ಭಾರತೀಯ ನೌಕಾಪಡೆಯ ನೌಕೆಗೆ ಪಾಕಿಸ್ತಾನದ ಹಡಗು ಡಿಕ್ಕಿ: ರಾಯಭಾರಿಗೆ ಭಾರತದಿಂದ ಸಮನ್ಸ್
Ship Collision: ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕಿಸ್ತಾನ ನೌಕಾಪಡೆಯ ಹಡಗು ಮತ್ತು ಭಾರತೀಯ ನೌಕೆ ಪರಸ್ಪರ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಭಾರತವು ಪಾಕಿಸ್ತಾನದ ಹಂಗಾಮಿ ರಾಯಭಾರಿ ಚಾರ್ಜ್ ಡಿ’ಅಫೇರ್ಸ್‌ಗೆ ಸಮನ್ಸ್ ಜಾರಿ ಮಾಡಿದೆ. ಈ ಘಟನೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದಿದ್ದು, ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ.16: ಅಂತಾರಾಷ್ಟ್ರೀಯ ಜಲಗಡಿ ಪ್ರದೇಶದಲ್ಲಿ ಪಾಕಿಸ್ತಾನ ನೌಕಾಪಡೆಯ ಹಡಗು (Pakistan Ship) ಮತ್ತು ಭಾರತೀಯ ನೌಕೆಗೆ ಡಿಕ್ಕಿ ಹೊಡೆದಿದೆ. (Indian Navy) ಘಟನೆ ಬಳಿಕ ಭಾರತವು ಪಾಕಿಸ್ತಾನದ (Pakistan) ಹಂಗಾಮಿ ರಾಯಭಾರಿ ಚಾರ್ಜ್ ಡಿ’ಅಫೇರ್ಸ್‌ಗೆ ಸಮನ್ಸ್ ಜಾರಿ ಮಾಡಿದೆ. ಎರಡು ದೇಶಗಳ ನೌಕೆಗಳ ನಡುವಿನ ಮುಖಾಮುಖಿಗೆ ಕಾರಣವಾದ ಪಾಕಿಸ್ತಾನಿ ನೌಕಾಪಡೆಯ ಘಟಕಗಳು ತೋರಿದ ಸ್ವೀಕಾರಾರ್ಹವಲ್ಲದ ಮತ್ತು ವೃತ್ತಿಪರವಲ್ಲದ ವರ್ತನೆಯಿಂದ ಡಿಕ್ಕಿ ಸಂಭವಿಸಿದೆ ಎಂದು ಭಾರತ ಹೇಳಿದೆ. ಈ ಕುರಿತು ತೀವ್ರ ಪ್ರತಿಭಟನೆ ದಾಖಲಿಸಲು ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿ ಸಾದ್ ಅಹ್ಮದ್ ವರ್ರೈಚ್ ಅವರನ್ನು ಕರೆಸಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಘಟನೆ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದಿದ್ದು, ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಆದರೆ, ಪಾಕಿಸ್ತಾನಿ ನೌಕಾಪಡೆಯ ಹಡಗಿನ ಈ ವರ್ತನೆಯು ಸೇನಾ ತಾಲೀಮುಗಳು, ಚಲನೆಗಳು ಮತ್ತು ಸೈನ್ಯದ ಕಾರ್ಯಾಚರಣೆಗಳ ಮುಂಗಡ ನೋಟಿಸ್‌ಗೆ ಸಂಬಂಧಿಸಿದ ಭಾರತ ಮತ್ತು ಪಾಕಿಸ್ತಾನ ನಡುವಿನ 1991ರ ಒಪ್ಪಂದದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯವು ಒತ್ತಿ ಹೇಳಿದೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಎಲ್ಲಾ ಸೇನಾ ಘಟಕಗಳು ಸೂಕ್ತ ಜಾಗರೂಕತೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಸಂಬಂಧಿತ ಒಪ್ಪಂದಗಳ ನಿಬಂಧನೆಗಳನ್ನು ಕಡ್ಡಾಯವಾಗಿ ಗೌರವಿಸಬೇಕು ಎಂಬ ಸಂದೇಶವನ್ನು ಸಂಬಂಧಪಟ್ಟ ಪಾಕಿಸ್ತಾನಿ ಅಧಿಕಾರಿಗಳಿಗೆ ತಲುಪಿಸುವಂತೆ ಪಾಕಿಸ್ತಾನದ ಹಂಗಾಮಿ ರಾಯಭಾರಿಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಓಮನ್ ಕಡಲ ತೀರದಲ್ಲಿ ಮುಳುಗುತ್ತಿದ್ದ ಭಾರತೀಯ ಹಡಗನ್ನು ರಕ್ಷಿಸಿದ ಅಮೆರಿಕನ್ ನೌಕಾಪಡೆ
ವರದಿಗಳ ಪ್ರಕಾರ, ಪಾಕಿಸ್ತಾನಿ ರಾಜತಾಂತ್ರಿಕರನ್ನು ವಿದೇಶಾಂಗ ಸಚಿವಾಲಯದ ಜನಪಥ್ ಕಚೇರಿಗೆ ಸಮನ್ಸ್ ಜಾರಿ ಮಾಡಿ ಕರೆಸಲಾಗಿತ್ತು. ಅಲ್ಲಿ ಅವರು ಸುಮಾರು 30 ನಿಮಿಷಗಳ ಕಾಲ ಇದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ, ಈ ಘಟನೆಯು ಸೆಪ್ಟೆಂಬರ್ 15 ರಂದು ಸಂಜೆ ನಡೆದಿದೆ. ಉತ್ತರ ಅರಬ್ಬೀ ಸಮುದ್ರದಲ್ಲಿ ಕಣ್ಗಾವಲು ಕಾರ್ಯಾಚರಣೆಯಲ್ಲಿದ್ದ ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆಯ ತೀರಾ ಹತ್ತಿರಕ್ಕೆ ಪಾಕಿಸ್ತಾನದ ಹಡಗೊಂದು ಬಂದಿತ್ತು. ಒಮಾನ್ ದೇಶದಿಂದ ಪೂರ್ವಕ್ಕೆ ಸುಮಾರು 220 ಕಿಲೋಮೀಟರ್ ದೂರದಲ್ಲಿ ಪಾಕಿಸ್ತಾನದ ಈ ಯುದ್ಧನೌಕೆಯು ಭಾರತೀಯ ನೌಕೆಯನ್ನು ಉಜ್ಜಿಕೊಂಡು ರಭಸವಾಗಿ ಸಾಗಿತ್ತು.
ಪಾಕಿಸ್ತಾನದ ಹಡಗು ಅತಿ ವೇಗವಾಗಿ ಬಂದು, ಅತ್ಯಂತ ಬೇಜವಾಬ್ದಾರಿಯುತ ಹಾಗೂ ಅಸುರಕ್ಷಿತ ರೀತಿಯಲ್ಲಿ ಚಲಾಯಿಸಿದ್ದರಿಂದ ಈ ಘರ್ಷಣೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ರಕ್ಷಣಾ ಮೂಲಗಳು ಖಚಿತಪಡಿಸಿವೆ.
ಈ ಘಟನೆಯಲ್ಲಿ ಭಾಗಿಯಾದ ನಿಖರವಾದ ನೌಕೆಗಳನ್ನು ಇನ್ನೂ ಅಧಿಕೃತವಾಗಿ ಗುರುತಿಸಲಾಗಿಲ್ಲವಾದರೂ, ಭಾರತದ ಮುಂಚೂಣಿ ಯುದ್ಧನೌಕೆಗೆ ಡಿಕ್ಕಿ ಹೊಡೆದದ್ದು ಪಾಕಿಸ್ತಾನದ ಹುನೈನ್-ಕ್ಲಾಸ್ ಕಾರ್ವೆಟ್ ಯುದ್ಧನೌಕೆ ಎನ್ನಲಾಗಿದೆ.
ಇಂತಹ ಘಟನೆ ನಡೆದಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಜೂನ್ 2011 ರಲ್ಲಿ, ಪಾಕಿಸ್ತಾನ ನೌಕಾಪಡೆಯ ಬಾಬರ್ ಮತ್ತು ಭಾರತದ ಐಎನ್ಎಸ್ ಗೋದಾವರಿ ಹಡಗುಗಳ ನಡುವೆ ಇದೇ ರೀತಿಯ ಘಟನೆ ಸಂಭವಿಸಿತ್ತು.