ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶಾಶ್ವತವಾಗಿ ದೇಶ ಬಿಟ್ಟು ಹೋಗುತ್ತಿದ್ದಾರೆ ಲಕ್ಷಾಂತರ ಭಾರತೀಯರು... ಕಾರಣ ಏನು ಗೊತ್ತೇ?

ದೇಶದ ಲಕ್ಷಾಂತರ ನಾಗರಿಕರು ವಲಸೆ ಹೋಗುತ್ತಿದ್ದಾರೆ. ಶಾಶ್ವತವಾಗಿ ಬೇರೆ ದೇಶದ ನಾಗರಿಕರಾಗುತ್ತಿದ್ದಾರೆ. 2022ರಿಂದ ಇದು ಮತ್ತಷ್ಟು ಹೆಚ್ಚಳವಾಗುತ್ತಿದ್ದು, ವರ್ಷಕ್ಕೆ ಕನಿಷ್ಠ 2 ಲಕ್ಷಕ್ಕೂ ಹೆಚ್ಚು ಭಾರತೀಯರು ಪೌರತ್ವವನ್ನು ತ್ಯಜಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ಇದಕ್ಕೆ ಕಾರಣ ಏನು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ದೇಶದ ಪೌರತ್ವ ತ್ಯಜಿಸುತ್ತಿರುವ ಲಕ್ಷಾಂತರ ಭಾರತೀಯರು

-

ನವದೆಹಲಿ: ವರ್ಷಕ್ಕೆ ಎರಡು ಲಕ್ಷಕ್ಕೂ ಭಾರತೀಯರು ಪೌರತ್ವವನ್ನು (Indian citizenship) ತ್ಯಜಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು (citizenship) ತ್ಯಜಿಸಿದ್ದಾರೆ. 2022ರಿಂದ ವರ್ಷಕ್ಕೆ 2 ಲಕ್ಷಕ್ಕೂ ಹೆಚ್ಚು ಭಾರತೀಯರು ದೇಶ ಬಿಟ್ಟು ಹೋಗುತ್ತಿದ್ದಾರೆ ಎಂದು ಚಳಿಗಾಲದ ಅಧಿವೇಶನದಲ್ಲಿ (Winter Session) ವಿದೇಶಾಂಗ ಸಚಿವಾಲಯವು (Ministry of External Affairs) ಅಂಕಿ ಅಂಶಗಳ ಸಹಿತ ಸಂಸತ್ತಿಗೆ ಮಾಹಿತಿ ನೀಡಿದೆ. ಇದರಲ್ಲಿ ಹಲವಾರು ಮಂದಿ ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಹುಟ್ಟಿ ಬೆಳೆದ ಊರು ಬಿಟ್ಟು ಬರುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಲಕ್ಷಾಂತರ ಭಾರತೀಯರು ದೇಶವನ್ನೇ ಶಾಶ್ವತವಾಗಿ ಬಿಟ್ಟು ಹೋಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಲಕ್ಷಾಂತರ ಭಾರತೀಯರು ದೇಶವನ್ನು ಬಿಟ್ಟು ಹೋಗಿದ್ದಾರೆ. 2020 ರಿಂದ ಒಂಬತ್ತು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ಬಿಟ್ಟು ಬೇರೆಬೇರೆ ದೇಶಗಳ ಪೌರತ್ವವನ್ನು ಪಡೆದಿದ್ದಾರೆ. 2022ರಿಂದ ಪ್ರತಿ ವರ್ಷ ಎರಡು ಲಕ್ಷಕ್ಕೂ ಹೆಚ್ಚು ಭಾರತೀಯ ಭಾರತೀಯ ಪೌರತ್ವವನ್ನು ತ್ಯಜಿಸುತ್ತಿದ್ದಾರೆ ಎಂಬುದಾಗಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

PM Narendra Modi: ಒಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಭಾರತೀಯರಿಂದ ಯಕ್ಷಗಾನ- ನೃತ್ಯದ ಸ್ವಾಗತ

ಕೋವಿಡ್ ಸಾಂಕ್ರಾಮಿಕದ ಬಳಿಕ ದೇಶವನ್ನು ತ್ಯಜಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದಾಗಿ ವಿದೇಶಾಂಗ ಸಚಿವಾಲಯದ ಅಂಕಿ ಅಂಶಗಳು ತಿಳಿಸುತ್ತವೆ. 2011 ಮತ್ತು 2024 ರ ನಡುವೆ 2.06 ಮಿಲಿಯನ್ ಅಂದರೆ 20 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಇದರಲ್ಲಿ ಅರ್ಧದಷ್ಟು ಕಳೆದ ಐದು ವರ್ಷಗಳಲ್ಲಿ ನಡೆದಿದೆ.

