ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tirupati Laddu Scam: ತಿರುಪತಿಗೆ ಕಲಬೆರಕೆ ತುಪ್ಪ ಪೂರೈಸುತ್ತಿದ್ದ ಡೈರಿಗೆ ರಾಸಾಯನಿಕ ಪದಾರ್ಥ ಒದಗಿಸುತ್ತಿದ್ದ ವ್ಯಾಪಾರಿಯ ಬಂಧನ

ಕಳೆದ ವರ್ಷ ಭಾರಿ ವಿವಾದ ಹುಟ್ಟು ಹಾಕಿದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಕಲಬೆರಕೆಯ ತುಪ್ಪ ಪೂರೈಕೆಯ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವನಿಣಿಗೆಯೊದು ನಡೆದಿದೆ. ನಕಲಿ ತುಪ್ಪ ತಯಾರಿಸಲು ರಾಸಾಯನಿಕ ಪದಾರ್ಥ ಪೂರೈಸುತ್ತಿದ್ದ ದೆಹಲಿ ಮೂಲದ ವ್ಯಾಪಾರಿ ಅಜಯ್ ಕುಮಾರ್ ಸುಗಂಧನನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.

ತಿರುಪತಿ ಕಲಬೆರಕೆ ತುಪ್ಪ ವಿವಾದ; ಪ್ರಮುಖ ಆರೋಪಿಯ ಬಂಧನ

ತಿರುಪತಿ ಕಲಬೆರಕೆ ತುಪ್ಪ ವಿವಾದ; ಪ್ರಮುಖ ಆರೋಪಿಯ ಬಂಧನ (ಸಾಂದರ್ಭಿಕ ಚಿತ್ರ) -

Ramesh B
Ramesh B Nov 10, 2025 2:57 PM

ದೆಹಲಿ, ನ. 10: ಲಡ್ಡು ಪ್ರಸಾದ ತಯಾರಿಸಲು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಾಸಾಯನಿಕ ಬೆರೆಸಿದ ನಕಲಿ ತುಪ್ಪ ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ (Tirupati Laddu Scam). ನಕಲಿ ತುಪ್ಪ ತಯಾರಿಸಲು ಉತ್ತರಾಖಂಡ ಮೂಲದ ಭೋಲೆಬಾಬಾ ಡೈರಿಗೆ ರಾಸಾಯನಿಕ ಪದಾರ್ಥಗಳನ್ನು ಪೂರೈಸುತ್ತಿದ್ದ ದೆಹಲಿ ಮೂಲದ ವ್ಯಾಪಾರಿಯನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ಬಂಧಿತನನ್ನು ಅಜಯ್ ಕುಮಾರ್ ಸುಗಂಧ ಎಂದು ಗುರುತಿಸಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತದಲ್ಲಿರುವ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ಕಲಬೆರಕೆಯ ತುಪ್ಪ ಬಳಸಲಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ತನಿಖೆ ನಡೆಸಲಾಗುತ್ತಿದೆ.

ʼʼಕಲಬೆರಕೆ ತುಪ್ಪ ಪೂರೈಸುತ್ತಿದ್ದ ಭೋಲೆಬಾಬಾ ಡೈರಿಗೆ ಅಜಯ್ ಕುಮಾರ್ ಹಲವು ರಾಸಾಯನಿಕ ಪದಾರ್ಥಗಳನ್ನು ಒದಗಿಸುತ್ತಿದ್ದ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Tirupati Tirumala: ತಿರುಪತಿ ಲಡ್ಡು ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌ ; ದೇಶದ 4 ಪ್ರಮುಖ ಡೈರಿ ಮುಖ್ಯಸ್ಥರ ಬಂಧನ

ಈ ಪ್ರಕರಣದಲ್ಲಿ ಎ-16 ಅಪರಾಧಿ ಎನಿಸಿಕೊಂಡಿರುವ ಅಜಯ್ ಕುಮಾರ್ ಭೋಲೆಬಾಬಾ ಡೈರಿ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರೊಂದಿಗೆ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಎಂದು ವರದಿಯೊಂದು ಹೇಳಿದೆ.

