Thug Life: ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ ಚಿತ್ರಕ್ಕೆ ಭದ್ರತೆ ನೀಡಲು ಸಿದ್ಧ; ಸುಪ್ರೀಂ ಕೋರ್ಟ್ಗೆ ತಿಳಿಸಿದ ರಾಜ್ಯ ಸರ್ಕಾರ
Supreme Court: ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ ನಟನೆಯ ʼಥಗ್ ಲೈಫ್ʼ ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ʼಥಗ್ ಲೈಫ್ʼ ಸಿನಿಮಾ ರಿಲೀಸ್ಗೆ ಅನುವು ಮಾಡಿಕೊಡಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಲಾಗಿದೆ.

ʼಥಗ್ ಲೈಫ್ʼ ಚಿತ್ರದ ಪೋಸ್ಟರ್.

ಹೊಸದಿಲ್ಲಿ: ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan) ನಟನೆಯ ʼಥಗ್ ಲೈಫ್ʼ (Thug Life) ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಭದ್ರತೆ ಒದಗಿಸುವುದಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ (Supreme Court) ತಿಳಿಸಿದೆ. ಈ ಮೂಲಕ ಚಿತ್ರ ನಿರ್ಮಾಪಕರು ಮತ್ತು ಕಲಾವಿದರಿಗೆ ರಕ್ಷಣೆ ನೀಡುವುದಾಗಿ ಹೇಳಿದೆ. ʼಥಗ್ ಲೈಫ್ʼ ಸಿನಿಮಾ ರಿಲೀಸ್ಗೆ ಅನುವು ಮಾಡಿಕೊಡಬೇಕೆಂದು ಸುಪ್ರೀಂ ಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಲಾಗಿದೆ. ʼಥಗ್ ಲೈಫ್ʼ ನಿರ್ಮಾಪಕರು ರಾಜ್ಯದಲ್ಲಿ ಚಿತ್ರ ಬಿಡುಗಡೆಯ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಜಸ್ಟೀಸ್ ಮನಮೋಹನ್, ಜಸ್ಟೀಸ್ ಜೆ.ಭುಯಾನ್ ಪೀಠ ವಿಚಾರಣೆ ನಡೆಸಿತ್ತು. ಅದಾಗ್ಯೂ ವಿಶ್ವಾದ್ಯಂತ ʼಥಗ್ ಲೈಫ್ʼ ಚಿತ್ರ ತೆರೆಕಂಡು 2 ವಾರ ಕಳೆದರೂ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಹಿಂಜರಿಯುತ್ತಿದ್ದಾರೆ.
"ಒಂದು ವೇಳೆ ನಿರ್ಮಾಪಕರು ಕರ್ನಾಟಕದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದರೆ, ರಾಜ್ಯ ಸರ್ಕಾರವು ಭದ್ರತೆ ಒದಗಿಸಲು ಸಿದ್ಧ" ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದೆ. 'ಥಗ್ ಲೈಫ್' ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಈ ವೇಳೆ ಸುಪ್ರೀಂ ಕೋರ್ಟ್ ಗುರುವಾರ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ.
Delhi: On the Supreme Court hearing regarding actor Kamal Haasan's movie 'Thug Life', Advocate A. Vilan says, "Today, the state of Karnataka filed an affidavit stating that they are duty-bound to provide protection and will assist and aid in the release of the movie. They will… pic.twitter.com/o7hyHeMKD8
— IANS (@ians_india) June 19, 2025
ಈ ಸುದ್ದಿಯನ್ನೂ ಓದಿ: Kamal Haasan: ಸಾರ್ವಜನಿಕ ಸಭೆಯಲ್ಲಿ ಅಭಿಮಾನಿ ಕೊಟ್ಟ ಗಿಫ್ಟ್ ನೋಡಿ ಸಿಟ್ಟಾದ ಕಮಲ್ ಹಾಸನ್; ಏನಿದು ಘಟನೆ?
ಸುಪ್ರೀಂ ಕೋರ್ಟ್ ಸೂಚನೆಯಲ್ಲಿ ಏನಿದೆ?
ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ʼಥಗ್ ಲೈಫ್ʼ ಚಿತ್ರದ ಬಿಡುಗಡೆಯನ್ನು ತಡೆಯುವುದಾಗಿ ಬೆದರಿಕೆ ಹಾಕಿರುವ ಗುಂಪುಗಳನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಟೀಕಿಸಿತ್ತು. ʼಥಗ್ ಲೈಫ್ʼ ಪ್ರದರ್ಶನವನ್ನು ವಿರೋಧಿಸುವ ಗುಂಪುಗಳಿಂದ ಬರುವ ಬೆದರಿಕೆಗಳಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ಗೆ ಒಪ್ಪಿಗೆ ನೀಡಿ, ʼʼಯಾವುದೇ ಬೆದರಿಕೆಗಳಿಗೆ ಅವಕಾಶವಿಲ್ಲ. ಇಷ್ಟವಿದ್ದವರು ಸಿನಿಮಾ ನೋಡಬಹುದು, ಇಲ್ಲದಿದ್ದರೆ ಬಿಡಬಹುದುʼʼ ಎಂದು ಹೇಳಿತ್ತು. 'ಥಗ್ ಲೈಫ್' ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಿ ಮಹೇಶ್ ರೆಡ್ಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಏನಿದು ವಿವಾದ?
ಇತ್ತೀಚೆಗೆ ʼಥಗ್ ಲೈಫ್ʼ ಚಿತ್ರದ ಆಡಿಯೋ ಲಾಂಚ್ನಲ್ಲಿ ಭಾಗವಹಿಸಿದ್ದ ನಟ ಕಮಲ್ ಹಾಸನ್ ʼʼಕನ್ನಡ ಭಾಷೆ ತಮಿಳು ಹುಟ್ಟಿದೆʼʼ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಕಮಲ್ ಹಾಸನ್ ಕ್ಷಮೆ ಕೋರಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಕಮಲ್ ಕ್ಷಮೆ ಕೋರದ ಹಿನ್ನೆಲೆಯಲ್ಲಿ ಚಿತ್ರ ರಾಜ್ಯದಲ್ಲಿ ತೆರೆ ಕಂಡಿಲ್ಲ.
ಭಾರಿ ನಿರೀಕ್ಷೆ ಮೂಡಿಸಿದ್ದ ಚಿತ್ರ
ಸುಮಾರು ಮೂರೂವರೆ ದಶಕಗಳ ಬಳಿಕ ಮಣಿರತ್ನಂ ಮತ್ತು ಕಮಲ್ ಹಾಸನ್ ʼಥಗ್ ಲೈಫ್ʼ ಚಿತ್ರಕ್ಕಾಗಿ ಒಂದಾದ ಹಿನ್ನಲೆಯಲ್ಲಿ ಭಾರಿ ನಿರೀಕ್ಷೆ ಮೂಡಿತ್ತು. ಸಿಂಬು, ತ್ರಿಶಾ, ಅಭಿರಾಮಿ, ಜೋಜು ಜಾರ್ಜ್ ಮತ್ತಿತರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಇದೀಗ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಜತೆಗೆ ಕರ್ನಾಟಕದಲ್ಲಿ ರಿಲೀಸ್ ಆಗದಿರುವುದು ಕೂಡ ಚಿತ್ರಕ್ಕೆ ದೊಡ್ಡ ಹೊಡೆತ ನೀಡಿದೆ.