ಹಿಂದಿನ 14 ವರ್ಷಗಳಿಗೆ ಹೋಲಿಸಿದರೆ ಸುಮಾರು ಒಂದು ದಶಕದವರೆಗೆ ವಾರ್ಷಿಕವಾಗಿ ಪ್ರತಿ ವರ್ಷ 1.2 ಲಕ್ಷದಿಂದ 1.45 ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದರು. ಆದರೆ 2022ರಿಂದ ವಾರ್ಷಿಕವಾಗಿ 2 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸುತ್ತಿದ್ದಾರೆ. ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವವನ್ನು ಆಯ್ಕೆ ಮಾಡುತ್ತಿರುವುದಾಗಿ ಅನೇಕರು ತಿಳಿಸಿರುವುದು ವಿದೇಶಾಂಗ ಸಚಿವಾಲಯದ ಮಾಹಿತಿ ತಿಳಿಸಿದೆ.

ಪ್ರತಿಭಾ ಪಲಾಯನದ ಬಗ್ಗೆ ಪಿಎಂಒದ ಮಾಜಿ ಮಾಧ್ಯಮ ಸಲಹೆಗಾರ ಮತ್ತು ವಕ್ತಾರ ಸಂಜಯ ಬರು ತಮ್ಮ 'ಸೆಸೆಷನ್ ಆಫ್ ದಿ ಸಕ್ಸಸ್‌ಫುಲ್: ದಿ ಫ್ಲೈಟ್ ಔಟ್ ಆಫ್ ನ್ಯೂ ಇಂಡಿಯಾ' ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ. ಪ್ರತಿಭಾ ಪಲಾಯನವು 1970ರ ದಶಕದಿಂದಲೂ ಭಾರತದ ಮೇಲೆ ಪರಿಣಾಮ ಬೀರುತ್ತಿದೆ. ಆದರೂ ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. 1970ರ ದಶಕದಿಂದ ವೈದ್ಯರು ಮತ್ತು ಎಂಜಿನಿಯರ್‌ಗಳಂತಹ ನುರಿತ ವೃತ್ತಿಪರರೇ ವಲಸೆ ಹೋಗುತ್ತಿದ್ದಾರೆ. ಈಗ ದೇಶವನ್ನು ಬಿಟ್ಟು ಹೋಗುತ್ತಿರುವವರು ಶ್ರೀಮಂತರು. ಭಾರತೀಯರು ವಲಸೆ ಹೋಗುವ ನಾಲ್ಕು ಹಂತಗಳಲ್ಲಿ ಈಗ ಇರುವುದು ನಾಲ್ಕನೇ ಹಂತ. ಇದು ಈಗ ಆರಂಭಿಕ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯರು ಹೆಚ್ಚಾಗಿ ಯುಎಸ್, ಯುಕೆ ಅಥವಾ ಕೆನಡಾದ ಪಾಸ್‌ಪೋರ್ಟ್‌ಗಾಗಿ ಭಾರತದ ಪಾಸ್‌ಪೋರ್ಟ್‌ಗಳನ್ನು ತ್ಯಜಿಸುತ್ತಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ ಭಾರತವು ದ್ವಿಪೌರತ್ವಕ್ಕೆ ಅನುಮತಿ ನೀಡುವುದಿಲ್ಲ. ಭಾರತೀಯ ಕಾನೂನಿನಡಿಯಲ್ಲಿ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಸ್ವಯಂಪ್ರೇರಣೆಯಿಂದ ಮತ್ತೊಂದು ದೇಶದ ಪೌರತ್ವವನ್ನು ಪಡೆದ ಅನಂತರ ಸ್ವಯಂಚಾಲಿತವಾಗಿ ದೇಶದ ಪೌರತ್ವವನ್ನು ಕಳೆದುಕೊಳ್ಳುತ್ತಾರೆ.

ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗುವವರು ಅಲ್ಲಿ ಪೂರ್ಣ ನಾಗರಿಕ ಮತ್ತು ವೃತ್ತಿಪರ ಹಕ್ಕುಗಳನ್ನು ಪಡೆಯಲು ವಿದೇಶಿ ಪೌರತ್ವವನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಹೀಗಾಗಿ ಅವರು ದೇಶದ ಪೌರತ್ವವವನ್ನು ಬಿಡಲೇಬೇಕಾಗುತ್ತದೆ. ಇದರಿಂದ ಅವರು ಅಲ್ಲಿ ಮತದಾನ, ಸಾಮಾಜಿಕ ಭದ್ರತಾ ಪ್ರಯೋಜನಗಳು, ಅನಿಯಂತ್ರಿತ ನಿವಾಸ, ಸಾರ್ವಜನಿಕ ವಲಯದ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.

ಭಾರತದ ಸಾಗರೋತ್ತರ ನಾಗರಿಕ ಸ್ಥಾನಮಾನವು ವೀಸಾ ಮುಕ್ತ ಪ್ರಯಾಣ ಮತ್ತು ಸೀಮಿತ ಆರ್ಥಿಕ ಹಕ್ಕುಗಳನ್ನು ನೀಡುತ್ತದೆ. ಆದರೆ ಇದು ಯಾವುದೇ ರಾಜಕೀಯ ಹಕ್ಕುಗಳನ್ನು ನೀಡುವುದಿಲ್ಲ. ಹೀಗಾಗಿ ವಿದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಲಸಿಗರಿಗೆ ವಿಶೇಷವಾಗಿ ಕುಟುಂಬಗಳನ್ನು ಹೊಂದಿರುವವರಿಗೆ ವಿದೇಶಿ ಪೌರತ್ವವು ಅಗತ್ಯವಾಗುತ್ತದೆ. ಆದ್ದರಿಂದ ಅವರು ಭಾರತೀಯ ಪೌರತ್ವವನ್ನು ತ್ಯಜಿಸುವ ನಿರ್ಣಯ ಕೈಗೊಳ್ಳುತ್ತಾರೆ.

ಕೋವಿಡ್ ಅನಂತರ ಪೌರತ್ವ ತ್ಯಜಿಸುವವರ ಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣ 2020 ರಲ್ಲಿ ಸಾಂಕ್ರಾಮಿಕ ರೋಗ ಬಂದಾಗ, ಕಾನ್ಸುಲೇಟ್‌ಗಳನ್ನು ಮುಚ್ಚಲಾಯಿತು, ಪ್ರಯಾಣವನ್ನು ನಿರ್ಬಂಧಿಸಲಾಯಿತು, ದೇಶಾದ್ಯಂತ ವಲಸೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಯಿತು. ಹೀಗಾಗಿ ವಿಲೇವಾರಿ ಆಗದೆ ಬಾಕಿಯಾಗಿದ್ದ ಹಲವು ಅರ್ಜಿಗಳನ್ನು 2020 ರಿಂದ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ 2022ರಿಂದ ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳ ವಿಲೇವಾರಿ ನಡೆಯುತ್ತಿದೆ.

ಬಾಂಗ್ಲಾದೇಶ ನಾಯಕರ ಪ್ರಚೋದನಕಾರಿ ಹೇಳಿಕೆ; ಢಾಕಾದಲ್ಲಿ ವೀಸಾ ಅರ್ಜಿ ಕೇಂದ್ರ ಮುಚ್ಚಿದ ಭಾರತ

ವಲಸೆಗೆ ಕಾರಣವೇನು?

ಉನ್ನತ ಅಧ್ಯಯನಕ್ಕಾಗಿ ಹೊರದೇಶಗಳಿಗೆ ವಲಸೆ ಹೋಗುವವರು ಹೆಚ್ಚಾಗಿ ವಿದೇಶಗಳಲ್ಲಿ ವಾಸ ಮಾಡಲು ಬಯಸುತ್ತಾರೆ. ಯಾಕೆಂದರೆ ಅವರು ಪಡೆದ ಶಿಕ್ಷಣ ಮತ್ತು ಕೌಶಲಗಳಿಗೆ ಅವಕಾಶಗಳು ಗಮನಾರ್ಹವಾಗಿ ಉತ್ತಮವಾಗಿರುತ್ತವೆ. ಅಲ್ಲದೇ ಶುದ್ಧ ಗಾಳಿ, ಉತ್ತಮ ಸುರಕ್ಷತೆ, ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಮತ್ತು ಗಮನಾರ್ಹವಾಗಿ ಬಲವಾದ ನಾಗರಿಕ ಸೌಲಭ್ಯಗಳು ಕೂಡ ಅವರನ್ನು ಅಲ್ಲಿ ನೆಲೆಸುವಂತೆ ಮಾಡುತ್ತದೆ.