Sher AK-203 Rifle: ಸೇನೆಗೆ ಆನೆ ಬಲ; ನಿಮಿಷಕ್ಕೆ 700 ಗುಂಡುಗಳು, 800 ಮೀಟರ್ ವ್ಯಾಪ್ತಿಯ ʼಶೇರ್ʼ ರೈಫಲ್‌ಗಳ ಸೇರ್ಪಡೆ
ಭಾರತೀಯ ಸಶಸ್ತ್ರ ಪಡೆಗಳಿಗೆ (Indian armed forces) ಒಂದು ನಿಮಿಷದಲ್ಲಿ 800 ಮೀಟರ್ ದೂರದವರೆಗೆ 700 ಬುಲೆಟ್ ಹಾರಿಸಬಲ್ಲ ಎಕೆ-203 ರೈಫಲ್ (Sher AK-203 Rifle) ಶೀಘ್ರದಲ್ಲೇ ದೊರೆಯಲಿದೆ. ಈ ರೈಫಲ್ ಅನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಇದಕ್ಕಾಗಿ ಉತ್ತರಪ್ರದೇಶದ (Uttar pradesh) ಅಮೇಥಿಯಲ್ಲಿ (Amethi) ಕಂಪೆನಿಯನ್ನು ಸ್ಥಾಪಿಸಲಾಗಿದೆ.


ಅಮೇಥಿ: ಭಾರತೀಯ ಸಶಸ್ತ್ರ ಪಡೆಗಳಿಗೆ (Indian armed forces) ಒಂದು ನಿಮಿಷದಲ್ಲಿ 800 ಮೀಟರ್ ದೂರದವರೆಗೆ 700 ಬುಲೆಟ್ ಹಾರಿಸಬಲ್ಲ ಎಕೆ-203 ರೈಫಲ್ (Sher AK-203 Rifle) ಶೀಘ್ರದಲ್ಲೇ ದೊರೆಯಲಿದೆ. ಈ ರೈಫಲ್ ಅನ್ನು ಭಾರತದಲ್ಲೇ ತಯಾರಿಸಲಾಗುತ್ತಿದೆ. ಇದಕ್ಕಾಗಿ ಉತ್ತರಪ್ರದೇಶದ (Uttar pradesh) ಅಮೇಥಿಯಲ್ಲಿ (Amethi) ಕಂಪನಿಯನ್ನು ಸ್ಥಾಪಿಸಲಾಗಿದೆ. ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (IRRPL) ಅಮೇಥಿಯಲ್ಲಿ ನಿರ್ಮಿಸುವ ಕಲಾಶ್ನಿಕೋವ್ ಸರಣಿಯ ಆಧುನೀಕೃತ ಆವೃತ್ತಿಯಾದ ಎಕೆ-203 ಅಸಾಲ್ಟ್ ರೈಫಲ್ ಅನ್ನು ಭಾರತದಲ್ಲಿ 'ಶೇರ್' ಎಂದು ಕರೆಯಲಾಗುತ್ತದೆ. 5,200 ಕೋಟಿ ರೂ. ಅನ್ನು ಈ ಯೋಜನೆಗಾಗಿ ವ್ಯಯಿಸಲಾಗುತ್ತಿದೆ.
ಭಾರತದ 'ಶೇರ್' ಎಕೆ-203ರ ಸ್ಥಳೀಯ ಉತ್ಪಾದನೆಗಾಗಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಥಾಪಿಸಲಾಗಿರುವ ಇಂಡೋ- ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ಜಂಟಿ ಉದ್ಯಮ ಕಂಪನಿಯಾಗಿದೆ. ಈ ಕಂಪೆನಿಯು 5,200 ಕೋಟಿ ರೂ. ಮೌಲ್ಯದ ಒಪ್ಪಂದದಡಿಯಲ್ಲಿ ಸಶಸ್ತ್ರ ಪಡೆಗಳಿಗೆ ಆರು ಲಕ್ಷಕ್ಕೂ ಹೆಚ್ಚು ರೈಫಲ್‌ಗಳನ್ನು ಒದಗಿಸಬೇಕಾಗುತ್ತದೆ.
