3 ಮನೆ, ಸ್ವಂತ ಕಾರ್, ಅದಕ್ಕೊಬ್ಬ ಡ್ರೈವರ್: ಇಂದೋರ್‌ನ ಈ ಭಿಕ್ಷುಕ ಕೋಟ್ಯಧಿಪತಿ!
Millionaire Beggar: ಮಧ್ಯ ಪ್ರದೇಶದ ಇಂದೋರ್ ಭಿಕ್ಷುಕನೊಬ್ಬನನ್ನು ರಕ್ಷಿಸಿದ ಅಧಿಕಾರಿಗಳಿಗೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಆ ಭಿಕ್ಷುಕನ ಬಳಿ 3 ಮನೆಗಳು, ಕಾರ್ ಇದೆ. ಅಲ್ಲಿದೆ ಕಾರ್ ಚಾಲಕನೂ ಇದ್ದಾನೆ. ಭಿಕ್ಷುಕ ಕೋಟ್ಯಧಿಪತಿ ಎನ್ನುವುದು ಗೊತ್ತಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಇಂದೋರ್‌ನ ಕೋಟ್ಯಧಿಪತಿ ಭಿಕ್ಷುಕ ಮಂಗಿಲಾಲ್ -
ಭೋಪಾಲ್, ಜ. 19: ಸಿರಿವಂತ ಭಿಕ್ಷುಕರ ಬಗ್ಗೆ ನೀವು ಕೆಲವು ಕಥೆಗಳನ್ನು ಕೇಳಿರಬಹುದು. ಹಲವು ವರ್ಷಗಳ ಹಿಂದೆ ಭಿಕ್ಷುಕಿಯೊಬ್ಬಳು ಚೀಲ ತುಂಬಾ ದುಡ್ಡುಗಳನ್ನು ಸಂಗ್ರಹಿಸಿಟ್ಟಿರುವ ಸುದ್ದಿಯೊಂದು ವೈರಲ್ ಆಗಿತ್ತು. ಇದೀಗ ಇಂಥದ್ದೇ ವಿಚಿತ್ರ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬ ಎಂದಿಗೂ ಭಿಕ್ಷೆ ಬೇಡಿಲ್ಲ. ಅದಾಗ್ಯೂ ದಾರಿಹೋಕರು ಅವನ ಕಷ್ಟಕ್ಕೆ ಮರುಗಿ ಹಣ ನೀಡುತ್ತಿದ್ದರು. ಆತನ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಾಗ ಆತ ಮೂರು ಮನೆಗಳನ್ನು ಹೊಂದಿದ್ದ, ಬಡ್ಡಿಗೆ ಹಣವನ್ನು ಸಾಲವಾಗಿ ನೀಡುತ್ತಾನೆ ಮತ್ತು ಕಾರನ್ನು ಹೊಂದಿದ್ದಾನೆ. ಆತ ಕೋಟ್ಯಧಿಪತಿ ಭಿಕ್ಷುಕ (Millionaire beggar) ಎನ್ನುವುದು ಬೆಳಕಿಗೆ ಬಂದಿದೆ.
ಹೌದು, ವಿಚಿತ್ರವೆನಿಸಿದರೂ ಸತ್ಯ. ಮಂಗಿಲಾಲ್ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ ಎಂದಿಗೂ ಭಿಕ್ಷೆ ಬೇಡಲಿಲ್ಲವಂತೆ. ಅವನು ತನ್ನ ಕಬ್ಬಿಣದ ಬಂಡಿಯನ್ನು ಬೀದಿಗಳಲ್ಲಿ ತಳ್ಳುತ್ತ ಕೋಟಿಗಟ್ಟಲೆ ರುಪಾಯಿ ಸಂಪಾದಿಸಿದ್ದಾನೆ. ದಾರಿಹೋಕರು ಅವನಿಗೆ ನಗದು ಅಥವಾ ನಾಣ್ಯಗಳನ್ನು ನೀಡುತ್ತಿದ್ದರು. ವರದಿಯ ಪ್ರಕಾರ ಹೀಗೆ ಆತ ದಿನಕ್ಕೆ 500ರಿಂದ 1,000 ರುಪಾಯಿ ಸಂಪಾದಿಸುತ್ತಾನೆ.
