ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಸಭೆ ಮುಗಿಸಿ ಹೊರಡಿ"; ತಾಜ್ ಮಹಲ್, ನಿಜಾಮುದ್ದೀನ್ ದರ್ಗಾ ಭೇಟಿ ಬಯಸಿದ್ದ ಪಾಕ್ ಸಚಿವರಿಗೆ ಕೇಂದ್ರದಿಂದ ನೋ ಪರ್ಮಿಶನ್‌

Musadik Malik: ಶಾಂಘೈ ಸಹಕಾರ ಸಂಘಟನೆಯ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಅವರಿಗೆ ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ತಿಳಿದು ಬಂದಿದೆ.

ತಾಜ್ ಮಹಲ್ ಭೇಟಿ ಬಯಸಿದ್ದ ಪಾಕ್ ಸಚಿವರಿಗೆ ಕೇಂದ್ರದಿಂದ ನೋ ಪರ್ಮಿಶನ್‌

ಸಚಿವ ಮುಸಾದಿಕ್ ಮಲಿಕ್ -

Vishakha Bhat Heggar
Vishakha Bhat Heggar Nov 20, 2026 7:11 PM

ನವದೆಹಲಿ: ಶಾಂಘೈ ಸಹಕಾರ ಸಂಘಟನೆಯ (SCO) ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ (Musadik Malik) ಅವರಿಗೆ ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ತಿಳಿದು ಬಂದಿದೆ. ನವೆಂಬರ್ 20 ರಿಂದ 22 ರವರೆಗೆ ದೆಹಲಿಯ ಐತಿಹಾಸಿಕ ಪುರಾಣ ಕಿಲಾದಲ್ಲಿ ನಡೆಯುತ್ತಿರುವ 'ಎಸ್‌ಸಿಒ ನಾಗರಿಕ ಸಂವಾದ ವೇದಿಕೆ' (SCO Civilisational Dialogue Forum) ಸಭೆಯಲ್ಲಿ ಭಾಗವಹಿಸಲು ಮಲಿಕ್ ದೆಹಲಿಗೆ ಬಂದಿದ್ದಾರೆ.

ಪ್ರವಾಸದ ವೇಳೆ ತಾಜ್ ಮಹಲ್ ಹಾಗೂ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅವರು ಅನುಮತಿ ಕೋರಿದ್ದರು. ಆದರೆ, ಎಸ್‌ಸಿಒ ಕಾರ್ಯಕ್ರಮವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಅವಕಾಶವಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟವಾಗಿ ತಿಳಿಸಿರುವುದಾಗಿ ಉನ್ನತ ಮೂಲಗಳು ವರದಿ ಮಾಡಿವೆ. 2023ರಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ ನಂತರ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. 2025ರ ಮೇ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂದೂರ್' ಸೇನಾ ಕಾರ್ಯಾಚರಣೆಯ ನಂತರ ಪಾಕ್ ನಾಯಕರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.

ವಿಪಕ್ಷಗಳ ಆಕ್ರೋಶ

ಪಾಕಿಸ್ತಾನದ ಸಚಿವರಿಗೆ ಭಾರತ ಆಹ್ವಾನ ನೀಡಿರುವುದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪಹಲ್ಗಾಮ್ ದಾಳಿಯ ನಂತರ ನೆರೆ ರಾಷ್ಟ್ರದೊಂದಿಗಿನ ನೀತಿಯಲ್ಲಿ ಏನು ಬದಲಾವಣೆಯಾಗಿದೆ ಎಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿವೆ. ಅಲ್ಲದೆ, ಸಿಂದೂ ನದಿ ನೀರು ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ವಿಚಾರದಲ್ಲಿ ಮುಸಾದಿಕ್ ಮಲಿಕ್ ಈ ಹಿಂದೆ ನೀಡಿದ್ದ ಆಕ್ರಮಣಕಾರಿ ಹೇಳಿಕೆಗಳನ್ನು ವಿಪಕ್ಷಗಳು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿವೆ.

ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡುವ ಸಂಪ್ರದಾಯದಂತೆ ಅಕ್ಟೋಬರ್ 28ರಂದೇ ಪಾಕಿಸ್ತಾನ ಸೇರಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಭಾರತ ಆಹ್ವಾನ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಸರ್ಕಾರ, ಎಸ್‌ಸಿಒ ಚೌಕಟ್ಟಿನೊಳಗೆ ನಾಗರಿಕ ಸಂವಾದ ಮತ್ತು ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸಲು ತಾನು ಬದ್ಧವಾಗಿರುವುದಾಗಿ ತಿಳಿಸಿ ಮಲಿಕ್ ಅವರನ್ನು ಕಳುಹಿಸಿದೆ.