Operation Sindoor: ಆಪರೇಷನ್ ಸಿಂದೂರ್ ಭಾರತೀಯ ವಾಯುಪಡೆಯ ಮೈಲಿಗಲ್ಲು: ಅಮರ್ ಪ್ರೀತ್ ಸಿಂಗ್
ಪಾಕಿಸ್ತಾನದ ಭೂಪ್ರದೇಶದೊಳಗೆ ನುಗ್ಗಿ ಭಯೋತ್ಪಾದಕ ನೆಲೆಗಳನ್ನು ಹೊಡೆದು ಉರುಳಿಸಿದ ಆಪರೇಷನ್ ಸಿಂದೂರ್ ಭಾರತೀಯ ವಾಯುಪಡೆಯ ಒಂದು ಮೈಲಿಗಲ್ಲು ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂದೂರ್‌ನ ವಿಶೇಷತೆಗಳ ಕುರಿತು ಮಾಹಿತಿ ಹಂಚಿಕೊಂಡರು.

-

ನವದೆಹಲಿ: ಪಾಕಿಸ್ತಾನದ (Pakistan) ಭೂಪ್ರದೇಶದೊಳಗೆ ಸುಮಾರು 300 ಕಿ.ಮೀ.ಗಿಂತ ಹೆಚ್ಚು ದೂರ ಸಾಗಿ ಭಯೋತ್ಪಾದಕ ನೆಲೆಗಳನ್ನು ಹೊಡೆದು ಉರುಳಿಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಭಾರತೀಯ ವಾಯುಪಡೆಯ (Indian Air Force) ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿದೆ ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ (Air Chief Marshal Amar Preet Singh) ತಿಳಿಸಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಭಾರತೀಯ ರಕ್ಷಣಾ ವ್ಯವಸ್ಥೆಯ ಆಟವನ್ನೇ ಬದಲಾಯಿಸಿದೆ ಎಂದು ಹೇಳಿದ್ದಾರೆ.
ಹಿಂಡನ್ ವಾಯುನೆಲೆಯಲ್ಲಿ ಅಕ್ಟೋಬರ್ 8ರಂದು ನಡೆಯಲಿರುವ ವಾರ್ಷಿಕ ವಾಯುಪಡೆ ದಿನದ ಪ್ರಯುಕ್ತ ಮುಂಚಿತವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂದೂರ್ ಈ ವರ್ಷದ ಅತ್ಯಂತ ಮಹತ್ವದ ಮಿಲಿಟರಿ ಕಾರ್ಯಾಚರಣೆ ಎಂದು ಬಣ್ಣಿಸಿದರು.
#WATCH | Delhi: On Operation Sindoor, Indian Air Force chief Air Chief Marshal Amar Preet Singh says, "...A clear directive, clear mandate was given to the Indian Armed Forces... It stands as a lesson which will go down in history that this is one war that was started with a… pic.twitter.com/FJuEpFdVQi
— ANI (@ANI) October 3, 2025
ಆಪರೇಷನ್ ಸಿಂದೂರ್ ಭಾರತದ ಬಲಿಷ್ಠ ವಾಯು ರಕ್ಷಣಾ ಸಾಮರ್ಥ್ಯ ಮತ್ತು ಜಂಟಿ ಸೇವಾ ಯೋಜನೆಯನ್ನು ವಿಶ್ವಕ್ಕೆ ಪರಿಚಯಿಸಿದೆ. ಈ ಕಾರ್ಯಾಚರಣೆಯಲ್ಲಿ ದೀರ್ಘ ಶ್ರೇಣಿಯ ಹಾರುವ ಕ್ಷಿಪಣಿಗಳು (SAM) ಪ್ರಮುಖ ಪಾತ್ರವಹಿಸಿವೆ. ಇದು ನಾವು ಸಾಧಿಸಿದ ಅತಿ ದೊಡ್ಡ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇದರಲ್ಲಿ ಪಾಕಿಸ್ತಾನದ ಪ್ರದೇಶದೊಳಗೆ ಸುಮಾರು 300 ಕಿ.ಮೀ. ದೂರದವರೆಗೆ ದಾಳಿ ನಡೆಸಲಾಗಿತ್ತು. ಈ ಮೂಲಕ ನಮ್ಮ ಬಲಿಷ್ಠ ವಾಯು ರಕ್ಷಣಾ ಮೂಲಸೌಕರ್ಯವು ಪರಿಸ್ಥಿತಿಯನ್ನು ಬದಲಾಯಿಸಿದೆ ಎಂದು ಹೇಳಿದರು.
