ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Festival: 14 ಮಕ್ಕಳ ಪಾಲಿಗೆ ಕತ್ತಲಾದ ದೀಪಾವಳಿ; ಕಾರ್ಬೈಟ್ ಗನ್‌ನಿಂದಾಗಿ ದೃಷ್ಟಿ ಕಳೆದುಕೊಂಡ ಪುಟಾಣಿಗಳು

Carbide Gun: ದೀಪಾವಳಿ ಎಂದರೆ ಸಂಭ್ರಮದ ಜತೆಗೆ ಆತಂಕವೂ ಕಾಡುತ್ತದೆ. ಮಕ್ಕಳ ಖುಷಿಗೆ ಎಂದು ತರುವ ಪಟಾಕಿ ಜೀವನ ಪರ್ಯಂತ ನರಳುವ ಹಾಗೇ ಮಾಡುತ್ತದೆ. ಎಷ್ಟೇ ಮುನ್ನಚ್ಚರಿಕೆ ತೆಗೆದುಕೊಂಡರೂ ಅವಘಡ ನಡೆದೇ ಹೋಗುತ್ತದೆ. ಇದೀಗ ಮಧ್ಯ ಪ್ರದೇಶದಲ್ಲಿ ಕಾರ್ಬೈಟ್ ಗನ್‌ನಿಂದಾಗಿ 122 ಮಕ್ಕಳು ಗಾಯಗೊಂಡು, 14 ಮಕ್ಕಳು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಬಾಳಿ ಬದುಕಬೇಕಿದ್ದ ಮಕ್ಕಳ ಪಾಲಿಗೆ ಈ ಬೆಳಕಿನ ಹಬ್ಬ ಕತ್ತಲೆಯನ್ನು ತಂದಿದೆ.

ಪಟಾಕಿ ಅವಘಡ; ದೃಷ್ಟಿ ಕಳೆದುಕೊಂಡ ಮಕ್ಕಳು

-

Profile Sushmitha Jain Oct 23, 2025 8:35 PM

ಭೋಪಾಲ್: ದೀಪಾವಳಿ (Diwali) ಎಂದರೆ ಎಲ್ಲಡೆ ಸಡಗರ. ಎಲ್ಲಿ ನೋಡಿದರೂ ದೀಪಗಳು, ಪಟಾಕಿ (firecracker)ಗಳದ್ದೇ ಸದ್ದು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಚಕ್ರಿ, ರಾಕೆಟ್, ಬಾಂಬ್ ಮುಂತಾದುವುಗಳು ಬರುತ್ತಲೇ ಇರುತ್ತವೆ. ಈ ವರ್ಷದ ಕ್ರೇಜ್ ಆಗಿರುವ ಕಾರ್ಬೈಟ್ ಗನ್ (ದೇಸಿ ಪಾಟಕಿ ಗನ್) ಹಲವು ಮಕ್ಕಳ ಬಾಳನ್ನು ಅಂಧಕಾರದಲ್ಲಿ ಮುಳುಗಿಸಿದೆ. ಹೌದು, ಮಧ್ಯ ಪ್ರದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಈ ಕಾರ್ಬೈಟ್ ಗನ್‌(Carbide Gun)ನಿಂದಾಗಿ 122 ಮಕ್ಕಳು ಗಾಯಗೊಂಡು, 14 ಮಕ್ಕಳು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ವಿಧಿಶಾ(Vidisha) ಜಿಲ್ಲೆಯಲ್ಲಿ ಮಕ್ಕಳ ಕಣ್ಣಿಗೆ ಹಾನಿ ಉಂಟಾದ ಅತೀ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

ನಿಷೇಧವಿದ್ದರೂ ಗನ್ ಮಾರಾಟ

ಅಕ್ಟೋಬರ್ 18ರಂದು ಈ ಅಸುರಕ್ಷಿತ ಕಾರ್ಬೈಟ್‌ ಗನ್‌ಗಳಿಗೆ ಸರ್ಕಾರ ನಿಷೇಧ ಹೇರಿದ್ದರೂ ಸ್ಥಳೀಯ ಮಾರುಕಟ್ಟೆಗಳಲ್ಲಿ ಮುಕ್ತವಾಗಿ ಮಾರಾಟವಾಗುತ್ತಿವೆ. 150-200 ರೂಪಾಯಿಗೆ ಮಾರಾಟವಾಗುವ ಈ ಪಟಾಕಿ ಗನ್‌ಗಳು, ಸಣ್ಣ ಬಾಂಬ್‌ಗಳಂತೆ ಸದ್ದು ಮಾಡುತ್ತವೆ. ಭೋಪಾಲ್, ಇಂದೋರ್, ಜಬಲ್‌ಪುರ ಮತ್ತು ಗ್ವಾಲಿಯರ್ ಆಸ್ಪತ್ರೆಗಳಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡ ಹಲವಾರು ಮಕ್ಕಳು ದಾಖಲಾಗಿದ್ದಾರೆ. ಕಳೆದ 72 ಗಂಟೆಗಳಲ್ಲಿ ಭೋಪಾಲ್‌ನ ಹಮೀದಿಯಾ ಆಸ್ಪತ್ರೆಯಲ್ಲಿ ಮಾತ್ರ 26 ಮಕ್ಕಳು ದಾಖಲಾಗಿದ್ದಾರೆ.

