ಟಿಎಂಸಿ ನಾಯಕನ ಮನೆ ಬಳಿಯ ಹೊಲದಲ್ಲಿ ಪತ್ತೆಯಾಯ್ತು 2.24 ಕೋಟಿ ರೂ. !
Rs 2.24 crore cash buried: ಪಶ್ಚಿಮ ಬಂಗಾಳದ ಬದುರಿಯಾ ಪುರಸಭೆಯ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ ಅವರಿಗೆ ಸೇರಿದ್ದೆಂದು ಹೇಳಲಾದ ಕಚೇರಿ ಮತ್ತು ಹತ್ತಿರದ ತೋಟದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದರು. ಈ ಶೋಧದಲ್ಲಿ ಸೆಣಬಿನ ಹೊಲದಲ್ಲಿ ಹೂತಿಟ್ಟಿದ್ದ ಕೋಟ್ಯಂತರ ರೂಪಾಯಿ ನಗದು ನೋಡಿದ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.
ಹೊಲದಿಂದ ನಗದು ಹೊತ್ತೊಯ್ಯುತ್ತಿರುವ ದೃಶ್ಯದ ಚಿತ್ರ -
ಕೋಲ್ಕತ್ತಾ, ಮೇ 28: ಪಶ್ಚಿಮ ಬಂಗಾಳದ (West Bengal) ಬದುರಿಯಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಕಚೇರಿಯಿಂದ ಸರಕುಗಳನ್ನು ಸಾಗಿಸುವ ವ್ಯಾನ್‌ಗಳನ್ನು ಗಮನಿಸಿದ ಜನರು ಅನುಮಾನ ವ್ಯಕ್ತಪಡಿಸಿದರು. ಮಾಹಿತಿ ಪಡೆದ ನಂತರ, ಪೊಲೀಸರು ಬದುರಿಯಾ ಪುರಸಭೆಯ ಅಧ್ಯಕ್ಷ ದೀಪಂಕರ್ ಭಟ್ಟಾಚಾರ್ಯ (Dipankar Bhattacharya) ಅವರಿಗೆ ಸೇರಿದ್ದೆಂದು ಹೇಳಲಾದ ಕಚೇರಿ ಮತ್ತು ಹತ್ತಿರದ ತೋಟದ ಮನೆಯ ಮೇಲೆ ದಾಳಿ ನಡೆಸಿದರು. ಈ ಶೋಧದಲ್ಲಿ ಸೆಣಬಿನ ಹೊಲದಲ್ಲಿ ಹೂತಿಟ್ಟಿದ್ದ ಕೋಟ್ಯಂತರ ರೂಪಾಯಿ ನಗದು ನೋಡಿದ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ. ವಶಪಡಿಸಿಕೊಂಡ ಮೊತ್ತವು ಈಗಾಗಲೇ 2.24 ಕೋಟಿ ರೂ.ಗಳನ್ನು ದಾಟಿದೆ. ಇನ್ನೂ ಕೂಡ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ.
ಮೇ 24 ರಂದು ಸ್ಥಳೀಯರು ತಡರಾತ್ರಿ ಅಸಾಮಾನ್ಯ ಚಟುವಟಿಕೆಯನ್ನು ಗಮನಿಸಿದರು. ಟಿಎಂಸಿ ಪಕ್ಷದ ಕಚೇರಿ ಮತ್ತು ತೋಟದ ಮನೆಯಲ್ಲಿ ಪೊಲೀಸರು ಶೋಧ ನಡೆಸಿದಾಗ, ಸರ್ಕಾರದಿಂದ ಪರಿಹಾರ ವಿತರಣೆಗೆಂದು ಉದ್ದೇಶಿಸಲಾಗಿತ್ತು ಎನ್ನಲಾದ ಸುಮಾರು 4,000 ಟಾರ್ಪಾಲಿನ್ ಹಾಳೆಗಳು ಪತ್ತೆಯಾಗಿವೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪುರಸಭೆಯ ಅಧ್ಯಕ್ಷರ ತೋಟದ ಮನೆಯಲ್ಲಿ ಸುಮಾರು 80 ಲಕ್ಷ ರೂ. ನಗದು ಪತ್ತೆಯಾಗಿದೆ. ಕಚೇರಿಯ ಹೊರಗೆ ಭಾಗಶಃ ಸುಟ್ಟುಹೋದ ದಾಖಲೆಗಳು ಸಹ ಕಂಡುಬಂದಿವೆ.
ಇಲ್ಲಿದೆ ವಿಡಿಯೊ:
Bags of cash found buried!
