ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತ್ವಿಶಾ ಶರ್ಮಾ ಸಾವು ಪ್ರಕರಣ: ಅತ್ತೆಯ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಮಧ್ಯ ಪ್ರದೇಶ ಹೈಕೋರ್ಟ್

Twisha Sharma death case: ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತೆ, ಮಾಜಿ ನ್ಯಾಯಾಧೀಶೆಯಾಗಿರುವ ಗಿರಿಬಾಲಾ ಸಿಂಗ್ ಅವರ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದೆ. ಪ್ರಕರಣದ ವಾಸ್ತವಾಂಶಗಳು ಹಾಗೂ ಅವರ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಕೋರ್ಟ್ ಈ ಆದೇಶ ಜಾರಿ ಮಾಡಿದೆ.

ತ್ವಿಶಾ ಶರ್ಮಾ ಅತ್ತೆಯ ನಿರೀಕ್ಷಣಾ ಜಾಮೀನು ರದ್ದು

ತ್ವಿಶಾ ಶರ್ಮಾ ಅತ್ತೆಯ ನಿರೀಕ್ಷಣಾ ಜಾಮೀನು ರದ್ದು -

Priyanka P
Priyanka P May 28, 2026 2:20 PM

ಇಂದೋರ್, ಮೇ 28: ನಟಿ, ಮಾಡೆಲ್ ತ್ವಿಶಾ ಶರ್ಮಾ ಸಾವಿನ ಪ್ರಕರಣಕ್ಕೆ (Twisha Sharma death case) ಸಂಬಂಧಿಸಿದಂತೆ ಅತ್ತೆ, ಮಾಜಿ ನ್ಯಾಯಾಧೀಶೆಯಾಗಿರುವ ಗಿರಿಬಾಲಾ ಸಿಂಗ್ (Giribala Singh) ಅವರ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ರದ್ದುಗೊಳಿಸಿದೆ. ಪ್ರಕರಣದ ವಾಸ್ತವಾಂಶಗಳು ಹಾಗೂ ಅವರ ವಿರುದ್ಧದ ಆರೋಪಗಳನ್ನು ಪರಿಗಣಿಸಿ ಕೋರ್ಟ್ ಈ ಆದೇಶ ಜಾರಿ ಮಾಡಿದೆ. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸುತ್ತಿರುವ ಗಿರಿಬಾಲಾ ಸಿಂಗ್ ಮತ್ತು ಅವರ ಮಗ ಸಮರ್ಥ್ ಸಿಂಗ್ ಅವರಿಗೆ ಸೆಷನ್ಸ್ ನ್ಯಾಯಾಲಯವು ಮೇ 15 ರಂದು ನಿರೀಕ್ಷಣಾ ಜಾಮೀನು ನೀಡಿತ್ತು.

ವಕೀಲರಾದ ಸಮರ್ಥ್ ಸಿಂಗ್ ಪ್ರಸ್ತುತ ಕೇಂದ್ರೀಯ ತನಿಖಾ ದಳದ ವಶದಲ್ಲಿದ್ದು, ಪ್ರಕರಣದ ತನಿಖೆಯನ್ನು ಮಧ್ಯಪ್ರದೇಶ ಪೊಲೀಸರಿಂದ ವಹಿಸಿಕೊಂಡಿದೆ. ಗಿರಿಬಾಲಾ ಸಿಂಗ್ ಅವರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಪ್ರಕರಣದ ವಾಸ್ತವಾಂಶಗಳು ಮತ್ತು ಪ್ರತಿವಾದಿ (ಗಿರಿಬಾಲಾ ಸಿಂಗ್) ವಿರುದ್ಧ ಮಾಡಲಾದ ಆರೋಪಗಳ ಹಿನ್ನೆಲೆಯಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ತಮ್ಮ 17 ಪುಟಗಳ ಆದೇಶದಲ್ಲಿ ರಜಾಕಾಲದ ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ ತಿಳಿಸಿದ್ದಾರೆ.

ನಿರೀಕ್ಷಣಾ ಜಾಮೀನು ಪಡೆದ ವಿಧಾನವು ಸಂಶಯ ಹುಟ್ಟಿಸುವಂತಿದ್ದು, ಜಾಮೀನು ನೀಡಲು ಸಂಬಂಧಿಸಿದ ಪ್ರಮುಖ ಅಂಶಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂಬ ಅನುಮಾನ ಮೂಡುತ್ತದೆ ಎಂದು ಸಿಬಿಐ/ಪ್ರಾಸಿಕ್ಯೂಷನ್ ಏಜೆನ್ಸಿಯ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು.

