ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ: ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದ ಹೊರ್ಮುಜ್ ಜಲಸಂಧಿಯಲ್ಲಿ ಉಂಟಾದ ಅಡಚಣೆಗಳಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ. ಈ ಹಿನ್ನೆಲೆ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ವ್ಯತ್ಯಯವಾಗದಂತೆ ಅಮೆರಿಕ ಸಹಕರಿಸಲು ಸಿದ್ಧವಿದೆ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ತಿಳಿಸಿದ್ದಾರೆ. ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಅಮೆರಿಕ ಬದ್ಧವಾಗಿದ್ದು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದವೂ ಅಂತಿಮ ಹಂತದಲ್ಲಿದೆ ಎಂದು ಅವರು ಹೇಳಿದರು.

ಪಶ್ಚಿಮ ಏಷ್ಯಾ ಬಿಕ್ಕಟ್ಟು ನಡುವೆ ಭಾರತಕ್ಕೆ ಅಮೆರಿಕ ಇಂಧನ ಭರವಸೆ

ಅಮೆರಿಕ ಉಪ ವಿದೇಶಾಂಗ ಕಾರ್ಯದರ್ಶಿ ಲ್ಯಾಂಡೌ -

Profile
Sushmitha Jain Mar 6, 2026 1:24 PM

ನವದೆಹಲಿ, ಮಾ. 6: ಪಶ್ಚಿಮ ಏಷ್ಯಾದಲ್ಲಿ (West Asia) ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಚ್ಚಾ ತೈಲ (crude oil) ಪೂರೈಕೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳನ್ನು ಸರಿದೂಗಿಸಲು ಅಮೆರಿಕವು ಭಾರತದೊಂದಿಗೆ ಕೆಲಸ ಮಾಡಲಿದೆ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ (US Deputy Secretary of State Christopher Landau) ಗುರುವಾರ ತಿಳಿಸಿದ್ದಾರೆ. ಭಾರತದ ಅಲ್ಪಾವಧಿ ಮತ್ತು ದೀರ್ಘಾವಧಿಯ ಇಂಧನ ಅಗತ್ಯಗಳನ್ನು ಪೂರೈಸಲು ಅಮೆರಿಕ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.

ವಿಶ್ವದ ಒಟ್ಟು ತೈಲ ಮತ್ತು ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಪೂರೈಕೆಯ ಶೇಕಡಾ 20ರಷ್ಟು ಭಾಗ ಹಾದುಹೋಗುವ 'ಹೋರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಸ್ಥಗಿತಗೊಳಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 88ರಷ್ಟು ಮತ್ತು ನೈಸರ್ಗಿಕ ಅನಿಲದ ಅರ್ಧದಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಪಾಲು ಇದೇ ಮಾರ್ಗದ ಮೂಲಕ ಬರುತ್ತದೆ.

ರೈಸಿನಾ ಡೈಲಾಗ್‌ನಲ್ಲಿ ಮಾತನಾಡಿದ ಲ್ಯಾಂಡೌ, "ಭಾರತವು ಇಂಧನಕ್ಕಾಗಿ ಪರ್ಯಾಯ ಮೂಲಗಳ ಬಗ್ಗೆ ಯೋಚಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಅಮೆರಿಕಕ್ಕಿಂತ ಉತ್ತಮವಾದ ಪರ್ಯಾಯ ಮೂಲ ಮತ್ತೊಂದಿಲ್ಲ. ನಾವು ಭಾರತದೊಂದಿಗೆ ಸಹಕರಿಸಲು ಬಯಸುತ್ತೇವೆ" ಎಂದು ಹೇಳಿದರು. ಅಮೆರಿಕವು ಇಂಧನ ಸಮೃದ್ಧ ದೇಶವಾಗಿದ್ದು, ಭಾರತದ ಇಂಧನ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.

ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಕಳೆದ ತಿಂಗಳು ನವದೆಹಲಿಯೊಂದಿಗೆ ವ್ಯಾಪಾರ ಒಪ್ಪಂದವನ್ನು ಪ್ರಕಟಿಸುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸದಿರಲು ಒಪ್ಪಿಕೊಂಡಿದೆ ಎಂದು ಪ್ರತಿಪಾದಿಸಿದ್ದರು. ಆದರೆ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಮೂಲಗಳಿಂದ ತೈಲವನ್ನು ಖರೀದಿಸಿ ಪೂರೈಕೆ ಸರಪಳಿಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದಾಗಿ ಹೇಳುತ್ತ ಬಂದಿದೆ.

ಇದೇ ವೇಳೆ ಭಾರತ ಮತ್ತು ಅಮೆರಿಕ ನಡುವಿನ ಉದ್ದೇಶಿತ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ ಲ್ಯಾಂಡೌ, "ಒಪ್ಪಂದವು ಈಗ ಬಹುತೇಕ ಅಂತಿಮ ಹಂತದಲ್ಲಿದೆ. ಇದು ಉಭಯ ದೇಶಗಳ ನಡುವಿನ ಅಪಾರ ಸಾಮರ್ಥ್ಯವನ್ನು ಅನಾವರಣಗೊಳಿಸಲು ಅಡಿಪಾಯವಾಗಲಿದೆ" ಎಂದರು. ಅಲ್ಲದೆ, ಈ ಶತಮಾನವು 'ಭಾರತದ ಉದಯ'ವನ್ನು ಕಾಣಲಿದೆ ಎಂದು ಭವಿಷ್ಯ ನುಡಿದ ಅವರು, ಭಾರತದ ಹಿತಾಸಕ್ತಿಗಳೊಂದಿಗೆ ಪಾಲುದಾರರಾಗುವುದು ಅಮೆರಿಕದ ಹಿತಾಸಕ್ತಿಯೂ ಹೌದು ಎಂದು ತಿಳಿಸಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ರೈಸಿನಾ ಡೈಲಾಗ್‌ನ ಹೊರತಾಗಿ ಲ್ಯಾಂಡೌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.