ಕೇಸರಿ ಬಟ್ಟೆ ಧರಿಸಿ ರಾಮಮಂದಿರ ದೇಣಿಗೆ ಕಳ್ಳತನದ ದೃಶ್ಯವನ್ನು ಮರುಸೃಷ್ಟಿಸಿದ ಸಂಸದ ಪಪ್ಪು ಯಾದವ್: ರಾಹುಲ್ ಗಾಂಧಿ ಸಾಥ್
Recreates Ram Temple Donation Theft Scene: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷೇತರ ಸಂಸದ ಪಪ್ಪು ಯಾದವ್ ಅವರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಸಾಂಕೇತಿಕ ಪ್ರದರ್ಶನವು ಬೀದಿ ನಾಟಕದಂತೆ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಸಂಸದರು ದೇಣಿಗೆ ಪೆಟ್ಟಿಗೆಗಳಿಗೆ ಹಣ ಹಾಕಿದರು.
ರಾಮಮಂದಿರ ದೇಣಿಗೆ ಕಳ್ಳತನದ ದೃಶ್ಯವನ್ನು ಮರುಸೃಷ್ಟಿಸಿದ ಸಂಸದ ಪಪ್ಪು ಯಾದವ್ -
ನವದೆಹಲಿ, ಜು.31: ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ (Ram Temple Donation Theft) ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷೇತರ ಸಂಸದ ಪಪ್ಪು ಯಾದವ್ (MP Pappu Yadav) ಅವರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೇಸರಿ ಬಣ್ಣದ ಉಡುಪು ಧರಿಸಿ ಸಂಸತ್ತಿಗೆ ಆಗಮಿಸಿದ ಅವರು ರಾಮ ಮಂದಿರದ ದೇಣಿಗೆ ಹಣದ ಕಳ್ಳತನದ ಘಟನೆಯನ್ನು ನಾಟಕೀಯವಾಗಿ ಪ್ರದರ್ಶಿಸಿದರು. ಸದನದಲ್ಲಿ ಈ ವಿಷಯದ ಕುರಿತು ಚರ್ಚೆಗೆ ಆಗ್ರಹಿಸಿ ಪಪ್ಪು ಯಾದವ್ ಅವರು ರಾಮ ಮಂದಿರದ ದೇಣಿಗೆ ಹಣದ ಕಳ್ಳತನದ ಪ್ರತಿಭಟನೆ ನಡೆಸಿದಾಗ, ಪ್ರತಿಪಕ್ಷದ ಸಂಸದರು ಕೂಡ ಅವರಿಗೆ ಸಾಥ್ ನೀಡಿದರು.
ಸಾಂಕೇತಿಕ ಪ್ರದರ್ಶನವು ಬೀದಿ ನಾಟಕದಂತೆ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಸಂಸದರು ದೇಣಿಗೆ ಪೆಟ್ಟಿಗೆಗಳಿಗೆ ಹಣ ಹಾಕಿದರು. ಇದೇ ವೇಳೆ, ರಾಮ ಮಂದಿರದಲ್ಲಿ ನಡೆದ ದೇಣಿಗೆ ಹಣದ ಕಳ್ಳತನವನ್ನು ಸಂಕೇತಿಸುವಂತೆ ಯಾದವ್ ಹಣವನ್ನು ತಮ್ಮ ಜೇಬಿಗೆ ಹಾಕಿಕೊಂಡರು.
ವಿರೋಧ ಪಕ್ಷದ ಸದಸ್ಯರು ಭಕ್ತರ ಪಾತ್ರವನ್ನು ನಿರ್ವಹಿಸಿದರು. ಸಂಗ್ರಹಣಾ ಪೆಟ್ಟಿಗೆಯಲ್ಲಿ ದೇಣಿಗೆಗಳನ್ನು ಹಾಕಲು ಮುಂದಾದರು. ಪಪ್ಪು ಯಾದವ್ ಅರ್ಚಕರ ತಟ್ಟೆಗೆ ಹಣ ಹಾಕುವಂತೆ ನಟಿಸುತ್ತಾ ಸದ್ದಿಲ್ಲದೆ ದೇಣಿಗೆ ಪೆಟ್ಟಿಗೆಯ ಬದಲು ತನ್ನ ಜೇಬಿಗೆ ಹಾಕಿಕೊಂಡರು. ಇದನ್ನು ಕಂಡು ಭಕ್ತನ ಪಾತ್ರದಲ್ಲಿದ್ದ ಸಮಾಜವಾದಿ ಪಕ್ಷದ (SP) ಸಂಸದರೊಬ್ಬರು, ಈ ಅಕ್ರಮ ಕೃತ್ಯದ ಬಗ್ಗೆ ಅವರನ್ನು ಪ್ರಶ್ನಿಸಿದರು.
