ಪೈಜಾಮಾ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ ಎಂದ ಅಲಾಹಾಬಾದ್ ಹೈಕೋರ್ಟ್ ಆದೇಶ ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Supreme Court: ಸ್ತನಗಳನ್ನು ಹಿಡಿದು ಪೈಜಾಮಾ ದಾರವನ್ನು ಬಿಚ್ಚುವುದು ಅತ್ಯಾಚಾರ ಯತ್ನವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಈ ರೀತಿಯ ಕೃತ್ಯಗಳು ಅತ್ಯಾಚಾರದ ಪ್ರಯತ್ನವಾಗಿಯೇ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದ ಕೋರ್ಟ್, ಸಂತ್ರಸ್ತರ ಸಂವೇದನೆ ಮತ್ತು ಹಕ್ಕುಗಳನ್ನು ಗಮನದಲ್ಲಿಡುವ ಅಗತ್ಯವಿದೆ ಎಂದು ತಿಳಿಸಿದೆ. ಪೋಸ್ಕೋ ಕಾಯ್ದೆಯಡಿ ಮೂಲ ಆರೋಪವನ್ನು ಮರುಸ್ಥಾಪಿಸಲಾಗಿದೆ.
ಸುಪ್ರೀಂ ಕೋರ್ಟ್ -
ನವದೆಹಲಿ, ಫೆ. 18: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ (Women Harrassment) ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ (Allahabad High Court) ನೀಡಿದ್ದ ವಿವಾದಾತ್ಮಕ ತೀರ್ಪನ್ನು(Controvarcy Judgement) ಸುಪ್ರೀಂ ಕೋರ್ಟ್ (Supreme Court) ಬುಧವಾರ (ಫೆಬ್ರವರಿ 18) ರದ್ದುಗೊಳಿಸಿದೆ. ಸ್ತನಗಳನ್ನು ಹಿಡಿದು ಪೈಜಾಮಾ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ, ಅದು ಕೇವಲ ಸಿದ್ಧತೆಯಷ್ಟೇ ಎಂಬ ಹೈಕೋರ್ಟ್ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಎನ್.ವಿ. ಅಂಜಾರಿಯಾ ಅವರೊಂದಿಗೆ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶವು ಕ್ರಿಮಿನಲ್ ನ್ಯಾಯಶಾಸ್ತ್ರದ ಸ್ಥಾಪಿತ ತತ್ವಗಳನ್ನು ತಪ್ಪಾಗಿ ಅನ್ವಯಿಸಿರುವುದಾಗಿ ಹೇಳಿದೆ. ಈ ರೀತಿಯ ತೀರ್ಪುಗಳು ನ್ಯಾಯದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಲೈಂಗಿಕ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕೇವಲ ಕಾನೂನಿನ ತಾಂತ್ರಿಕ ಅಂಶಗಳನ್ನು ಮಾತ್ರ ಪರಿಗಣಿಸದೇ, ಸಂತ್ರಸ್ತರ ಸ್ಥಿತಿ, ಸಂವೇದನೆ ಮತ್ತು ಮಾನಸಿಕ ಸ್ಥಿತಿಯನ್ನೂ ಗಮನದಲ್ಲಿಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸಂತ್ರಸ್ತರ ದುರ್ಬಲತೆ ಮತ್ತು ಸೂಕ್ಷ್ಮತೆಗಳನ್ನು ನಿರ್ಲಕ್ಷಿಸಿದರೆ ಸಂಪೂರ್ಣ ನ್ಯಾಯ ಸಾಧ್ಯವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.
ಸ್ತನಗಳನ್ನು ಹಿಡಿಯುವುದು ಮತ್ತು ಪೈಜಾಮಾ ಲಾಡಿ ಬಿಚ್ಚುವುದು ಅತ್ಯಾಚಾರದ ಪ್ರಯತ್ನವೇ ಹೊರತು, ಕೇವಲ ಸಿದ್ಧತೆಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ಮಾನವೀಯತೆ ಮತ್ತು ಸಂವೇದನಾಶೀಲತೆ ಕೊರತೆಯ ಉದಾಹರಣೆ ಎಂದು ಕೋರ್ಟ್ ಟೀಕಿಸಿದೆ.
ಬೇರೆ ಜಾತಿ, ಧರ್ಮದ ಯುವಕನ ಮದುವೆಯಾದರೆ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಿಲ್ಲ: ಸುಪ್ರೀಂ ಕೋರ್ಟ್
ಇದಲ್ಲದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಯತ್ನದ ಮೂಲ ಆರೋಪವನ್ನು ಸುಪ್ರೀಂ ಕೋರ್ಟ್ ಮರು ಸ್ಥಾಪಿಸಿದೆ. ಹೀಗಾಗಿ ಪ್ರಕರಣವನ್ನು ಮುಂದಿನ ಕ್ರಮಗಳಿಗಾಗಿ ಮರುಪರಿಶೀಲನೆಗೆ ಕಳುಹಿಸಲಾಗಿದೆ.
ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ಲೈಂಗಿಕ ಅಪರಾಧ ಪ್ರಕರಣಗಳ ವಿಚಾರಣೆಯಲ್ಲಿ ಸಂವೇದನಾಶೀಲತೆ ಮತ್ತು ಸಂತ್ರಸ್ತರ ಹಕ್ಕುಗಳ ರಕ್ಷಣೆಯ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದೆ.
ಏನಿದು ಪ್ರಕರಣ?
ಈ ಪ್ರಕರಣದಲ್ಲಿ ಓರ್ವ ಬಾಲಕಿ ತನ್ನ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಅವಳ ಮೇಲೆ ಅಶ್ಲೀಲ ಹಾಗೂ ಅಸಭ್ಯ ರೀತಿಯಲ್ಲಿ ದಾಳಿ ನಡೆಸಿದ್ದಾರೆ ಎಂಬ ಆರೋಪ ಇದೆ. ಅವರು ಬಾಲಕಿಯ ದೇಹದ ಅಂಗಾಂಗಗಳನ್ನು ಹಿಡಿದು, ಅವಳ ಉಡುಪನ್ನು ಹರಿದು, ಅವಳನ್ನು ಬಲವಂತವಾಗಿ ಚರಂಡಿಯ ಕಡೆಗೆ ಎಳೆಯಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆ ಸಂಬಂಧ ಆರೋಪಿಗಳಾದ ಪವನ್ ಮತ್ತು ಆಕಾಶ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಹಾಗೂ POCSO ಕಾಯ್ದೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ ನಂತರ ಅಲಹಾಬಾದ್ ಹೈಕೋರ್ಟ್ ಈ ಕೃತ್ಯಗಳು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ತೀರ್ಪು ನೀಡಿದೆ.
ಇನ್ನು ಈ ಹಿಂದೆ ಮಹಿಳೆಯ ಸ್ತನಗಳನ್ನು ಹಿಡಿದರೆ, ಪೈಜಾಮದ ದಾರವನ್ನು ಹರಿದರೆ ಅದು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನವಾಗುವುದಿಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ಆದೇಶಕ್ಕೆ ಈ ಹಿಂದೆಯೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮಾತ್ರವಲ್ಲದೇ, ಹೈಕೋರ್ಟ್ ಸಂವೇದನಾಶೀಲತೆ ಸಂಪೂರ್ಣ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿತ್ತು.