ಎಸ್‌ಐಟಿ ಅಧಿಕಾರಿಗಳ ಪ್ರಕಾರ, ಅಜಯ್‌ ಕುಮಾರ್‌ ಸುಮಾರು 7 ವರ್ಷಗಳಿಂದ ಭೋಲೆಬಾಬಾ ಡೈರಿಗೆ ಪಾಮ್ ಆಯಿಲ್ ಸಂಸ್ಕರಣೆಯಲ್ಲಿ ಬಳಸುವ ಮೊನೊಗ್ಲಿಸರೈಡ್‌, ಅಸಿಟಿಕ್ ಆ್ಯಸಿಡ್‌ ಮತ್ತು ಎಸ್ಟರ್‌ಗಳನ್ನು ಪೂರೈಸುತ್ತಿದ್ದ. ಈ ರಾಸಾಯನಿಕಗಳನ್ನು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡು ಡೈರಿಗೆ ವಿತರಿಸಲಾಗುತ್ತಿತ್ತು.

ʼʼಶುದ್ಧ ತುಪ್ಪದಂತೆ ಕಾಣಲು, ಸುವಾಸನೆ ಹೊಂದಲು ಪಾಮ್ ಎಣ್ಣೆಯನ್ನು ರಾಸಾಯನಿಕ ಪದಾರ್ಥಗಳೊಂದಿಗೆ ಬೆರೆಸಲಾಗುತ್ತಿತ್ತು. ಹೀಗೆ ತಯಾರಿಸಿದ ಕಲಬೆರಕೆ ತುಪ್ಪವನ್ನು ವೈಷ್ಣವಿ ಮತ್ತು ಎ.ಆರ್. ಡೈರಿ ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಟಿಟಿಡಿಗೆ ವಿತರಿಸಲಾಗುತ್ತಿತ್ತುʼʼ ಎಂದು ತನಿಖಾಧಿಕಾರಿಗಳು ವಿವರಿಸಿದ್ದಾರೆ. ಶೇ. 90ಕ್ಕೆಂತ ಹೆಚ್ಚು ಪ್ರಮಾಣದ ಲಡ್ಡು ಈ ಕಲಬೆರಕೆ ತುಪ್ಪದಿಂದ ತಯಾರಿಸಿರುವ ಶಂಕೆ ವ್ಯಕ್ತವಾಗಿದೆ.

ಭೋಲೆಬಾಬಾ ಡೈರಿ ನಿರ್ದೇಶಕರೊಂದಿಗೆ ಅಜಯ್ ಕುಮಾರ್ ವ್ಯವಹಾರ ಹೊಂದಿರುವ ಬಗ್ಗೆ, ರಾಸಾಯನಿಕ ಪದಾರ್ಥ ಪೂರೈಸಿರುವ ಪುರಾವೆಗಳನ್ನು ಸಂಗ್ರಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 3 ದಿನಗಳ ಹಿಂದೆ ಆತನನ್ನು ದೆಹಲಿಯಲ್ಲಿ ಬಂಧಿಸಿ, ತಿರುಪತಿಗೆ ಕರೆತರಲಾಗಿದೆ. ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿ ನೆಲ್ಲೂರು ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸದ್ಯ ಆತನನ್ನು ನವೆಂಬರ್‌ 21ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ವಿವಾದ?

2024ರ ಸೆಪ್ಟೆಂಬರ್‌ನಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದವನ್ನು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಿದ ತುಪ್ಪದಿಂದ ತಯಾರಿಸಲಾಗಿತ್ತು ಎಂದು ಆರೋಪಿಸಿದ್ದರು. ಇದಾದ ಬಳಿಕ ವಿವಾದ ಭುಗಿಲೆದ್ದಿತು. ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಸ್‌ಐಟಿಯನ್ನು ರಚಿಸಲಾಯಿತು. ಟಿಟಿಡಿ ಬಳಸುವ ತುಪ್ಪದ ಖರೀದಿ ದಾಖಲೆಗಳು, ಪೂರೈಕೆ ಜಾಲ ಮತ್ತು ಗುಣಮಟ್ಟ-ಪರೀಕ್ಷಾ ವಿಧಾನಗಳನ್ನು ಪರಿಶೀಲಿಸಲು ಪ್ರಾರಂಭಿಸಲಾಯಿತು.