ಈ ದಾಳಿಯ ವೇಳೆ ಯಾವ ಪಾಕಿಸ್ತಾನದ ಉಪಕರಣಗಳನ್ನು ಹೊಡೆದುರುಳಿಸಲಾಗಿದೆ ಎಂಬುದನ್ನು ಅವರು ಬಹಿರಂಗ ಪಡಿಸಲಿಲ್ಲವಾದರೂ ಭಾರತವು ರಷ್ಯಾದಿಂದ ಖರೀದಿಸಿದ ಮತ್ತು 300 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿರುವ ಅತ್ಯಾಧುನಿಕ ಎಸ್ -400 ಕ್ಷಿಪಣಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಈ ದಾಳಿಯ ಉಲ್ಲೇಖ ಇತಿಹಾಸದಲ್ಲಿ ಉಳಿಯುತ್ತದೆ ಎಂದು ಹೇಳಿದ ಅವರು, ಕೇವಲ ಒಂದು ರಾತ್ರಿಯಲ್ಲಿ ನಡೆದ ಈ ದಾಳಿಯಿಂದ ಪಾಕಿಸ್ತಾನವನ್ನು ಮೊಣಕಾಲೂರುವಂತೆ ಮಾಡಲು ಸಾಧ್ಯವಾಯಿತು. ಇದು 1971ರ ಅನಂತರ ನಡೆದ ಮೊದಲ ವಿಪತ್ತು ಕಾರ್ಯಾಚರಣೆ ಎಂದು ಅವರು ಹೇಳಿದರು.
ದಾಳಿಗಳನ್ನು ಜಂಟಿಯಾಗಿ ಯೋಜಿಸಿದ್ದಕ್ಕಾಗಿ ಮತ್ತು ಕಾರ್ಯಗತಗೊಳಿಸಿದ್ದಕ್ಕಾಗಿ ಐಎಎಫ್ ಮುಖ್ಯಸ್ಥರು ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಕೃತಜ್ಞತೆ ಸಲ್ಲಿಸಿದ ಅವರು, ನಾವು ಜಾಗರೂಕರು, ಅಭೇದ್ಯರು ಮತ್ತು ನಿಖರರು ಎಂಬುದು ಸಾಬೀತಾಗಿದೆ ಎಂದರು.
ಕಾರ್ಯಾಚರಣೆಯ ಸಮಯದಲ್ಲಿ ತಪ್ಪು ಮಾಹಿತಿಯನ್ನು ಎದುರಿಸಲು ಮಾಧ್ಯಮಗಳು ಸಹಾಯ ಮಾಡಿದೆ ಎಂದ ಅವರು, ಹಲವಾರು ಸುಳ್ಳು ಮಾಹಿತಿಗಳು ಪ್ರಚಾರವಾಗಿತ್ತು. ಆದರೆ ಅದನ್ನು ಎದುರಿಸಲು ಮಾಧ್ಯಮವು ಪಡೆಗಳಿಗೆ ಸಾಕಷ್ಟು ಸಹಾಯ ಮಾಡಿತು. ಸೈನಿಕರು ಹೋರಾಡುತ್ತಿರುವಾಗ ಸಾರ್ವಜನಿಕ ನೈತಿಕತೆಯ ಮೇಲೆ ಪರಿಣಾಮ ಬೀರದಂತೆ ಅವರು ನೋಡಿಕೊಂಡರು ಎಂದು ಹೇಳಿದರು.