ಇಲ್ಲಿದೆ ವಿಡಿಯೋ:
INDI Alliance mocking Hindu sentiments right in front of Parliament!
— Aman Dubey (@Amandud2) July 31, 2026
Pappu Yadav dressed as a pujari, Rahul Gandhi donating money & Pappu Yadav touches Ayodhya MP’s Feet… then the “Pujari” runs away with the donation box! 😡
This is how Rahul Gandhi, Akhilesh Yadav & their… pic.twitter.com/v8JlQoHdGP
ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಮತ್ತು ಧರ್ಮೇಂದ್ರ ಯಾದವ್, ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾದ ಮಹುವಾ ಮಾಝಿ ಸೇರಿದಂತೆ ಹಲವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಅವರು ‘ಅಮಿತ್ ಶಾ ಸದನದಿಂದ ಗೈರಾಗಿರುವುದೇಕೆ?’ ಎಂದು ಬರೆಯಲಾಗಿದ್ದ ದೊಡ್ಡ ಬ್ಯಾನರ್ ಹಿಡಿದಿದ್ದರು.
ಇನ್ನು ಸಂಸತ್ ಭವನದೊಳಗೆ ಪ್ರತಿಭಟನೆಯ ವಿಧಾನಗಳ ಬಗ್ಗೆ ಲೋಕಸಭಾ ಸಚಿವಾಲಯವು ಕಟ್ಟುನಿಟ್ಟಿನ ನಿಲುವನ್ನು ತೆಗೆದುಕೊಂಡಿದೆ. ಸಂಸತ್ತಿನ ಆವರಣದಲ್ಲಿ ವೇಷಭೂಷಣ ಆಧಾರಿತ ಪ್ರತಿಭಟನೆಗಳು ಅಥವಾ ನಾಟಕೀಯ ಪ್ರದರ್ಶನಗಳನ್ನು ಅನುಮತಿಸಲಾಗುವುದಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ.
ಈ ಇಡೀ ಘಟನೆಯ ಬಗ್ಗೆ ಲೋಕಸಭಾ ಸ್ಪೀಕರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ. “ರಾಮ ರಾಮ ಜಪಿಸುತ್ತಾರೆ, ಆದರೆ ಎಲ್ಲವನ್ನೂ ಕಬಳಿಸುತ್ತಾರೆ. ಮನಸ್ಸಿನಲ್ಲಿ ರಾಮ, ಚಿಂತನೆಯಲ್ಲಿ ರಾಮ, ಕಿವಿಯಲ್ಲಿ ಶಿವ, ಜೀವನದಲ್ಲಿ ಉಸಿರಿನಲ್ಲೂ ರಾಮ” ಎಂದು ಪಪ್ಪು ಯಾದವ್ ತಿಳಿಸಿದರು.
ದೇಣಿಗೆ ನೀಡಿದ ಭಕ್ತರಿಗೆ ರಸೀದಿಗಳನ್ನು ನೀಡಲಾಗಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂಬ ಆರೋಪಗಳತ್ತ ಗಮನ ಸೆಳೆಯುವುದು ಈ ಪ್ರತಿಭಟನೆಯ ಉದ್ದೇಶವಾಗಿತ್ತು ಎಂದು ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ಹೇಳಿದರು. ಸಂಸತ್ತಿನ ದ್ವಾರದ ಎದುರು ಪ್ರತಿಭಟನೆ ನಡೆಸಿದ ಸಂಸದರು, “ಅಮಿತ್ ಶಾ ರಾಜೀನಾಮೆ ನೀಡಿ, ಅಮಿತ್ ಶಾ ಸದನಕ್ಕೆ ಬನ್ನಿ ಮತ್ತು ದೇಣಿಗೆ ಕದ್ದವರು, ಅಧಿಕಾರದ ಗದ್ದುಗೆ ಬಿಡಿ” ಎಂಬಂತಹ ಘೋಷಣೆಗಳನ್ನು ಕೂಗಿದರು.