ಈ ಕುರಿತು ಗುರುವಾರ ಮಾಹಿತಿ ನೀಡಿದ ಐಆರ್‌ಆರ್‌ಪಿಎಲ್ ಮುಖ್ಯಸ್ಥ ಮೇಜರ್ ಜನರಲ್ ಎಸ್.ಕೆ. ಶರ್ಮಾ, 2030ರ ಡಿಸೆಂಬರ್ ತಿಂಗಳಾಂತ್ಯದ ಒಳಗೆ ಆರು ಲಕ್ಷಕ್ಕೂ ಹೆಚ್ಚು ರೈಫಲ್‌ಗಳನ್ನು ಭಾರತೀಯ ಶಸ್ತ್ರಾಸ್ತ್ರ ಪಡೆಗಳಿಗೆ ವಿತರಿಸಲು ಯೋಜನೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿಯಲ್ಲಿ ಇದುವರೆಗೆ ಸುಮಾರು 48,000 ರೈಫಲ್‌ಗಳನ್ನು ವಿತರಿಸಲಾಗಿದೆ. ಮುಂದಿನ ಎರಡು ಮೂರು ವಾರಗಳಲ್ಲಿ ಇನ್ನೂ 7,000 ರೈಫಲ್ ಗಳು ಹಸ್ತಾಂತರವಾಗಲಿದೆ. ಈ ವರ್ಷದ ಡಿಸೆಂಬರ್ ವೇಳೆಗೆ 15,000 ಹೆಚ್ಚುವರಿ ರೈಫಲ್ ಗಳು ಭಾರತೀಯ ಶಸ್ತ್ರಾಸ್ತ್ರ ಪಡೆಗಳಿಗೆ ದೊರೆಯಲಿದೆ ಎಂದರು.
ಎಕೆ -203 'ಶೇರ್' ರೈಫಲ್
ಎಕೆ -203 ರೈಫಲ್‌ಗಳು ಎಕೆ -47 ಮತ್ತು ಎಕೆ -56 ರೈಫಲ್‌ಗಳಿಗೆ ಹೋಲಿಸಿದರೆ ಹೆಚ್ಚು ಆಧುನಿಕವಾಗಿವೆ. ಅವು ಕಲಾಶ್ನಿಕೋವ್ ಸರಣಿಯ ಅತ್ಯಂತ ಮಾರಕ ರೈಫಲ್‌ಗಳಲ್ಲಿ ಒಂದಾಗಿದೆ. ಎಕೆ -203 ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆಯಲ್ಲಿರುವ ಭಾರತೀಯ ಸಣ್ಣ ಶಸ್ತ್ರಾಸ್ತ್ರ ವ್ಯವಸ್ಥೆ (INSAS) ರೈಫಲ್‌ಗಳನ್ನು ಬದಲಾಯಿಸಲಿದೆ. ಅವುಗಳು 7.62x39 ಎಂಎಂ ಕಾರ್ಟ್ರಿಡ್ಜ್ ಅನ್ನು ಹೊಂದಿದ್ದರೆ, ಐಎನ್‌ಎಸ್‌ಎಎಸ್ 5.56x45 ಎಂಎಂ ಕಾರ್ಟ್ರಿಡ್ಜ್ ಅನ್ನು ಹೊಂದಿತ್ತು.
ದಂಗೆ ನಿಗ್ರಹ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತೀಯ ಪಡೆಗಳ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಈ ರೈಫಲ್ ಸುಮಾರು 3.8 ಕೆ.ಜಿ. ಭಾರವಿದೆ. INSAS 4.15 ಕೆ.ಜಿ. ಭಾರವನ್ನು ಹೊಂದಿದೆ. ಶೇರ್' ರೈಫಲ್‌ಗಳು ಬಟ್‌ಸ್ಟಾಕ್ ಇಲ್ಲದೆ 705 ಮಿಮೀ ಉದ್ದವಿದ್ದರೆ, INSAS ರೈಫಲ್‌ಗಳು 960 ಮಿಮೀ ಉದ್ದ ಹೊಂದಿದೆ.
ಇದನ್ನೂ ಓದಿ: CM Siddaramaiah: ಫೇಸ್‌ಬುಕ್ ಆಟೋ ಟ್ರಾನ್ಸ್‌ಲೇಷನ್ ಎಡವಟ್ಟು; ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರೆ ಎಂದ ಸಿಎಂ
ಇನ್ನು ಮುಂದೆ ದೇಶದ ಗಡಿ ನಿಯಂತ್ರಣ ರೇಖೆ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ನಿಯೋಜಿಸಲಾದ ಸೈನಿಕರಿಗೆ ಇದು ಪ್ರಥಮ ಆಕ್ರಮಣ ರೈಫಲ್ ಆಗಲಿದೆ ಎಂದು ಮೇಜರ್ ಜನರಲ್ ಎಸ್.ಕೆ. ಶರ್ಮಾ ತಿಳಿಸಿದ್ದಾರೆ.