ಆತ್ಮನಿರ್ಭರತೆಗೆ ಗಮನ
ಪ್ರಸ್ತುತ ಮತ್ತು ಭವಿಷ್ಯದ ಯುದ್ಧಗಳಿಗೆ ನಾವು ಸದಾ ಸಿದ್ಧರಾಗಿರಬೇಕು. ಇದಕ್ಕಾಗಿ ಎಲ್ಲ ಸೇವೆಗಳು ಮತ್ತು ಏಜೆನ್ಸಿಗಳೊಂದಿಗೆ ಸಂಯೋಜಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಸ್ವಾವಲಂಬನೆ ಭಾರತೀಯ ವಾಯುಪಡೆಯ ಮಾರ್ಗಸೂಚಿಯಲ್ಲಿ ಕೇಂದ್ರಬಿಂದುವಾಗಿದೆ ಎಂದು ಹೇಳಿದರು.
ಸ್ವಾವಲಂಬನೆಯತ್ತ ಮುಂದುವರಿಯಲಾಗುವುದು. ಅಗತ್ಯವಿದ್ದಲ್ಲಿ ನಿರ್ಣಾಯಕ ಅಂತರವನ್ನು ತ್ವರಿತವಾಗಿ ತುಂಬಲು ತಂತ್ರಜ್ಞಾನವನ್ನು ಹುಡುಕುವುದಾಗಿ ತಿಳಿಸಿದ ಅವರು ಯುಎಇ, ಈಜಿಪ್ಟ್, ಫ್ರಾನ್ಸ್ ಮತ್ತು ಸಿಂಗಾಪುರದಂತಹ ದೇಶಗಳೊಂದಿಗೆ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ತರಬೇತಿ ಕಾರ್ಯಾಚರಣೆ ನಡೆಸುವ ಯೋಜನೆ ಬಗ್ಗೆ ಉತ್ಸುಕವಾಗಿರುವುದಾಗಿಯೂ ಹೇಳಿದರು.
ವಾಯುಪಡೆಯ 93ನೇ ದಿನಾಚರಣೆ
ವಾಯುಪಡೆಯ 93ನೇ ದಿನವನ್ನು ಅಕ್ಟೋಬರ್ 8ರಂದು ಹಿಂಡನ್ ವಾಯುಪಡೆ ನೆಲೆಯಲ್ಲಿ ಮೆರವಣಿಗೆ ಮೂಲಕ ನಡೆಸಲಾಗುತ್ತದೆ. ಇದಕ್ಕಾಗಿ ಅಕ್ಟೋಬರ್ 6ರಂದು ಪೂರ್ಣ ಉಡುಗೆ ಪೂರ್ವಾಭ್ಯಾಸ ನಡೆಯಲಿದೆ. ಈ ಮೆರವಣಿಗೆಯಲ್ಲಿ ವಾಯುಪಡೆ ಮುಖ್ಯಸ್ಥರು, ನೌಕಾಪಡೆ ಮುಖ್ಯಸ್ಥರು ಮತ್ತು ಸೇನಾ ಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Share Market: ಸೆನ್ಸೆಕ್ಸ್ 224 ಅಂಕ ಜಿಗಿತ, ನಿಫ್ಟಿ 24,850ಕ್ಕೆ ಏರಿಕೆ
ಈ ಸಂದರ್ಭದಲ್ಲಿ ಆಪರೇಷನ್ ಸಿಂದೂರ್ ಧ್ವಜವನ್ನು ಹೊತ್ತ ಮಿ-17 ಹೆಲಿಕಾಪ್ಟರ್‌ನ "ಧ್ವಜ್ ಫ್ಲೈಪಾಸ್ಟ್" ಅನ್ನು ಆಯೋಜಿಸಲಾಗಿದೆ. ಇದರೊಂದಿಗೆ ವಿವಿಧ ಯುದ್ಧ ವಿಮಾನಗಳ ಪ್ರದರ್ಶನಗಳು ಇರಲಿವೆ. ಐಎಎಫ್ ಸ್ವಾವಲಂಬನೆ, ಸಮಸ್ಯೆ ಪರಿಹಾರ ಮತ್ತು ಭವಿಷ್ಯದ ಚಿಂತನೆಯ ಮೇಲೆ ಗಮನ ಕೇಂದ್ರೀಕರಿಸುವ 18 ವಿಶೇಷತೆಗಳನ್ನು ಈ ಆಚರಣೆಗಳಲ್ಲಿ ಹೈಲೈಟ್ ಮಾಡಲಾಗುವುದು ಎಂದು ಅವರು ಹೇಳಿದರು.