— NewsBite (@newsbite_in) May 27, 2026
Massive recovery from fields linked to TMC leader Bhattacharya.pic.twitter.com/vFSihjp4bf
ಆದರೆ, ಭಟ್ಟಾಚಾರ್ಯ ಮತ್ತು ಅವರ ಸಹಾಯಕರು ಆ ವೇಳೆಗಾಗಲೇ ಪರಾರಿಯಾಗಿದ್ದರು. ಸೋಮವಾರ (ಮೇ 25) ರಂದು ಭಟ್ಟಾಚಾರ್ಯ ವಿರುದ್ಧ ಬಿಜೆಪಿ ದೂರು ದಾಖಲಿಸಿದ ನಂತರ ಪೂರ್ಣ ಪ್ರಮಾಣದ ತನಿಖೆ ಆರಂಭಿಸಲಾಯಿತು. ಮಂಗಳವಾರ (ಮೇ 26) ಅವರನ್ನು ಹೋಟೆಲ್‌ನಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ವಿಚಾರಣೆಯ ಸಮಯದಲ್ಲಿ ಭಟ್ಟಾಚಾರ್ಯ ಅವರು ತಮ್ಮ ನಿವಾಸದ ಹಿಂದಿನ ಸೆಣಬಿನ ಹೊಲದಲ್ಲಿ ಹೂತಿಟ್ಟ ಹಣವನ್ನು ಬಹಿರಂಗಪಡಿಸಿದರು
ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು: ಬದಲಾಗುತ್ತಿದೆ ಪಶ್ಚಿಮ ಬಂಗಾಳ
ಸ್ನಿಫರ್ ಡಾಗ್ಸ್ ಮತ್ತು ಡ್ರೋನ್ ಕ್ಯಾಮರಾಗಳೊಂದಿಗೆ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಹಲವಾರು ಗಂಟೆಗಳ ಕಾಲ ಅಗೆದ ನಂತರ, ಶಾಕ್ ಆಗುವ ಸರದಿ ಪೊಲೀಸರದ್ದಾಗಿತ್ತು. ಟ್ರಾಲಿ ಬ್ಯಾಗ್‌ಗಳು ಮತ್ತು ಚೀಲಗಳಲ್ಲಿ ಬಿಗಿಯಾಗಿ ಪ್ಯಾಕ್ ಮಾಡಲಾದ 500 ರೂ. ನೋಟುಗಳ ಬಂಡಲ್‌ಗಳು ಮತ್ತು ಚಿನ್ನದ ರಾಶಿಯೇ ಕಂಡುಬಂತು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ದೃಶ್ಯಗಳಲ್ಲಿ ಪೊಲೀಸರು ತಮ್ಮ ಹೆಗಲ ಮೇಲೆ ಚೀಲಗಳನ್ನು ಹೊತ್ತುಕೊಂಡು ಹೋಗುವುದನ್ನು ತೋರಿಸಲಾಗಿದೆ. ಸೆಣಬಿನ ಹೊಲದ ಬಳಿ ಭಾರಿ ಜನಸಮೂಹ ಜಮಾಯಿಸಿತ್ತು. ಬುಧವಾರ ರಾತ್ರಿಯಿಡೀ ಎಣಿಸಿದ ನಂತರ, ಮೊತ್ತವು 2.24 ಕೋಟಿ ರೂ.ಗಳಷ್ಟಿತ್ತು. ಅಧಿಕಾರಿಗಳು ಇದು 3 ಕೋಟಿ ರೂ.ಗಳಿಗೆ ಏರಬಹುದು ಎಂದು ಅಂದಾಜಿಸಿದ್ದಾರೆ.
ಭಟ್ಟಾಚಾರ್ಯ ಅವರ ನಿವಾಸದ ಪಕ್ಕದಲ್ಲಿರುವ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೆಲವು ನಗದು ಚೀಲ ಪತ್ತೆಯಾಗಿದೆ. ಈ ಕೇಂದ್ರವನ್ನು ಭಟ್ಟಾಚಾರ್ಯ ನಡೆಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಬೆಳವಣಿಗೆಯು ಪುರಸಭೆಯ ಅಧ್ಯಕ್ಷರು ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಹೇಗೆ ಸಂಗ್ರಹಿಸಿದರು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಸುಲಿಗೆ ಮತ್ತು ವಸತಿ ಯೋಜನೆಯ ಹಣವನ್ನು ದುರ್ಬಳಕೆ ಮಾಡಿ ಇಷ್ಟೊಂದು ಹಣವನ್ನು ಬಚ್ಚಿಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.