Viral News: ಆರೋಪಿಗಳನ್ನ ಖುಲಾಸೆಗೊಳಿಸಿದ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ದೂರುದಾರ
Supreme Court: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ನ್ಯಾಯಾಲಯದ ಆವರಣದಲ್ಲೇ ಶೂ ಎಸೆಯಲು ಯತ್ನಿಸಿದ ಘಟನೆ ಕಳೆದ ವಾರ ನಡೆದಿತ್ತು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಆರೋಪದ ಮೇಲೆ ವಕೀಲ ರಾಕೇಶ್ ಕಿಶೋರ್ ಅವರನ್ನು ಬಂಧಿಸಲಾಗಿತ್ತು. ಇದೀಗ ಇಂತದೇ ಮತ್ತೊಂದು ಅಮಾನವೀಯ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ -

ಗಾಂಧಿನಗರ: ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಲೇ ವ್ಯಕ್ತಿಯೊಬ್ಬ ನಾಯಾಯಧೀಶರಿಗೆ ಶೂ ಎಸೆದಿರುವ ಘಟನೆ ಗುಜರಾತ್ (Gujarat)ನ ಅಹಮದಾಬಾದ್ (Ahmedabad)ನಲ್ಲಿ ಮಂಗಳವಾರ ನಡೆದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ (BR Gavai) ಅವರ ಮೇಲೆ ಸುಪ್ರೀಂ ಕೋರ್ಟ್(Supreme Court)ನಲ್ಲಿ ನಡೆದ ಶೂ ದಾಳಿಯ ಒಂದು ವಾರದ ಬಳಿಕ ಈ ಘಟನೆ ನಡೆದಿದೆ.
ಹೆಚ್ಚುವರಿ ನ್ಯಾಯಾಧೀಶರಾದ ಎಂ.ಪಿ.ಪುರೋಹಿತ್(MP Purohit) ಅವರ ಮೇಲೆಯೇ ಶೂ ದಾಳಿ ನಡೆದಿದ್ದು, ಘಟನೆಯಲ್ಲಿ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಹಲ್ಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಸಿದ್ದನ್ನು ಸೆಷೆನ್ಸ್ ನ್ಯಾಯಾಲಯ (Sessions Court) ಎತ್ತಿ ಹಿಡಿದಿದ್ದಕ್ಕೆ ಕೊಪಗೊಂಡ ವ್ಯಕ್ತಿ, ನ್ಯಾಯಾಧೀಶರ ಮೇಲೆ ಶೂ ಎಸೆದಿದ್ದಾನೆ ಎಂದು ವರದಿಗಳು ತಿಳಿಸಿವೆ.
ಈ ಸುದ್ದಿಯನ್ನು ಓದಿ: Physical Assault: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ; ಮಹಾರಾಷ್ಟ್ರದ ಗುರುಕುಲ ಮುಖ್ಯಸ್ಥನ ಬಂಧನ
ಏನಿದು ಪ್ರಕರಣ?
ಈ ಪ್ರಕರಣ 1997ರಲ್ಲಿ ಗುಜರಾತ್‌ನ ಗೋಮ್ಟಿಪುರ(Gomtipur)ದಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿದ್ದಾಗಿದೆ. ಆ ವ್ಯಕ್ತಿಯ ತಂದೆ ಕೆಲ ಯುವಕರಿಂದ ಹಲ್ಲೆಗೊಳಗಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಗೋಮ್ಟಿಪುರ ಪೊಲೀಸ್ ಠಾಣೆಯಲ್ಲಿ ಆ ನಾಲ್ವರು ಯುವಕರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮೆಟ್ರೋಪಾಲಿಟಿನ್ ನ್ಯಾಯಾಲಯ (Metropolitan Court) 2017ರ ಫೆಬ್ರವರಿಯಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಬಳಿಕ 2017ರ ಮೇಯಲ್ಲಿ ದೂರುದಾರ ವ್ಯಕ್ತಿ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು, ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದು 2025ರ ಅಕ್ಟೋಬರ್ 13ರಂದು ಅರ್ಜಿಯನ್ನು ವಜಾಗೊಳಿಸಿತು.
ನ್ಯಾಯಾಲಯದ ಈ ತೀರ್ಪಿನಿಂದ ಕೋಪಗೊಂಡ ದೂರುದಾರ ಕೋರ್ಟ್‌ನಲ್ಲೇ ಕೂಗಾಡಿ ಅನುಚಿತವಾಗಿ ವರ್ತಿಸಿದ್ದಾನೆ. ವಕೀಲರು ಹಾಗೂ ಪೊಲೀಸರು ಶಾಂತಗೊಳಿಸಲು ಎಷ್ಟೇ ಪ್ರಯತ್ನಿಸಿದರೂ ಸುಮ್ಮನಾಗದ ಆ ವ್ಯಕ್ತಿ, ನ್ಯಾಯಾಧೀಶರ ಮೇಲೆ ಶೂ ಎಸೆದಿದ್ದು, ಅವರು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಕೂಡಲೇ ನ್ಯಾಯಾಲಯದ ಸಿಬ್ಬಂದಿ ಹಾಗೂ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕ ಅಭಿಯೋಜಕ ಸುಧೀರ್ ಬ್ರಹ್ಮಭಟ್ (Sudhir Brahmbhatt) ನೀಡಿರುವ ಮಾಹಿತಿಯಂತೆ ನ್ಯಾಯಾಧೀಶ ಪುರೋಹಿತ್ ಆ ವ್ಯಕ್ತಿಯ ವಿರುದ್ಧ ದೂರು ದಾಖಲಿಸದಂತೆ ತಿಳಿಸಿದ್ದಾರೆ. ಅಲ್ಲದೇ ಅತನ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳದಂತೆ ತಿಳಿಸಿದ್ದಾರೆ.
ಇನ್ನು ದೆಹಲಿಯಲ್ಲಿ ಭಾರತೀಯ ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಕರಣದ ಕೆಲವೇ ದಿನಗಳಲ್ಲಿ ಈ ಘಟನೆಯು ನಡೆದಿದ್ದು, ನ್ಯಾಯಾಂಗ ಭದ್ರತೆ ಕುರಿತು ದೇಶಾದ್ಯಾಂತ ಆತಂಕ ಹುಟ್ಟಿಸಿದೆ. ಈ ಎರಡೂ ದಾಳಿಗಳನ್ನು ತೀವ್ರವಾಗಿ ಗುಜರಾತ್ ನ್ಯಾಯಾಂಗ ಸೇವಾ ಸಂಘ ತೀವ್ರವಾಗಿ ಖಂಡಿಸಿದ್ದು, ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.