ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡು ದಂಗಾದ ಜನ; ನೀಟ್ ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ
NEET Examination Security: ನೀಟ್ ಮರುಪರೀಕ್ಷೆಗಾಗಿ ಕೇಂದ್ರ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಮುದ್ರಣ ಕೇಂದ್ರಗಳಿಂದ ಹೊರಬಂದ ಕ್ಷಣದಿಂದ ಪರೀಕ್ಷಾ ಕೇಂದ್ರವನ್ನು ತಲುಪುವವರೆಗೆ ಅಧಿಕಾರಿಗಳು ಅಸಾಧಾರಣ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮೊಹರು ಮಾಡಿದ ಪ್ರಶ್ನೆ ಪತ್ರಿಕೆಗಳನ್ನು ಮೊದಲು ದೆಹಲಿಯಿಂದ ಪ್ರಾದೇಶಿಕ ಕೇಂದ್ರಗಳಿಗೆ ವಿಮಾನದ ಮೂಲಕ ಸಾಗಿಸಲಾಗುತ್ತದೆ.
ನೀಟ್ ಪರೀಕ್ಷೆಗಾಗಿ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ -
ಚೆನ್ನೈ, ಜೂ. 16: ಮಂಗಳವಾರ ಇದ್ದಕ್ಕಿದ್ದಂತೆ ಆಕಾಶದಲ್ಲಿ ಹೆಲಿಕಾಪ್ಟರ್ ಹಾರಾಡುತ್ತಿರುವುದನ್ನು ತಮಿಳುನಾಡಿನ (Tamil Nadu) ತಿರುನಲ್ವೇಲಿಯ ಜನರು ಮೂಕ ವಿಸ್ಮಿತರಾಗಿ ಅಚ್ಚರಿಯಿಂದ ನೋಡುತ್ತ ನಿಂತರು. ಭಾರತೀಯ ಸೇನೆಯ ಹೆಲಿಕಾಪ್ಟರ್, ನಗರವನ್ನು ಸುತ್ತುವರಿದು ಸಶಸ್ತ್ರ ಮೀಸಲು ಮೈದಾನದಲ್ಲಿ ಇಳಿಯಿತು. ಇದೇನಿದು ಯಾವುದೇ ಕಾರಣ ಇಲ್ಲದೆ ಮಿಲಿಟರಿ ಬಂದುಬಿಟ್ಟಿದೆ ಅಂತಾ ಜನ ಬಾಯಿತೆರೆದು ನೋಡುತ್ತಾ ನಿಂತರು. ಹಾಗಂತ ಇದು ಮಿಲಿಟರಿ ಅಭ್ಯಾಸದ ಭಾಗವಾಗಿರಲಿಲ್ಲ. ಬದಲಾಗಿ ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆ ನೀಟ್‌ಗೆ (NEET) ಸಂಬಂಧಿಸಿದ ಪ್ರಾಯೋಗಿಕ ಹೆಲಿಕಾಪ್ಟರ್ ಕಾರ್ಯಾಚರಣೆಯಾಗಿತ್ತು.
ಹೌದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮರು ಪರೀಕ್ಷೆಗೆ ಕೇಂದ್ರ ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿದೆ. ಜೂನ್ 21ರಂದು ನಡೆಯಲಿರುವ ನೀಟ್ ಮರು ಪರೀಕ್ಷೆಗೆ ಮುಂಚಿತವಾಗಿ ಭದ್ರತಾ ಕ್ರಮದ ಭಾಗವಾಗಿ ಈ ಲ್ಯಾಂಡಿಂಗ್ ನಡೆಸಲಾಯಿತು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಕಳೆದ ತಿಂಗಳು ನಡೆದಿದ್ದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದ ನಂತರ ಈ ಮರು ಪರೀಕ್ಷೆಯನ್ನು ಆಯೋಜಿಸಲಾಗಿದೆ.
ತಮಿಳುನಾಡಿನ ತಿರುನಲ್ವೇಲಿಯಲ್ಲಿ ಹಾರಅಟ ನಡೆಸಿದ ಹೆಲಿಕಾಪ್ಟರ್:
#WATCH | Tirunelveli, Tamil Nadu | Arrangements have been made to transport the NEET re-examination question papers from Madurai to Tirunelveli by IAF helicopter.
