RIMS Student: ಆಸ್ಪತ್ರೆಯ ಕ್ಯಾಂಟೀನ್ ಚಹಾ ಕುಡಿದು ವಿದ್ಯಾರ್ಥಿನಿ ಅಸ್ವಸ್ಥ; ವೆಂಟಿಲೇಟರ್‌ನಲ್ಲಿ ಚಿಕಿತ್ಸೆ
ಜಾರ್ಖಂಡ್‌ನ ಅತ್ಯುನ್ನತ ಆರೋಗ್ಯ ಸಂಸ್ಥೆಯಾದ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯು ಗುರುವಾರ ರಾತ್ರಿ ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಚಹಾ ಕುಡಿದ ಬಳಿಕ ಅಸ್ವಸ್ಥಳಾಗಿದ್ದು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.


ರಾಂಚಿ: ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ (RIMS Hospital canteen) ಚಹಾ ಕುಡಿದ ಬಳಿಕ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ರಾಂಚಿಯಲ್ಲಿ (Ranchi) ನಡೆದಿದೆ. ಜಾರ್ಖಂಡ್‌ನ (Jharkhand) ಅತ್ಯುನ್ನತ ಆರೋಗ್ಯ ಸಂಸ್ಥೆಯಾದ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (Rajendra Institute of Medical Sciences) ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯು ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಚಹಾ ಕುಡಿದ ಬಳಿಕ ಅಸ್ವಸ್ಥಳಾಗಿದ್ದಾಳೆ. ಅವಳು ಈಗ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿನಿಯ ಟೀ ಫ್ಲಾಸ್ಕ್ ಮತ್ತು ಇತರ ಹಲವಾರು ವಸ್ತುಗಳನ್ನು ವಿಷವೈದ್ಯ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಮೇಲ್ನೋಟಕ್ಕೆ ವಿಷಪೂರಿತ ಪ್ರಕರಣವೆಂದು ಕಾಣಿಸುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಆಸ್ಪತ್ರೆಯ ಮೂಳೆ ಚಿಕಿತ್ಸಾ ವಾರ್ಡ್ ಬಳಿಯ ಕ್ಯಾಂಟೀನ್‌ನಿಂದ ಆರ್ಡರ್ ಮಾಡಿದ ಚಹಾವನ್ನು ಕುಡಿದ 25 ವರ್ಷದ ವಿದ್ಯಾರ್ಥಿನಿ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದಾಳೆ. ಕೂಡಲೇ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದ್ದು, ಅಲ್ಲಿ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವಿದ್ಯಾರ್ಥಿನಿ ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದಳು. ಈ ವೇಳೆ ಹಲವಾರು ವೈದ್ಯರು ಕ್ಯಾಂಟೀನ್‌ನಿಂದ ಚಹಾವನ್ನು ಆರ್ಡರ್ ಮಾಡಿ ತಂದು ಕುಡಿದಿದ್ದರು. ವಿದ್ಯಾರ್ಥಿನಿ ತನ್ನ ಬಿಡುವಿರುವ ಸಮಯದಲ್ಲಿ ಅದನ್ನು ಕುಡಿಯಲೆಂದು ಚಹಾವನ್ನು ಅವಳು ತನ್ನ ಫ್ಲಾಸ್ಕ್‌ಗೆ ಸುರಿದಳು. ಕೆಲಸ ಮುಗಿಸಿದ ಅನಂತರ ಅವಳು ಒಂದೆರಡು ಗುಟುಕು ಚಹಾ ಕುಡಿದು ಅದು ಚೆನ್ನಾಗಿಲ್ಲ ಮತ್ತು ಕೆಟ್ಟ ವಾಸನೆ ಬರುತ್ತಿದೆ ಎಂದು ಹೇಳಿದಳು. ಆದ್ದರಿಂದ ಉಳಿದ ಯಾರೂ ಕೂಡ ಅದನ್ನು ತೆಗೆದುಕೊಳ್ಳಲಿಲ್ಲ. ಇದಾಗಿ ಸ್ವಲ್ಪ ಸಮಯದ ಬಳಿಕ ಅವಳು ಅಸ್ವಸ್ಥಳಾಗಿದ್ದು, ಮೂರ್ಛೆ ಹೋಗಿದ್ದಾಳೆ. ಕೂಡಲೇ ಅವಳನ್ನು ತುರ್ತು ವಿಭಾಗಕ್ಕೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಅವಳು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ 48 ಗಂಟೆಗಳು ನಿರ್ಣಾಯಕವಾಗಿವೆ. ಫ್ಲಾಸ್ಕ್ ಮತ್ತು ಇತರ ಹಲವಾರು ವಸ್ತುಗಳನ್ನು ವಿಷವೈದ್ಯಶಾಸ್ತ್ರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದುಆಸ್ಪತ್ರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: IND vs AUS: ಏಕದಿನ ಸರಣಿಯ ನಿಮಿತ್ತ ಲಾರ್ಡ್ಸ್‌ನಲ್ಲಿ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ!
ಇದು ಕೇವಲ ಆಹಾರ ವಿಷದ ಪ್ರಕರಣವಲ್ಲ. ಇದು ರಾಸಾಯನಿಕ ವಿಷದ ಪ್ರಕರಣ ಎಂದು ನಾವು ಶಂಕಿಸಿದ್ದೇವೆ. ತನಿಖೆಯ ಅನಂತರವೇ ವಿಷಯ ಸ್ಪಷ್ಟವಾಗುತ್ತದೆ ಎಂದು ಆಸ್ಪತ್ರೆಯ ವಕ್ತಾರ ಡಾ. ರಾಜೀವ್ ರಂಜನ್ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದೆ. ಕ್ಯಾಂಟೀನ್ ಅನ್ನು ಸೀಲ್ ಮಾಡಲಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಚಹಾ ನೀಡಿದ ಕ್ಯಾಂಟೀನ್ ಸಿಬ್ಬಂದಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.