ಬಿಜೆಪಿ ಮೇಯರ್ ಆಯೋಜಿಸಿದ್ದ ರಾಖಿ ಹಬ್ಬದ ಕಾರ್ಯಕ್ರಮದಲ್ಲಿ ಸೀರೆಗಾಗಿ ನೀರೆಯರ ಪೈಪೋಟಿ: ನೂಕು ನುಗ್ಗಲಿಂದ ಮೂರ್ಛೆ ತಪ್ಪಿದ ಮಹಿಳೆಯರು
Saree Scramble at Rakhi Event: ಉತ್ತರ ಪ್ರದೇಶದ ರೇಲಿಯಲ್ಲಿ ಬಿಜೆಪಿ ಮೇಯರ್ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಸೀರೆ ವಿತರಿಸುವ ವೇಳೆ 20,000ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರಿಂದ ಅನೇಕರು ಮೂರ್ಛೆ ತಪ್ಪಿರುವ ಘಟನೆ ನಡೆದಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಕ್ಕಾಗಿ ಜನಸಮೂಹ ಜಮಾಯಿಸಿತ್ತು.
ಉತ್ತರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೀರೆಗಾಗಿ ಮಹಿಳೆಯರ ಪೈಪೋಟಿ -
ಲಖನೌ, ಆ. 28: ಬಿಜೆಪಿ ಮೇಯರ್ ಆಯೋಜಿಸಿದ್ದ ರಕ್ಷಾಬಂಧನ (Rakshabandhan) ಕಾರ್ಯಕ್ರಮದಲ್ಲಿ ಸೀರೆ ವಿತರಿಸುವ ವೇಳೆ 20,000ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿ, ಹಲವರು ಅಸ್ವಸ್ಥಗೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ. ಬರೇಲಿಯ ಮೇಯರ್ ಉಮೇಶ್ ಗೌತಮ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಜನಸಂದಣಿಯಲ್ಲಿ ಸಿಲುಕಿ ಅನೇಕ ಮಹಿಳೆಯರು ಮೂರ್ಛೆ ತಪ್ಪಿ ಬಿದ್ದರು.
ರಕ್ಷಾಬಂಧನದ ಒಂದು ದಿನ ಮೊದಲು ಉತ್ತರ ಪ್ರದೇಶದ ಬರೇಲಿ ಕ್ಲಬ್ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ. ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮಕ್ಕಾಗಿ ಜನಸಮೂಹವೇ ನೆರೆದಿತ್ತು. ತೀವ್ರ ಶಾಖದಿಂದ ಅನೇಕರು ಬಳಲಿದರು. ಜನಸಂದಣಿ ಹೆಚ್ಚಾದಾಗ ಪರಿಸ್ಥಿತಿ ಹದಗೆಟ್ಟಿತು. ಜನಸಂದಣಿಯಲ್ಲಿ ತಳ್ಳಾಟ-ನೂಕಾಟ ಉಂಟಾಗಿ, ಅನೇಕ ಮಹಿಳೆಯರು ಮೂರ್ಛೆ ತಪ್ಪಿ ಬಿದ್ದರು. ಪ್ರಜ್ಞೆ ಕಳೆದುಕೊಂಡ ಮತ್ತು ಗಾಯಗೊಂಡ ಮಹಿಳೆಯರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇಲ್ಲಿದೆ ವಿಡಿಯೊ:
बरेली में राखी कार्यक्रम में मचा हड़कंप, गिफ्ट लेने की होड़ में भगदड़ जैसे हालात
— amarshah (@amargkp_shah) August 27, 2026
बरेली में BJP के मेयर उमेश गौतम की ओर से आयोजित राखी कार्यक्रम में करीब 20 हजार महिलाओं के पहुंचने की बात सामने आई है। कार्यक्रम के दौरान मंच से गिफ्ट बांटे जाने शुरू हुए तो अचानक भीड़ में धक्का- pic.twitter.com/uEGWZhhQ62
