ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಬರಿಮಲೆಗೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರ; ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿಚಾರಣೆ

Sabarimala Temple Women’s Entry Issue: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿರುದ್ಧದ ಪ್ರಕರಣದ ವಿಮರ್ಶಾ ಅರ್ಜಿಗಳ ವಿಚಾರಣೆಯನ್ನು, ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಕೈಗೆತ್ತಿಕೊಳ್ಳಲಿದೆ. 2018ರಲ್ಲಿ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರ: ಏಪ್ರಿಲ್‌ 7ರಿಂದ ವಿಚಾರಣೆ

ಶಬರಿಮಲೆ ದೇಗುಲ (ಸಂಗ್ರಹ ಚಿತ್ರ) -

Priyanka P
Priyanka P Feb 16, 2026 3:21 PM

ನವದೆಹಲಿ, ಫೆ. 16: ಏಪ್ರಿಲ್ 7ರಿಂದ ಶಬರಿಮಲೆ ದೇವಸ್ಥಾನಕ್ಕೆ (Sabarimala Temple) ಮಹಿಳೆಯರ ಪ್ರವೇಶದ ವಿರುದ್ಧದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ (Supreme Court) ಒಂಭತ್ತು ನ್ಯಾಯಮೂರ್ತಿಗಳ ಪೀಠವು ಪ್ರಾರಂಭಿಸಲಿದೆ. ಧಾರ್ಮಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಸಂಬಂಧಿಸಿದ ಏಳು ಪ್ರಮುಖ ಕಾನೂನು ಪ್ರಶ್ನೆಗಳನ್ನು ಆ ವೇಳೆ ನ್ಯಾಯಾಲಯವು ಪರಿಶೀಲನೆ ನಡೆಸಲಿದೆ. ಈ ಪ್ರಶ್ನೆಗಳಿಗೆ ದೊರೆಯುವ ಉತ್ತರದ ಆಧಾರದಲ್ಲಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಕುರಿತ ವಿವಾದದ ದಿಕ್ಕು ನಿರ್ಣಯವಾಗಲಿದೆ.

2020ರ ಫೆಬ್ರವರಿ 10ರಂದು ನ್ಯಾಯಾಲಯವು ಈ ಪ್ರಕರಣವನ್ನು ದೊಡ್ಡ ಪೀಠಕ್ಕೆ ಒಪ್ಪಿಸುವ ನಿರ್ಧಾರವನ್ನು ಸಮರ್ಥಿಸಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳು ಮಾರ್ಚ್ 14ರೊಳಗೆ ತಮ್ಮ ವಾದಗಳನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಧಾರ್ಮಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಸಂಬಂಧಿಸಿದ ಏಳು ಪ್ರಮುಖ ಕಾನೂನು ಪ್ರಶ್ನೆಗಳನ್ನು ಆ ವೇಳೆ ನ್ಯಾಯಾಲಯವು ಪರಿಶೀಲನೆ ನಡೆಸಲಿದೆ.

ಸಿಜೆಐ ಸೂರ್ಯ ಕಾಂತ್‌ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಇರಲಿದ್ದು ಪಕ್ಷಕಾರರು ಮಾರ್ಚ್ 14ರೊಳಗೆ ಲಿಖಿತ ವಾದಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ವಿಚಾರಣೆ ಏಪ್ರಿಲ್ 22ರಂದು ಪೂರ್ಣಗೊಳ್ಳುವಂತೆ ಸುಪ್ರೀಂ ಕೋರ್ಟ್‌ ವೇಳಾಪಟ್ಟಿಯನ್ನು ನಿಗದಿಪಡಿಸಿದೆ.