ಮ್ಯಾರಾಥಾನ್‌ನಲ್ಲಿ ಓಟಗಾರರ ಜೊತೆ ಹೆಜ್ಜೆ ಹಾಕಿದ ʼಡಾಗೇಶ್ ಭಾಯ್ʼ
ಮಧ್ಯ ಪ್ರದೇಶದಲ್ಲಿ ಭಿಕ್ಷುಕ ಮುಕ್ತ ನಗರವನ್ನಾಗಿ ಮಾಡಲು ಹೊರಟ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡವು ಮಂಗಿಲಾಲ್ ಅವರನ್ನು ಸಂಪರ್ಕಿಸಿದಾಗ ಈ ಸತ್ಯ ಹೊರ ಬಂತು. ಭಗತ್ ಸಿಂಗ್ ನಗರದಲ್ಲಿ ಮೂರು ಅಂತಸ್ತಿನ ಮನೆ, ಶಿವ ನಗರದಲ್ಲಿ 600 ಚದರ ಅಡಿ ಮನೆ ಮತ್ತು ಅಲ್ವಾಸದಲ್ಲಿ ಒಂದು ಮಲಗುವ ಕೋಣೆಯ ಫ್ಲಾಟ್ ಹೊಂದಿದ್ದು, ಅಂಗವೈಕಲ್ಯದಿಂದಾಗಿ ಪಿಎಂಎವೈ ಯೋಜನೆಯಡಿ ರೆಡ್ ಕ್ರಾಸ್ ಸೊಸೈಟಿಯ ಮೂಲಕ ಇದನ್ನು ಪಡೆದಿರುವುದಾಗಿ ಮಂಗಿಲಾಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ಅಷ್ಟೇ ಅಲ್ಲ ಮಂಗಿಲಾಲ್, ಮೂರು ಆಟೋರಿಕ್ಷಾಗಳನ್ನು ಬಾಡಿಗೆಗೆ ನೀಡುತ್ತಾನೆ ಮತ್ತು ಸ್ವಿಫ್ಟ್ ಡಿಜೈರ್ ಕಾರನ್ನು ಹೊಂದಿದ್ದಾನೆ. ಅದಕ್ಕೆ ಚಾಲಕನನ್ನೂ ನೇಮಿಸಿದ್ದು, ಆತನಿಗೆ ತಿಂಗಳ ವೇತನ ಕೊಡುತ್ತಾನೆ. ಅಷ್ಟೇ ಅಲ್ಲದೆ, ಹೆಚ್ಚಿನ ಬಡ್ಡಿಗೆ ಸಾಲ ನೀಡುತ್ತಾನೆ. ದೈನಂದಿನ ಅಥವಾ ವಾರಕ್ಕೊಮ್ಮೆ ಬಡ್ಡಿ ಹಣವನ್ನು ಸಂಗ್ರಹಿಸುತ್ತಾನೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳು ಮಂಗಿಲಾಲ್ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಮನೆ ಹೊಂದಿದ್ದರೂ PMAY ಯೋಜನೆಯಡಿ ನಿವಾಸ ಪಡೆದಿದ್ದಕ್ಕಾಗಿ ಆತನನ್ನು ಜಿಲ್ಲಾಧಿಕಾರಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂದೋರ್ ನಗರವು 2024ರ ಫೆಬ್ರಯಿಂದ ಭಿಕ್ಷುಕ ಮುಕ್ತ ನಗರವಾಗುವತ್ತ ಕೆಲಸ ಮಾಡುತ್ತಿದೆ. ಈ ಅಭಿಯಾನದಲ್ಲಿ ಕೇವಲ ಎರಡು ವರ್ಷಗಳಲ್ಲಿ 6,500ಕ್ಕೂ ಹೆಚ್ಚು ಭಿಕ್ಷುಕರನ್ನು ಗುರುತಿಸಲಾಗಿದೆ. 2025ರ ಮೇಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿ, 2024ರ ಫೆಬ್ರವರಿಯಲ್ಲಿ ಅಭಿಯಾನ ಪ್ರಾರಂಭವಾದಾಗಿನಿಂದ ಸುಮಾರು 5,000 ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಘೋಷಿಸಿದರು.
ಪುನರ್ವಸತಿಯತ್ತ ಈ ಅಭಿಯಾನವು ಗಮನ ಕೇಂದ್ರೀಕರಿಸಿದೆ. ರಕ್ಷಿಸಲ್ಪಟ್ಟ 170ಕ್ಕೂ ಹೆಚ್ಚು ಮಕ್ಕಳು ಈಗ ಶಾಲೆಗಳಿಗೆ ಹೋಗುತ್ತಿದ್ದಾರೆ. ವಯಸ್ಕರಿಗೆ ತರಬೇತಿ ನೀಡಿ ಉದ್ಯೋಗ ನೀಡಲಾಗುತ್ತಿದೆ. ಈ ಅಭಿಯಾನ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಿಶ್ವಬ್ಯಾಂಕ್‌ನಿಂದಲೂ ಮನ್ನಣೆ ಗಳಿಸಿದೆ. ಹೀಗೆ ಭಿಕ್ಷುಕರನ್ನು ಗುರುತಿಸುವ ಕಾರ್ಯ ನಾಡೆಯುವ ವೇಳೆ ಮಂಗಿಲಾಲ್‌ನ ರಹಸ್ಯ ಬೆಳಕಿಗೆ ಬಂದಿದೆ.