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ರಾಖಿ ಕಟ್ಟಲು ಮುಂಚಿತವಾಗಿ ಕೂಪನ್‌ಗಳನ್ನು ವಿತರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಮಹಿಳೆಯರು ತಮ್ಮ ಮಕ್ಕಳು ಮತ್ತು ವೃದ್ಧ ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದರು. ಜನಸಂದಣಿ ಎಷ್ಟು ಹೆಚ್ಚಿತ್ತೆಂದರೆ, ನಿಲ್ಲಲು ಸ್ಥಳವೇ ಇರಲಿಲ್ಲ. ಅನೇಕ ಮಹಿಳೆಯರು ಬ್ಯಾರಿಕೇಡ್‌ಗಳನ್ನು ಮುರಿದು ವೇದಿಕೆಯ ಕಡೆಗೆ ಓಡಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಜತೆ ರಕ್ಷಾ ಬಂಧನ ಹಬ್ಬ ಆಚರಿಸಿದ ಪುಟ್ಟ ಬಾಲಕಿ: ಮುದ್ದಾದ ವಿಡಿಯೊ ವೈರಲ್
ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಮೇಯರ್ ಉಮೇಶ್ ಗೌತಮ್, ಗುಂಪನ್ನು ಬೇರೆ ಬೇರೆ ಪ್ರದೇಶಗಳಿಗೆ ಚದುರಿಸಲು ಪ್ರಯತ್ನಿಸಿದರು. ಇದರ ಹೊರತಾಗಿಯೂ, ಜನಸಮೂಹದ ಒತ್ತಡ ಕಡಿಮೆಯಾಗಲಿಲ್ಲ. ವೇದಿಕೆಯ ಬಳಿ ತಳ್ಳಾಟ ಮತ್ತು ನೂಕಾಟದ ನಡುವೆ ಹಲವು ಮಹಿಳೆಯರು ಬಿದ್ದರು. ಅಲ್ಲದೆ, ಈ ವೇಳೆ ತಮ್ಮ ತಾಯಂದಿರ ಜತೆ ಇದ್ದ ಮಕ್ಕಳು ಬೇರ್ಪಟ್ಟ ಘಟನೆಯೂ ನಡೆದಿದೆ.
ಬಾಲಕಿಯೊಬ್ಬಳು ಜನಸಂದಣಿಯಲ್ಲಿ ಸಿಲುಕಿಕೊಂಡಿದ್ದಳು. ಸುಮಾರು ಐದು ನಿಮಿಷಗಳ ಬಳಿಕ ಆಕೆಯನ್ನು ರಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಸೂಕ್ತ ವ್ಯವಸ್ಥೆ ಮಾಡದಿರುವ ಬಗ್ಗೆ ಪ್ರಶ್ನಿಸಿದರು. ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಆಹ್ವಾನಿಸಲಾಗಿದ್ದರೂ, ಜನಸಂದಣಿಯನ್ನು ನಿಯಂತ್ರಿಸಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ದೂರಿದರು. ಬಿಸಿಲಿನಲ್ಲಿ ಕುಡಿಯುವ ನೀರಿನ ಕೊರತೆ, ಸುರಕ್ಷಿತ ಮಾರ್ಗಗಳ ಕೊರತೆ ಮತ್ತು ಜನಸಂದಣಿಯ ಕಳಪೆ ನಿರ್ವಹಣೆಯ ಬಗ್ಗೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ಉಡುಗೊರೆಗಳ ವಿತರಣೆಯ ಸಮಯದಲ್ಲಿ ಜನಸಮೂಹದಿಂದ ಒತ್ತಡ ಹೆಚ್ಚಾಯಿತು. ಮಹಿಳೆಯರು ಅವುಗಳನ್ನು ತೆಗೆದುಕೊಳ್ಳಲು ಪರದಾಡುತ್ತಿದ್ದಂತೆ ತಳ್ಳಾಟ ಮತ್ತು ನೂಕಾಟ ಉಂಟಾಯಿತು. ಮೈದಾನ ತುಂಬಾ ಒಡೆದ ಗಾಜಿನ ಬಳೆಗಳು, ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಮೂಲಗಳು ತಿಳಿಸಿವೆ.