80ನೇ ಸ್ವಾತಂತ್ರ್ಯ ದಿನಾಚರಣೆಗೆ ಕೆಂಗಂದು ಬಣ್ಣದ ಪೇಟ ಧರಿಸಿ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಏನಿದರ ವಿಶೇಷತೆ?
PM Modi wearing a maroon safa: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ವಿಶಿಷ್ಟ ಪೇಟ ಧರಿಸುತ್ತಾರೆ. ಈ ಬಾರಿಯೂ ವಿಶಿಷ್ಟ ಪೇಟ ಧರಿಸುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಬಿಳಿ ಕುರ್ತಾ-ಪೈಜಾಮಾ ಮತ್ತು ಕಂದು ಬಣ್ಣದ ನೆಹರು ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ ಅವರ ಈ ಲುಕ್ ಸಂಪ್ರದಾಯದ ಮತ್ತೊಂದು ಅಧ್ಯಾಯಕ್ಕೆ ಸಾಕ್ಷಿಯಾಯಿತು.
ಪ್ರಧಾನಿ ನರೇಂದ್ರ ಮೋದಿ -
ನವದೆಹಲಿ, ಆ.15: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ವಿಶಿಷ್ಟ ಪೇಟ ಧರಿಸುತ್ತಾರೆ. ಈ ಬಾರಿಯೂ ವಿಶಿಷ್ಟ ಪೇಟ ಧರಿಸುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಶನಿವಾರ, ಆ.15) ಕೆಂಪುಕೋಟೆಗೆ (Red Fort) ಆಗಮಿಸುವಾಗ, ಹಳದಿ ಮತ್ತು ಬಿಳಿ ಬಣ್ಣದ ಬಾಂಧನಿ (Bandhani) ವಿನ್ಯಾಸಗಳಿರುವ ಕೆಂಗಂದು (ಮರೂನ್) ಬಣ್ಣದ ಸಾಂಪ್ರದಾಯಿಕ ಪೇಟವನ್ನು ಧರಿಸಿದ್ದಾರೆ.
ಬಿಳಿ ಕುರ್ತಾ-ಪೈಜಾಮಾ ಮತ್ತು ಕಂದು ಬಣ್ಣದ ನೆಹರು ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ ಅವರ ಈ ಲುಕ್ ಸಂಪ್ರದಾಯದ ಮತ್ತೊಂದು ಅಧ್ಯಾಯಕ್ಕೆ ಸಾಕ್ಷಿಯಾಯಿತು. ಈ ವೇಷಭೂಷಣದಲ್ಲಿಯೇ ಅವರು ತಮ್ಮ ಸತತ 13ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ದೇಶವನ್ನುದ್ದೇಶಿಸಿ ಮಾಡಿದರು.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ಅವರ ಕೆಂಪುಕೋಟೆಯ ಭಾಷಣವನ್ನು ನೆನಪಿಸಿಕೊಂಡರೆ, ಅವರು ಹಸಿರು ಬಣ್ಣದ ಹಿಂದೆ ಉದ್ದನೆ ಬಿಟ್ಟಿದ್ದ (tail) ಪ್ರಕಾಶಮಾನವಾದ ಕೆಂಪು ಬಣ್ಣದ ಜೋಧ್‌ಪುರಿ ಬಾಂಧೇಜ್ ಪೇಟವನ್ನು ಧರಿಸಿದ್ದರು. ಅದರ ಮರುವರ್ಷ ಅಂದರೆ 2015 ರಲ್ಲಿ, ಹಳದಿ ಮತ್ತು ವಿವಿಧ ಬಣ್ಣಗಳ ಅಡ್ಡ-ಗೆರೆಗಳ (criss-cross) ವಿನ್ಯಾಸದ ಪೇಟ ಧರಿಸಿದ್ದರು. ಅಂದಿನಿಂದ ಗುಲಾಬಿ, ಕೆಂಪು, ಕೇಸರಿ, ಬಾಂಧನಿ ಮತ್ತು ಲೆಹರಿಯಾ ಶೈಲಿಯ ಪೇಟಗಳು ಹಾಗೂ ರಾಷ್ಟ್ರಧ್ವಜದ ಬಣ್ಣಗಳನ್ನು ಒಳಗೊಂಡ ಪೇಟವನ್ನೂ ಅವರು ಧರಿಸಿದ್ದಾರೆ.
"ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲಿದೆ"; ಸ್ವದೇಶಿಕರಣಕ್ಕೆ ಒತ್ತು ನೀಡಲು ಪ್ರಧಾನಿ ಕರೆ
ಈ ಪೇಟಗಳಲ್ಲಿ ಹೆಚ್ಚಿನವು ರಾಜಸ್ಥಾನ ಮತ್ತು ಪಶ್ಚಿಮ ಭಾರತದ ವಿಶಾಲವಾದ ಜವಳಿ ಸಂಪ್ರದಾಯಗಳಿಂದ ಪ್ರೇರಿತವಾಗಿವೆ. ಇವುಗಳ ಬಣ್ಣಗಳು ಸಾಮಾನ್ಯವಾಗಿ ಗಾಢವಾಗಿರುತ್ತವೆ. ಪೇಟದ ಹಿಂದೆ ಉದ್ದನೆ ಬಿಟ್ಟಿರುವ ಅಥವಾ ಬಾಲವು (tails) ಹೆಚ್ಚಾಗಿ ಉದ್ದವಾಗಿರುತ್ತವೆ. ಕೇಸರಿ, ಕೆಂಪು ಮತ್ತು ಹಳದಿ ಬಣ್ಣಗಳನ್ನೇ ಹೆಚ್ಚಾಗಿ ಧರಿಸಿದ್ದಾರೆ.
ಪ್ರಧಾನಿ ಈ ರೀತಿಯ ಪೇಟ ಧರಿಸುವುದು ಆಕಸ್ಮಿಕವಲ್ಲ ಎಂದು ರಾಜಕೀಯ ವಿಶ್ಲೇಷಕ ಸಜ್ಜನ್ ಕುಮಾರ್ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಉಡುಪು ಮತ್ತು ವೇಷಭೂಷಣಗಳ ಆಯ್ಕೆಯು ಉದ್ದೇಶಪೂರ್ವಕವಾಗಿದ್ದು, ರವಾನಿಸುವ ಸಂದೇಶದ ಬಗ್ಗೆ ಅವರು ಅತ್ಯಂತ ಜಾಗರೂಕರಾಗಿದ್ದಾರೆ ಎಂದು ಕುಮಾರ್ ಅವರು ತಿಳಿಸಿದರು. ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಏನು ಧರಿಸುವುದಿಲ್ಲ ಎಂಬುದರ ಬಗ್ಗೆಯೂ ಆಸಕ್ತಿದಾಯಕ ಸಂಗತಿ ಇದೆ ಎಂದು ಕುಮಾರ್ ಹೇಳಿದರು.
ಪ್ರಧಾನಿ ಮೋದಿ ಅವರು ಇತರ ಸಂದರ್ಭಗಳಲ್ಲಿ ಸಿಖ್ ಶೈಲಿಯ ಪೇಟಗಳನ್ನು ಧರಿಸಿದ್ದರೂ, ಅವರ ಸ್ವಾತಂತ್ರ್ಯ ದಿನಾಚರಣೆಯ ಪೇಟಗಳ ಆಯ್ಕೆಯು ಸಾಮಾನ್ಯವಾಗಿ ಸ್ಪಷ್ಟವಾದ ಧಾರ್ಮಿಕ ಗುರುತನ್ನು ಹೊಂದಿರುವ ಶೈಲಿಗಳಿಂದ ದೂರವೇ ಉಳಿದಿದೆ. ಅಷ್ಟೇ ಅಲ್ಲದೆ, ಇವು ಹರಿಯಾಣ ಮತ್ತು ಉತ್ತರ ಭಾರತದ ಇತರ ಭಾಗಗಳ ರೈತರು ಧರಿಸುವ ಹೆಚ್ಚು ಸುಲಭ ಹಾಗೂ ಸರಳ ಶೈಲಿಯ ಪೇಟಗಳನ್ನು ಹೋಲುವುದಿಲ್ಲ.
ಬದಲಾಗಿ, ಈ ಪೇಟಗಳು ಐತಿಹಾಸಿಕವಾಗಿ ರಾಜಸ್ಥಾನ ಮತ್ತು ಗುಜರಾತ್ ಪ್ರಾಂತ್ಯಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ರಾಜಮನೆತನದ ಶೈಲಿಯ ಪೇಟ ಹಾಗೂ ಭವ್ಯವಾದ ಸಾಂಪ್ರದಾಯಿಕ ಶೈಲಿಗಳಿಗೆ ಹತ್ತಿರವಾಗಿದೆ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ಧರಿಸುವ ಪೇಟಗಳು ಕೇವಲ ವೇಷಭೂಷಣವಾಗಿರದೆ, ಪ್ರತಿ ವರ್ಷವೂ ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸರ್ಕಾರದ ರಾಜಕೀಯ ಆದ್ಯತೆಗಳನ್ನು ಜಾಗತಿಕವಾಗಿ ಬಿಂಬಿಸುವ ಪ್ರಮುಖ ಮಾಧ್ಯಮವಾಗಿ ಬದಲಾಗುತ್ತಾ ಬಂದಿವೆ.