"ಕಾರ್ಬೈಟ್ ಗನ್ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಗನ್‌ಗಳನ್ನು ಮಾರಾಟ ಮಾಡಿರುವ ಅಥವಾ ಪ್ರಚಾರ ಮಾಡಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಇನ್ಸ್‌ಪೆಕ್ಟರ್ ಆರ್‌.ಕೆ. ಮಿಶ್ರಾ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ದಳಪತಿ ವಿಜಯ್ ಭಾರತದ ಮುಖ್ಯಮಂತ್ರಿ; ಯೂಟ್ಯೂಬರ್‌ ಐಶೋಸ್ಪೀಡ್ ನೋಡಿ ಹೀಗಂದಿದ್ಯಾಕೆ ಅಭಿಮಾನಿಗಳು?

ಪೋಷಕರಿಗೆ ವೈದ್ಯರಿಂದ ಎಚ್ಚರಿಕೆ

“ಇದು ಆಟಿಕೆಯಲ್ಲ, ಒಂದು ಸ್ಫೋಟಕ. ಈ ಸಾಧನದಿಂದ ಕಣ್ಣಿಗೆ ನೇರ ಹಾನಿ ಉಂಟಾಗುತ್ತದೆ. ಸ್ಫೋಟದ ವೇಳೆ ಹೊರಬರುವ ಲೋಹದ ತುಂಡುಗಳು ಮತ್ತು ಕಾರ್ಬೈಡ್ ವಾಯು ರೆಟಿನಾವನ್ನು ಸುಡುತ್ತದೆ" ಎಂದು ಹಮೀದಿಯಾ ಆಸ್ಪತ್ರೆಯ ಸಿಎಂಎಚ್ಒ ಡಾ. ಮನೀಶ್ ಶರ್ಮಾ ಹೇಳಿದ್ದಾರೆ. ಮಕ್ಕಳು ಪ್ಲಾಸ್ಟಿಕ್ ಅಥವಾ ಟಿನ್ ಪೈಪ್ ಬಳಸಿ ಈ ಕಾರ್ಬೈಡ್ ಗನ್ ತಯಾರಿಸುತ್ತಿದ್ದಾರೆ. ಅದರೊಳಗೆ ಗನ್‌ ಪೌಡರ್‌, ಬೆಂಕಿಪಟ್ಟಣದ ಕಡ್ಡಿಗಳ ಮದ್ದು ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ತುಂಬಿ ಸಣ್ಣ ರಂಧ್ರದ ಮೂಲಕ ಬೆಳಗಿಸುತ್ತಿದ್ದಾರೆ. ರಾಸಾಯನಿಕ ಕ್ರಿಯೆ ಮತ್ತು ಮಾರಕ ಮಿಶ್ರಣವಾಗಿದೆ. ಈ ಮಿಶ್ರಣ ಸ್ಫೋಟವಾದಾಗ ಉಂಟಾಗುವ ಭೀಕರ ಬ್ಲಾಸ್ಟ್ ನೇರವಾಗಿ ಮುಖ ಮತ್ತು ಕಣ್ಣಿಗೆ ತಗಲುತ್ತದೆ.

"ಸೋಶಿಯಲ್ ಮೀಡಿಯಾಗಳು ಈ ಅಪಾಯಕಾರಿ ಟ್ರೆಂಡ್‌ನ ಮೂಲವಾಗಿದೆ. ಫೈರ್‌ಕ್ರಾಕರ್ ಗನ್ ಚಾಲೆಂಜ್ ಹೆಸರಿನ ವಿಡಿಯೊಗಳು ವೈರಲ್ ಆಗಿದ್ದು, ಲೈಕ್ಸ್ ಹಾಗೂ ವ್ಯೂವ್ಸ್ ಬರಲಿ ಎಂದು ಈ ಪಟಾಕಿ ಗನ್‌ಗಳನ್ನು ಹಾರಿಸುತ್ತಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.