ಒಂಭತ್ತು ನ್ಯಾಯಾಧೀಶರ ಪೀಠವು ಏಪ್ರಿಲ್ 7ರ ಬೆಳಗ್ಗೆ 10:30ಕ್ಕೆ ಶಬರಿಮಲೆ ಪರಿಶೀಲನಾ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲಿದೆ. ಪರಿಶೀಲನಾ ಅರ್ಜಿದಾರರು ಅಥವಾ ಅವರನ್ನು ಬೆಂಬಲಿಸುವ ಪಕ್ಷದ ಅರ್ಜಿಗಳನ್ನು ಏಪ್ರಿಲ್ 7ರಿಂದ ಏಪ್ರಿಲ್ 9ರವರೆಗೆ ವಿಚಾರಣೆ ನಡೆಸಲಾಗುವುದು. ಇದಕ್ಕೆ ವಿರೋಧ ವ್ಯಕ್ತಪಡಿಸುವ ಅರ್ಜಿಗಳನ್ನು ಏಪ್ರಿಲ್ 14ರಿಂದ ಏಪ್ರಿಲ್ 16ರವರೆಗೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ED calls Jayaram: ಶಬರಿಮಲೆ ಚಿನ್ನ ಕಳವು ಪ್ರಕರಣ: ನಟ ಜಯರಾಮ್‌ಗೆ ಇ.ಡಿ ನೋಟಿಸ್​

ಏನಾದರೂ ಮರುಪ್ರಶ್ನೆ ಸಲ್ಲಿಕೆಗಳಿದ್ದರೆ, ಅವುಗಳನ್ನು ಏಪ್ರಿಲ್ 21ರಂದು ವಿಚಾರಣೆಗೆ ಒಳಪಡಿಸಲಾಗುವುದು. ಪಕ್ಷಗಳು ಮೇಲ್ಕಂಡ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೊಡಲ್ ಕೌನ್ಸೆಲ್‌ಗಳು, ಸಂಬಂಧಿತ ಪಕ್ಷಗಳ ವಾದ ಮಂಡಿಸುವ ವಕೀಲರೊಂದಿಗೆ ಸಮಾಲೋಚಿಸಿ, ಆಂತರಿಕ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು. ಇದರಿಂದ ಎರಡೂ ಕಡೆಯ ಮೌಖಿಕ ಸಲ್ಲಿಕೆಗಳನ್ನು ನಿಗದಿತ ಸಮಯದೊಳಗೆ ಆಲಿಸಬಹುದು ಎಂದು ಕೋರ್ಟ್ ಹೇಳಿದೆ.

ಇನ್ನು ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು 2018ರಲ್ಲಿ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸುವ ಮರುಪರಿಶೀಲನಾ ಅರ್ಜಿಗಳಿಗೆ ತನ್ನ ಬೆಂಬಲ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ನಡುವೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕೇರಳದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರವನ್ನು ಪ್ರಶ್ನಿಸಿ, ಈ ವಿಷಯದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿದೆ. ಆದರೆ ಸರ್ಕಾರ ನ್ಯಾಯಾಲಯಕ್ಕೆ ಏನು ಸಲ್ಲಿಸಿತು ಎಂಬುದನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಸಿಪಿಐ(ಎಂ) ಹೇಳಿದೆ.

30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ಸರ್ಕಾರ ಬೆಂಬಲಿಸಿದರೆ, ಅದು ತನ್ನ ಅಫಿಡವಿಟ್‌ಗೆ ದೃಢವಾಗಿ ನಿಲ್ಲಬೇಕು. ಹಾಗೆ ಮಾಡದಿದ್ದರೆ, ಅಫಿಡವಿಟ್ ಅನ್ನು ಹಿಂಪಡೆಯಬೇಕು. ಸ್ಪಷ್ಟ ನಿಲುವು ಇರಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಹೇಳಿದರು.

2018ರ ಸೆಪ್ಟೆಂಬರ್‌ನಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ಶತಮಾನಗಳಷ್ಟು ಹಳೆಯ ಪದ್ಧತಿಯನ್ನು ತೆಗೆದುಹಾಕಿ, ಎಲ್ಲ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂಬ ತೀರ್ಪು ಹೊರಡಿಸಿತ್ತು. ಈ ತೀರ್ಪಿಗೆ ದೇಶದೆಲ್ಲೆಡೆ ಭಕ್ತರು ಕಿಡಿಕಾರಿದ್ದರು. ಕೇರಳದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಹಲವರು, ಸಂಘಟನೆ ಸದಸ್ಯರು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು. ಇದೀಗ ಈ ತೀರ್ಪಿನ ಬಗ್ಗೆ ಮತ್ತೆ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ.