ಹಣದುಬ್ಬರದ ಬಿಸಿ ನಡುವೆ ಬಡ್ಡಿದರ ಏರಿಕೆ: ರೆಪೊ ದರ ಶೇ. 5.5ಕ್ಕೆ ಹೆಚ್ಚಿಸಿದ ಭಾರತೀಯ ರಿಸರ್ವ್ ಬ್ಯಾಂಕ್
RBI Hikes Repo Rate: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ.0.25ರಷ್ಟು ಹೆಚ್ಚಿಸಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ.5.25 ರಿಂದ ಶೇ.5.5 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ.
(ಸಂಗ್ರಹ ಚಿತ್ರ) -
ನವದೆಹಲಿ, ಅ.7: ಮಾರುಕಟ್ಟೆ ನಿರೀಕ್ಷೆಯಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಬುಧವಾರ (ಅ.7) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇ.0.25ರಷ್ಟು ಹೆಚ್ಚಿಸಿದೆ. ಈ ಬಾರಿ ಫೆಬ್ರವರಿ 2023ರ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಲಾಗಿದೆ (repo rate hike). ಅಂದರೆ, ಫೆಬ್ರವರಿ 2023ರ ಬಳಿಕ ಮೊದಲ ಬಾರಿಗೆ ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ರೆಪೊ ದರ ಎಂದರೆ, ಆರ್‌ಬಿಐ ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವಾಗ ವಿಧಿಸುವ ಬಡ್ಡಿದರ.
ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ.5.25 ರಿಂದ ಶೇ.5.5 ಕ್ಕೆ ಹೆಚ್ಚಿಸುವ ನಿರ್ಧಾರವನ್ನು ಸರ್ವಾನುಮತದಿಂದ ತೆಗೆದುಕೊಂಡಿದೆ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವುದು, ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಹಾಗೂ ರೂಪಾಯಿ ಮೌಲ್ಯ ಕುಸಿದಿರುವುದರ ಮಧ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಜೊತೆಗೆ, ವ್ಯಾಪಾರಕ್ಕೆ ಸಂಬಂಧಿಸಿದ ಅನಿಶ್ಚಿತತೆ ಮುಂದುವರಿದಿದೆ. ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲಿನ ವಿಶ್ವಾಸವೂ ದುರ್ಬಲವಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ಯುದ್ಧದ ಪರಿಣಾಮದಿಂದ ಜಾಗತಿಕ ವ್ಯಾಪಾರ ಮತ್ತು ಸರಬರಾಜು ಸರಪಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದರಿಂದ ತೈಲ ಸೇರಿದಂತೆ ಹಲವು ವಸ್ತುಗಳ ಬೆಲೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.
ʼʼಪರಿಸ್ಥಿತಿ ಇನ್ನೂ ಹದಗೆಟ್ಟಿಲ್ಲʼʼ: ರುಪಾಯಿ ಮೌಲ್ಯ ಕುಸಿತದ ಬಗ್ಗೆ ಆರ್‌ಬಿಐ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್ ಅಭಯ
ಆದರೆ, ಭಾರತದ ಆರ್ಥಿಕತೆ ಸದೃಢವಾಗಿದ್ದು, ಈ ಜಾಗತಿಕ ಸವಾಲುಗಳ ನಡುವೆಯೂ ಸ್ಥಿರವಾಗಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ, ರೆಪೊ ದರ ಕಡಿತ ಮಾಡುವ ಸಾಧ್ಯತೆ ಸದ್ಯಕ್ಕಿಲ್ಲ ಎಂದು ಆರ್‌ಬಿಐ ಗವರ್ನರ್ ಸ್ಪಷ್ಟಪಡಿಸಿದ್ದಾರೆ.
2018ರ ಬಳಿಕ ಇದೇ ಮೊದಲ ಬಾರಿಗೆ ಆರ್‌ಬಿಐ ತನ್ನ ಹಣಕಾಸು ನೀತಿಯ ನಿಲುವನ್ನು ತಟಸ್ಥದಿಂದ ಹಂತ-ಹಂತವಾಗಿ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ತಟಸ್ಥ ನಿಲುವು ಎಂದರೆ ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯ ಪರಿಸ್ಥಿತಿಯನ್ನು ನೋಡಿಕೊಂಡು ಅಗತ್ಯವಿದ್ದರೆ ಬಡ್ಡಿದರವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅವಕಾಶವನ್ನು ಆರ್‌ಬಿಐ ಮುಕ್ತವಾಗಿಟ್ಟಿದೆ.
ಆದರೆ ಕ್ರಮಬದ್ಧ ಬಿಗಿಗೊಳಿಸುವಿಕೆ (Calibrated Tightening) ಎಂದರೆ ಹಣದುಬ್ಬರದ ಒತ್ತಡ ಮುಂದುವರಿದರೆ ಹಣಕಾಸು ನೀತಿಯನ್ನು ಮತ್ತಷ್ಟು ಬಿಗಿಗೊಳಿಸಲು ಆರ್‌ಬಿಐ ಸಿದ್ಧವಾಗಿದೆ ಎಂಬ ಸೂಚನೆಯಾಗಿದೆ. ಸದ್ಯಕ್ಕೆ ಬಡ್ಡಿದರ ಕಡಿತದ ಸಾಧ್ಯತೆ ಕಡಿಮೆಯಾಗಿದ್ದು, ಹಣದುಬ್ಬರದ ಅಪಾಯ ಮತ್ತಷ್ಟು ಹೆಚ್ಚಾದರೆ ಮುಂದಿನ ದಿನಗಳಲ್ಲಿ ದರ ಏರಿಕೆಯ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ. ಪ್ರಸಕ್ತ ಹಣಕಾಸು ವರ್ಷದ ಪ್ರಮುಖ ಹಣದುಬ್ಬರ ಮುನ್ಸೂಚನೆಯನ್ನು ಹಿಂದಿನ ಶೇ. 4.3 ರಿಂದ ಶೇ. 4.4 ಕ್ಕೆ ಹೆಚ್ಚಿಸಿದೆ.