ತ್ವಿಶಾ ಶರ್ಮಾ ಸಾವಿನ ತನಿಖೆ ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್‌ ಆದೇಶ

ಮೇ 12 ರಂದು ತನ್ನ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ತ್ವಿಶಾ ಶರ್ಮಾ ಅವರ ಸಾವಿನ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಆರೋಪಿಗಳೆಂದು ಪರಿಗಣಿಸಿ ರಾಜ್ಯ ಪೊಲೀಸರ ಎಫ್‌ಐಆರ್ ಅನ್ನು ಸಿಬಿಐ ಮರು ದಾಖಲಿಸಿದೆ.

ಗಿರಿಬಾಲ ಸಿಂಗ್ ಅವರ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರ, ಅಂತಿಮವಾಗಿ, ತ್ವಿಶಾ ಪ್ರಕರಣದಲ್ಲಿ ನ್ಯಾಯ ಸಿಕ್ಕಿದೆ ಎಂದು ಮೃತಳ ಕುಟುಂಬದ ಪರ ವಕೀಲ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ. ಗಿರಿಬಾಲಾ 36 ವರ್ಷಗಳ ಕಾಲ ನ್ಯಾಯಾಂಗ ಸೇವೆಯಲ್ಲಿದ್ದರು. ಅವರಿಗೆ ಕಾನೂನಿನ ಬಗ್ಗೆ ಗೌರವವಿದ್ದರೆ, ಅವರು ಸಿಬಿಐ ಮುಂದೆ ವಿನಮ್ರವಾಗಿ ಶರಣಾಗಬೇಕು. ಹಾಗೆಯೇ ಮುಂದಿನ ತನಿಖೆಯಲ್ಲಿ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಮೇ 15 ರಂದು ನಿರೀಕ್ಷಣಾ ಜಾಮೀನು ಪಡೆದ ನಂತರ, ಗಿರಿಬಾಲಾ ಸಿಂಗ್ ಮೇ 18 ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ತನ್ನ ಸೊಸೆ, ಮೃತ ತ್ವಿಶಾಳ ತೇಜೋವಧೆ ಮಾಡಲು ಪ್ರಯತ್ನಿಸಿದರು ಎಂದು ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದರು. ತ್ವಿಶಾ ಗರ್ಭಿಣಿ ಎಂದು ತಿಳಿದುಬಂದಾಗ ಪತಿ ಮತ್ತು ಅತ್ತೆ, ಆಕೆಯ ಸ್ವಭಾವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಸಾವಿಗೂ ಮುನ್ನ ತ್ವಿಶಾ ಶರ್ಮಾ ಶ್ವಾನದ ಜತೆ ಸಮಯ ಕಳೆದ ವಿಡಿಯೊ ವೈರಲ್; ತನಿಖೆಯ ದಿಕ್ಕನ್ನೇ ಬದಲಿಸುತ್ತ ಈ ದೃಶ್ಯ?

ಮೇ 5 ರಂದು, ತ್ವಿಶಾ ತನ್ನ ತಾಯಿಗೆ ತನ್ನನ್ನು ಪತಿ ಮನೆಯಿಂದ ಕರೆದುಕೊಂಡು ಹೋಗುವಂತೆ ಕೇಳಿಕೊಂಡಳು. ಮೇ 12 ರಂದು, ತ್ವಿಶಾ ತನ್ನ ತಾಯಿಗೆ ವಾಟ್ಸಾಪ್‌ನಲ್ಲಿ ಕರೆ ಮಾಡಿ ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಳು. ನಂತರ ಕರೆ ಸಂಪರ್ಕ ಕಡಿತಗೊಂಡಿತು. ಅದೇ ದಿನ ರಾತ್ರಿ 10.37 ಕ್ಕೆ ಮತ್ತೆ ಕರೆ ಮಾಡಿದಾಗ ಅತ್ತೆ ಗಿರಿಬಾಲಾ ಸಿಂಗ್ ಕರೆಗೆ ಉತ್ತರಿಸಿದ್ದರು ಎಂದು ವಕೀಲರು ಹೇಳಿದರು.

ಅದೇ ದಿನ, ತ್ವಿಶಾ ಅವರ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಮೇ 13 ರಂದು ಭೋಪಾಲ್‌ನ ಏಮ್ಸ್‌ನಲ್ಲಿ ಮೊದಲ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.