ವಿಜಯ ಸಂಪುಟದಲ್ಲಿರುವ ಸಚಿವರು ಯಾರು? ಅವರ ಹಿನ್ನೆಲೆಯೇನು ಗೊತ್ತಾ?
ತಮಿಳಿಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಭಾನುವಾರ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದ್ದಾರೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳಿಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್ ಭಾನುವಾರ ತಮಿಳುನಾಡು ಮುಖ್ಯಮಂತ್ರಿಯಾಗಿ (CM Vijay) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ವಿಜಯ್ ಅವರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಬೋಧಿಸಿದ್ದಾರೆ. ವಿಜಯ್ ಜೊತೆ ಇನ್ನೂ 9 ಶಾಸಕರು ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಅದರದಲ್ಲಿ ವೈದ್ಯರು, ದಂತವೈದ್ಯರು, ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಇತರ ಆರು ನಾಯಕರು ಸೇರಿದ್ದಾರೆ. ಮೊದಲ ಪಟ್ಟಿಯಲ್ಲಿರುವ ಎಲ್ಲಾ ಸಚಿವರು ತಮಿಳಗ ವೆಟ್ರಿ ಕಳಗಂ ಪಕ್ಷದವರಾಗಿದ್ದು, ಯಾವುದೇ ಕಾಂಗ್ರೆಸ್ ನಾಯಕರನ್ನು ಸೇರಿಸಲಾಗಿಲ್ಲ. ವಿಜಯ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಲ್ಲಿದೆ.
ಎನ್ ಆನಂದ್
ವಿಜಯ್ ತಮ್ಮ ಪಕ್ಷವನ್ನು ಪ್ರಾರಂಭಿಸುವ ಮೊದಲೇ ಅವರ ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದ ಎನ್. ಆನಂದ್, ಟಿವಿಕೆಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ, ಅವರು ಚೆನ್ನೈನ ತಿಯಾಗರಾಯನಗರ ಕ್ಷೇತ್ರದಿಂದ ಸ್ಪರ್ಧಿಸಿದರು - ಇದು ಐತಿಹಾಸಿಕವಾಗಿ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯ ಹೊಂದಿರುವ ಸ್ಥಾನ - ಮತ್ತು ಡಿಎಂಕೆ ಅಭ್ಯರ್ಥಿ ರಾಜಾ ಅನ್ಬಳಗನ್ ಅವರನ್ನು 51,632 ಮತಗಳನ್ನು ಪಡೆಯುವ ಮೂಲಕ ಸೋಲಿಸಿದ್ದಾರೆ.
ಆಧವ ಅರ್ಜುನ
ಮಾಜಿ ರಾಷ್ಟ್ರಮಟ್ಟದ ಬ್ಯಾಸ್ಕೆಟ್‌ಬಾಲ್ ಆಟಗಾರ ಆಧವ್ ಅರ್ಜುನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಕೆ ಸ್ಟಾಲಿನ್ ಜೊತೆಗೆ ಕಾಣಿಸಿಕೊಂಡಿದ್ದರು. ಡಿಎಂಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಟಿವಿಕೆ ಸೇರಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಚೆನ್ನೈನ ವಿಲ್ಲಿವಕ್ಕಂ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಎಸ್ ಕೀರ್ತನಾ
ತಮಿಳುನಾಡಿನ ಪಟಾಕಿ ಕೇಂದ್ರವಾದ ಶಿವಕಾಶಿಯ ಕೀರ್ತನಾಗೆ ಕೇವಲ 29 ವರ್ಷ. ಎಸ್ ಕೀರ್ತನಾ ಅವರು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಐದು ಭಾಷೆಯನ್ನು ಸುಲಭವಾಗಿ ಮಾತನಾಡುವ ಇವರು ಹಿಂದಿಯಲ್ಲಿ ಪರಿಣಿತರು. ಕೀರ್ತನಾ, ತಳಮಟ್ಟದ ರಾಜಕೀಯ ಕೆಲಸಗಳಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ರಾಜಕೀಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ, ಪಕ್ಷದ ಚುನಾವಣಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಗಣಿತದಲ್ಲಿ ಬಿಎಸ್ಸಿ ಮತ್ತು ಅಂಕಿಅಂಶಗಳಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಮಹಿಳೆಯರಿಗೆ ಸಮಾನ ವೇತನದೊಂದಿಗೆ ನಿಯಮಿತ ಆರೋಗ್ಯ ತಪಾಸಣೆಗಳನ್ನು ನೀಡುವ ಭರವಸೆ ನೀಡಿದ್ದಾರೆ.
