ನಡೆದ ಬಳಿಕ ಭಾರತದ ವಿದೇಶಾಂಗ ಸಚಿವಾಲಯವು ನೇರ ವಿಮಾನಗಳ ಪುನರಾರಂಭದ ಬಗ್ಗೆ ಘೋಷಣೆಯನ್ನು ಮಾಡಿತ್ತು.

ಇದನ್ನೂ ಓದಿ: Paris Museum Heist: ಪ್ಯಾರಿಸ್‌ನ ಐತಿಹಾಸಿಕ ಮ್ಯೂಸಿಯಂನಿಂದ ಅಮೂಲ್ಯ ಆಭರಣಗಳ ಕಳವು; ಇಬ್ಬರು ಅರೆಸ್ಟ್

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್, ಚೀನಾ ಮತ್ತು ಭಾರತದ ಸಂಬಂಧಗಳನ್ನು ದೀರ್ಘಕಾಲೀನ ದೃಷ್ಟಿಕೋನದಿಂದ ವೀಕ್ಷಿಸಲು ಮತ್ತು ನಿರ್ವಹಿಸಲು ಎರಡೂ ದೇಶಗಳ ನಡುವಿನ ಸಂಬಂಧಗಳ ಸುಧಾರಣೆಯಲ್ಲಿ ಇದೊಂದು ಪ್ರಗತಿಪರ ಹೆಜ್ಜೆ ಎನಿಸಿಕೊಂಡಿದೆ. ಚೀನಾ ಮತ್ತು ಭಾರತ ಸಂಬಂಧಗಳಲ್ಲಿ ಆರೋಗ್ಯಕರ ಮತ್ತು ಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತದೊಂದಿಗೆ ಸಹಕರಿಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.