ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಪಹಲ್ಗಾಮ್ ದಾಳಿಯ ತನಿಖೆ ಹೊಣೆ NIA ಹೆಗಲಿಗೆ; ಉಗ್ರರಿಗೆ ನಡುಕ ಶುರು

ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ಮೂಲಗಳು ದೃಢಪಡಿಸಿವೆ. ಈ ಬಗ್ಗೆ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಕೇಸ್ ಡೈರಿ ಮತ್ತು ಎಫ್ಐಆರ್ ಅನ್ನು ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಿದ್ದಾರೆ.

ಪಹಲ್ಗಾಮ್ ದಾಳಿಯ ತನಿಖೆ ಹೊಣೆ NIA ಹೆಗಲಿಗೆ

ಸಾಂದರ್ಭಿಕ ಚಿತ್ರ.

Profile Ramesh B Apr 26, 2025 11:32 PM

ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency-NIA) ವಹಿಸಿಕೊಳ್ಳಲಿದೆ ಎಂದು ಮೂಲಗಳು ದೃಢಪಡಿಸಿವೆ. ಈ ಬಗ್ಗೆ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಕೇಸ್ ಡೈರಿ ಮತ್ತು ಎಫ್ಐಆರ್ ಅನ್ನು ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಿದ್ದಾರೆ. ಇದಕ್ಕೂ ಮುನ್ನ ಎನ್ಐಎ ತಂಡವು ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್‌ಗೆ ತೆರಳಿ ಪರಿಶೀಲನೆ ನಡೆಸಿದೆ.

ಸಂಕೀರ್ಣ ಮತ್ತು ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಈಗಾಗಲೇ ಸಾಮರ್ಥ್ಯ ಸಾಬೀತುಪಡಿಸಿರುವ ಎನ್ಐಎ ಇದೀಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯ ನೇತೃತ್ವ ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದಕರಿಗೆ ನಡುಕ ಆರಂಭವಾಗಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಪ್ರಪಂಚದಾದ್ಯಂತ ಖಂಡಿಸಲಾಗುತ್ತಿದೆ. ಇದರ ಹಿಂದಿನ ದುಷ್ಕರ್ಮಿಗಳನ್ನು ನ್ಯಾಯದ ಮುಂದೆ ತರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಾಕ್ಷ್ಯಗಳನ್ನು ಸಂಗ್ರಹಿಸಲು ಎನ್ಐಎ ಸ್ಥಳೀಯ ಅಧಿಕಾರಿಗಳು ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಕೆಲಸ ಮಾಡಲಿದೆ.



ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ನಿರ್ವಹಿಸುವಲ್ಲಿ ವ್ಯಾಪಕ ಅನುಭವ ಹೊಂದಿರುವ ಎನ್ಐಎ ಈ ಪ್ರಕರಣದ ಸಂಕೀರ್ಣತೆಗಳನ್ನು ಬೇಧಿಸಲು ಸಜ್ಜಾಗಿದೆ. ಎನ್ಐಎ ಪಾಲ್ಗೊಳ್ಳುವಿಕೆಯು ತನಿಖೆಗೆ ಗಮನಾರ್ಹ ಉತ್ತೇಜನವನ್ನು ನೀಡುವ ಸಾಧ್ಯತೆ ಇದೆ.

ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ವ್ಯಾಲಿಯ ಹುಲ್ಲುಗಾವಲಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಪ್ರವಾಸಿಗರ ಧರ್ಮ ಪರಿಶೀಲಿಸಿ, ಮುಸ್ಲಿಮ್‌ ಅಲ್ಲದವರನ್ನು ಉಗ್ರರು ಬಲಿ ತೆಗೆದುಕೊಂಡಿದ್ದರು. ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ರೇಖಾಚಿತ್ರಗಳು ಮತ್ತು ಗುರುತುಗಳನ್ನು ಭದ್ರತಾ ಪಡೆಗಳು ಇಲ್ಲಿಯವರೆಗೆ ಬಹಿರಂಗಪಡಿಸಿವೆ ಮತ್ತು ಗುರುತು ನೀಡುವ ಪ್ರತಿಯೊಬ್ಬರಿಗೂ 20 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿವೆ. ಮೂವರು ಶಂಕಿತ ಭಯೋತ್ಪಾದಕರನ್ನು ಹಾಶಿಮ್ ಮೂಸಾ ಅಲಿಯಾಸ್ ಸುಲೈಮಾನ್, ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಮತ್ತು ಆದಿಲ್ ಹುಸೇನ್ ಥೋಕರ್ ಎಂದು ಗುರುತಿಸಲಾಗಿದೆ. ಮೊದಲ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಾಗಿದ್ದರೆ, ಥೋಕರ್ ಕಾಶ್ಮೀರದ ಸ್ಥಳೀಯ ನಿವಾಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Attack: ಪೆಹಲ್ಗಾಮ್‌ ದಾಳಿಯಿಂದ ಆಘಾತ; ಇಸ್ಲಾಂ ಧರ್ಮ ತೊರೆದ ಶಿಕ್ಷಕ

ಮಾಧ್ಯಮಗಳಿಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಈ ಮಧ್ಯೆ ಶನಿವಾರ (ಏ. 26) ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಭದ್ರತೆ ಹಿತಾಸಕ್ತಿ ಹಿನ್ನೆಲೆಯಲ್ಲಿ ಎಲ್ಲ ಮಾಧ್ಯಮ ಸಂಸ್ಥೆಗಳಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ರಕ್ಷಣಾ ಕಾರ್ಯಾಚರಣೆ, ಸೇನೆಯ ಚಲನವಲನಗಳ ನೇರಪ್ರಸಾರ ಮಾಡದಂತೆ ಸಲಹೆ ನೀಡಿದೆ. ʼʼರಾಷ್ಟ್ರದ ಹಿತದೃಷ್ಟಿಯಿಂದ ಎಲ್ಲ ಮಾಧ್ಯಮಗಳು, ಸುದ್ದಿಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಭದ್ರತೆಗೆ ಸಂಬಂಧಿತ ಕಾರ್ಯಾಚರಣೆಗಳನ್ನು ವರದಿ ಮಾಡುವಾಗ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು" ಎಂದು ಸಚಿವಾಲಯ ತಿಳಿಸಿದೆ.