ಡಾ. ಕೆಜಿ ಅರುಣ್‌ರಾಜ್
ಡಾ.ಕೆ.ಜಿ.ಅರುಣ್‌ರಾಜ್ ಅವರು ತಮಿಳುನಾಡಿನ ವೈದ್ಯ ಮತ್ತು ಮಾಜಿ ಭಾರತೀಯ ಕಂದಾಯ ಸೇವಾ ಅಧಿಕಾರಿ. ಅವರು ಟಿವಿಕೆಯ ನೀತಿ ಮತ್ತು ಪ್ರಚಾರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗಿದ್ದು, ಈಗ ಸಚಿವರಾಗಿದ್ದಾರೆ.
ಡಾ.ಟಿ.ಕೆ. ಪ್ರಭು
ಪ್ರಮುಖ ತಮಿಳಗ ವೆಟ್ರಿ ಕಳಗಂ ನಾಯಕ, ಡಾ ಟಿಕೆ ಪ್ರಭು ಅವರು ಕಾರೈಕುಡಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದು, ದಂತ ವೈದ್ಯರಾಗಿದ್ದಾರೆ.
ಕೆ.ಎ. ಸೆಂಗೋಟ್ಟೈಯನ್
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಕೆಎ ಸೆಂಗೋಟ್ಟಯ್ಯನ್, ಐದು ದಶಕಗಳ ಕಾಲ ಪಕ್ಷದಿಂದ ಹೊರಹಾಕಲ್ಪಟ್ಟ ನಂತರ ಕಳೆದ ವರ್ಷ ವಿಜಯ್ ಅವರೊಂದಿಗೆ ಕೈಜೋಡಿಸುವ ಮೂಲಕ ಟಿವಿಕೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಿ. ವೆಂಕಟರಮಣನ್
ಮೊದಲ ಬಾರಿಗೆ ಶಾಸಕರಾದ ಪಿ ವೆಂಕಟರಮಣನ್ ಅವರು ತಮಿಳಗ ವೆಟ್ರಿ ಕಳಗಂನ ಖಜಾಂಚಿ ಮತ್ತು ವಕೀಲರೂ ಆಗಿದ್ದಾರೆ. ಅವರು ಚೆನ್ನೈನ ನಿರ್ಣಾಯಕ ಮೈಲಾಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. 2000 ರಿಂದ ನಟ ವಿಜಯ್ ಅವರ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
ನಿರ್ಮಲ್ ಕುಮಾರ್
ನಿರ್ಮಲ್ ಕುಮಾರ್ ಅವರು ತಮಿಳಗ ವೆಟ್ರಿ ಕಳಗಂನ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಉಪ ಪ್ರಧಾನ ಕಾರ್ಯದರ್ಶಿಯಾಗಿದ್ದು, ಮಧುರೈನ ತಿರುಪ್ಪರಾಂಕುಂದ್ರಂ ಕ್ಷೇತ್ರದಿಂದ ಗೆದ್ದಿದ್ದಾರೆ
ರಾಜಮೋಹನ್ ಅರುಮುಗಂ
ನಟ, ಸ್ಟ್ಯಾಂಡ್-ಅಪ್ ಹಾಸ್ಯನಟ ಮತ್ತು ಪ್ರೇರಕ ಭಾಷಣಕಾರ, ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಇವರು ರಾಜಮೋಹನ್ ಅರುಮುಗಂ - ಚೆನ್ನೈನ ಎಗ್ಮೋರ್ ಕ್ಷೇತ್ರದಿಂದ ಗೆದ್ದಿದ್ದಾರೆ ಮತ್ತು ಈಗ ವಿಜಯ್ ಅವರ ಸಂಪುಟದಲ್ಲಿ ಸಚಿವರಾಗಲಿದ್ದಾರೆ.