— Northeast Live (@NELiveTV) June 16, 2026
#IAF #TamilnaduNews #NEET #QUESTIONPAPERSDELIVERY #northeastlive pic.twitter.com/rBEKLs0IsF
ಈ ಬಾರಿ, ಪ್ರಶ್ನೆಪತ್ರಿಕೆಗಳು ಮುದ್ರಣ ಕೇಂದ್ರಗಳಿಂದ ಹೊರಬಂದ ಕ್ಷಣದಿಂದ ಪರೀಕ್ಷಾ ಕೇಂದ್ರವನ್ನು ತಲುಪುವವರೆಗೆ ಅಧಿಕಾರಿಗಳು ಅಸಾಧಾರಣ ಸುರಕ್ಷತಾ ಕ್ರಮ ತೆಗೆದುಕೊಳ್ಳಲಿದ್ದಾರೆ. ಸೇನೆಯ ಕಣ್ಗಾವಲಿನಲ್ಲಿ ಪ್ರತಿಯೊಂದು ಚಟುವಟಿಕೆಯೂ ನಡೆಯಲಿದೆ. ಮೊಹರು ಮಾಡಿದ ಪ್ರಶ್ನೆಪತ್ರಿಕೆಗಳನ್ನು ಮೊದಲು ದೆಹಲಿಯಿಂದ ಪ್ರಾದೇಶಿಕ ಕೇಂದ್ರಗಳಿಗೆ ವಿಮಾನದ ಮೂಲಕ ಸಾಗಿಸಲಾಗುತ್ತದೆ. ದಕ್ಷಿಣ ತಮಿಳುನಾಡಿನಲ್ಲಿ, ಈ ಪ್ರಶ್ನೆಪತ್ರಿಕೆಗಳು ಮೊದಲು ವಿಮಾನದ ಮೂಲಕ ಮಧುರೈಗೆ ತಲುಪಿ, ನಂತರ ಕಠಿಣ ಭದ್ರತೆಯ ನಡುವೆ ಹೆಲಿಕಾಪ್ಟರ್ ಮೂಲಕ ತಿರುನೆಲ್ವೇಲಿಗೆ ರವಾನೆಯಾಗಲಿವೆ.
“ನೀಟ್ ಮರುಪರೀಕ್ಷೆ ಮಿಲಿಟರೀಕರಣದಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ”: ಕೇಂದ್ರದ ವಿರುದ್ಧ ಅಣ್ಣಾಮಲೈ ಗುಡುಗು
ತಿರುನೆಲ್ವೇಲಿಯಲ್ಲಿ ನಡೆಸಲಾದ ಅಣಕು ಕಾರ್ಯಾಚರಣೆಯ ಉದ್ದೇಶವು, ಪರೀಕ್ಷೆಯ ದಿನ ಸಂಪೂರ್ಣ ಸಾಗಣೆ ಮತ್ತು ಭದ್ರತಾ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದನ್ನು ಪರೀಕ್ಷಿಸುವುದಾಗಿತ್ತು.
ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ
ತಮಿಳುನಾಡಿನಲ್ಲಿ ಮಾತ್ರ ಈ ಕಾರ್ಯಾಚರಣೆ ನಡೆಸುತ್ತಿಲ್ಲ. ದೇಶವ್ಯಾಪಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ದೇಶಾದ್ಯಂತ, ಭಾರತೀಯ ವಾಯುಪಡೆಗೆ ನೀಟ್ ಮರು-ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಸುಮಾರು 18 ಪ್ರಾದೇಶಿಕ ಕೇಂದ್ರಗಳಿಗೆ ಸಾಗಿಸುವ ಕಾರ್ಯವನ್ನು ವಹಿಸಲಾಗಿದೆ. ಇದಕ್ಕಾಗಿ ಸಾರಿಗೆ ವಿಮಾನಗಳು ಮತ್ತು Mi-17 ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದುರ್ಗಮ ಪ್ರದೇಶಗಳು ಹಾಗೂ ಕಠಿಣ ಭೂಪ್ರದೇಶಗಳಿರುವ ಭಾಗಗಳಲ್ಲಿ, ಪ್ರಯಾಣದ ಕೊನೆಯ ಹಂತದಲ್ಲಿ ಪ್ರಶ್ನೆಪತ್ರಿಕೆಗಳ ಸಾಗಣೆಯನ್ನು ಹೆಲಿಕಾಪ್ಟರ್‌ಗಳ ಮೂಲಕ ಸಾಗಿಸಲಾಗುತ್ತದೆ. ಸೀಲ್ ಮಾಡಿದ ಪ್ಯಾಕೆಟ್‌ಗಳ ಪ್ರತಿಯೊಂದು ಚಲನವಲನವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಶಿಕ್ಷಣ ಅಧಿಕಾರಿಗಳು, ಭದ್ರತಾ ಸಂಸ್ಥೆಗಳು ಮತ್ತು ರಕ್ಷಣಾ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ಸಂಘಟಿಸುತ್ತಿದ್ದಾರೆ.