ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದ್ಯಾರ್ಥಿಗಳ ಕಳಕಳಿ ನೈಜವಾದದ್ದು, ಅನುಕಂಪದಿಂದ ನಿಭಾಯಿಸಬೇಕು: ಕೇಂದ್ರದ ವಿರುದ್ಧ ನಿಂತುಬಿಟ್ರಾ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ?

Murli Manohar Joshi: ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಮಾತನಾಡಿ, ವಿದ್ಯಾರ್ಥಿಗಳ ಆತಂಕಗಳು ನೈಜ ಮತ್ತು ನ್ಯಾಯಯುತವಾಗಿದ್ದು, ಅವುಗಳನ್ನು ಬಲಪ್ರಯೋಗದಿಂದಲ್ಲ, ಅನುಕಂಪ ಹಾಗೂ ಶಾಶ್ವತ ಪರಿಹಾರದ ಮೂಲಕ ನಿಭಾಯಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ಬೇಡ: ಎಂ.ಎಂ. ಜೋಶಿ

ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ -

Profile
Sushmitha Jain Jul 23, 2026 10:28 PM

ದೆಹಲಿ, ಜು. 23: ​ದೆಹಲಿಯಲ್ಲಿ ಯುವಜನರು ನಡೆಸುತ್ತಿರುವ ಪ್ರತಿಭಟನೆಯನ್ನು ಅನುಕಂಪದಿಂದ ನಿಭಾಯಿಸಬೇಕೆಂದು ಬಿಜೆಪಿ (BJP) ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ (Murali Manohar Joshi) ಮನವಿ ಮಾಡಿದ್ದಾರೆ. ವಿದ್ಯಾರ್ಥಿಗಳ ಕಾಳಜಿಗಳು ನೈಜವಾಗಿವೆ ಎಂದು ಹೇಳಿರುವ ಜೋಶಿ, ಅವರ ವಿರುದ್ಧ ಪೊಲೀಸರು ಬಲಪ್ರಯೋಗ ಮಾಡುವುದರಿಂದ 'ವಿಕಸಿತ ಭಾರತ'ದ ರಾಷ್ಟ್ರೀಯ ಗುರಿಯಿಂದ ಬಹುಸಂಖ್ಯಾತ ಜನಸಮುದಾಯವು ದೂರವಾಗುವ ಅಪಾಯವಿದೆ ಎಂದು ಎಕ್ಸ್ ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

​"ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಯುವ ವಿದ್ಯಾರ್ಥಿಗಳು ದೆಹಲಿಯ ಬೀದಿಗಳಲ್ಲಿ ದಿನಗಟ್ಟಲೆ ನೆರೆದಿರುವುದನ್ನು ನೋಡುವುದು ಅತ್ಯಂತ ನೋವಿನ ಸಂಗತಿ. ಪರೀಕ್ಷಾ ವ್ಯವಸ್ಥೆಯ ಕುರಿತು ಅವರಿಗಿರುವ ಆತಂಕ ಮತ್ತು ಕಾಳಜಿಗಳು ನ್ಯಾಯಯುತವಾಗಿದ್ದು, ಇವುಗಳನ್ನು ಅನುಕಂಪ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಇಚ್ಛೆಯಿಂದ ನಿಭಾಯಿಸಬೇಕಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ಮುರಳಿ ಮನೋಹರ್ ಜೋಶಿ ಅವರ ಎಕ್ಸ್‌ ಪೋಸ್ಟ್‌:



​"ಇದನ್ನು ಕೇವಲ ಬಲ ಪ್ರಯೋಗದ ಮೂಲಕ ಹತೋಟಿಗೆ ತರಬೇಕಾದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡಬಾರದು ಎಂದು ನಾನು ತೀವ್ರವಾಗಿ ಆಶಿಸುತ್ತೇನೆ. ಯುವತಿಯರ ಮೇಲೆಯೂ ಅತ್ಯಂತ ಹೀನಾಯವಾಗಿ ದೌರ್ಜನ್ಯ ನಡೆಸಿರುವುದು ಅತ್ಯಂತ ಬೇಸರದ ಸಂಗತಿ. ಇಂತಹ ಬಲಪ್ರಯೋಗವು ಭಾರತೀಯ ಸಮಾಜದ ದೊಡ್ಡ ವಿಭಾಗವನ್ನು 'ವಿಕಸಿತ ಭಾರತ'ದ ರಾಷ್ಟ್ರೀಯ ಗುರಿಯಿಂದ ದೂರ ತಳ್ಳುತ್ತದೆ" ಎಂದು ಅವರು ಹೇಳಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಜೂನ್ 6ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಪ್ರಾರಂಭವಾಯಿತು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲದೆ, ಸಿಬಿಎಸ್‌ಇಯ ಆನ್‌ಸ್ಕ್ರೀನ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಎತ್ತಿಹಿಡಿದ ಅವರು, ಸಾರ್ವಜನಿಕ ಪರೀಕ್ಷೆಗಳ ನಡಾವಳಿಯಲ್ಲಿ ಸಮಗ್ರ ಸುಧಾರಣೆಗಳನ್ನು ಕೋರಿದ್ದಾರೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ– CJP ಆಗ್ರಹ

​ಜೂನ್ 28ರಂದು ಲಡಾಖ್‌ನ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಮೂಲಕ ಈ ಪ್ರತಿಭಟನೆಯನ್ನು ಬೆಂಬಲಿಸಿದ ನಂತರ, ಈ ಚಳವಳಿಯು ದೇಶದಾದ್ಯಂತ ವ್ಯಾಪಕ ಗಮನ ಸೆಳೆಯಿತು.

​ಈ ನಡುವೆ, ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಸಂಸತ್ತಿನತ್ತ ಮೆರವಣಿಗೆ ನಡೆಸಲು ಯತ್ನಿಸಿದಾಗ ಪೊಲೀಸರು ಲಘು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿ ಜನಸಮೂಹವನ್ನು ಚದುರಿಸಿದ್ದರು. ಈ ಸಂದರ್ಭದಲ್ಲಿ ಹಲವು ವಿದ್ಯಾರ್ಥಿ ನಾಯಕರು ಹಾಗೂ ಪ್ರತಿಭಟನಾಕಾರರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಪೊಲೀಸರ ಈ ಕಠಿಣ ಕ್ರಮದ ವಿರುದ್ಧ ದೇಶಾದ್ಯಂತ ಸಾರ್ವಜನಿಕರು ಹಾಗೂ ವಿವಿಧ ಶೈಕ್ಷಣಿಕ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರವು ತಕ್ಷಣವೇ ಚಳವಳಿನಿರತರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸಬೇಕೆಂಬ ಒತ್ತಡ ಹೆಚ್ಚಾಗಿದೆ.