ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uttarkashi Cloudburst: ದೇವ ಭೂಮಿ ಉತ್ತರಾಖಂಡವನ್ನು ನರಕಸದೃಶವಾಗಿಸಿದ ಮೇಘಸ್ಫೋಟ; ಏನಿದು ವಿದ್ಯಮಾನ? ಯಾಕಾಗಿ ಉಂಟಾಗುತ್ತದೆ? ಇಲ್ಲಿದೆ ವಿವರ

ಉತ್ತರಾಖಂಡದ ಉತ್ತರಾಕಾಶಿ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅವಳಿ ಮೇಘಸ್ಫೋಟದಿಂದ ಧರಾಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿದೆ. ದಿಢೀರ್‌ ಪ್ರವಾಹದಿಂದ ಕಂಡುಬಂದ ಹಿನ್ನೆಲೆಯಲ್ಲಿ ಮನೆ, ಹೊಟೇಲ್‌, ಕಟ್ಟಡ ಕೆಸರಿನಲ್ಲಿ ಮುಚ್ಚಿ ಹೋಗಿದೆ. ದುರಂತದಲ್ಲಿ ಸುಮಾರು ಐವರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಹೀಗೆ ದಿಡೀರ್‌ ಪ್ರವಾಹ ಉಂಟಾಗಲು ಕಾರಣವಾದ ಮೇಘಸ್ಫೋಟ ಎಂದರೇನು? ಇದು ಹೇಗೆ ಸಂಭವಿಸುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ದೇವ ಭೂಮಿ ಉತ್ತರಾಖಂಡವನ್ನು ನರಕಸದೃಶವಾಗಿಸಿದ ಮೇಘಸ್ಫೋಟ

Ramesh B Ramesh B Aug 8, 2025 8:53 PM

ಡೆಹ್ರಾಡೂನ್‌: ಉತ್ತರಾಖಂಡದ ಉತ್ತರಕಾಶಿಯಲ್ಲಿ ಅವಳಿ ಮೇಘಸ್ಫೋಟ ಸಂಭವಿಸಿ ದಿಢೀರ್‌ ಪ್ರವಾಹ ಕಂಡು ಬಂದಿದ್ದು, ಧರಾಲಿ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ (Uttarkashi Cloudburst). ಗುರುವಾರ ಕೊಚ್ಚಿಕೊಂಡು ಬಂದ ಕೆಸರು ಮತ್ತು ಭೂಕುಸಿತದ ಅವಶೇಷಗಳಡಿಯಿಂದ ಮತ್ತೆ ಎರಡು ಮೃತದೇಹ ಹೊರತೆಗೆಯಲಾಗಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದ ಮೇಘಸ್ಫೋಟ ಎಂದರೇನು? ಇದು ಹೇಗೆ ಸಂಭವಿಸುತ್ತದೆ? ಮೇಘಸ್ಫೋಟ ಯಾಕೆ ಅಪಾಯಕಾರಿ? ಇದನ್ನು ನಿಯಂತ್ರಿಸಲು ಸಾಧ್ಯವೆ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ವ್ಯಾಪಕ ಮಳೆ

ಮೇಘಸ್ಫೋಟ ಎಂದರೆ ಇದು ಮಳೆಯೇ. ಆದರೆ ಇದು ಸಾಮಾನ್ಯವಾಗಿ ಮಳೆಗಿಂತ ಭಿನ್ನವಾಗಿರುತ್ತದೆ ಮತ್ತು ಶಕ್ತಿಶಾಲಿಯಾಗಿರುತ್ತದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, 20ರಿಂದ 30 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಗಂಟೆಯ ಅವಧಿಯಲ್ಲಿ 100 ಮಿ.ಲೀ. ಅಥವಾ ಅದಕ್ಕಿಂತ ಅಧಿಕ ಮಳೆ ಸುರಿದರೆ ಅದನ್ನು ಮೇಘಸ್ಫೋಟ ಎಂದು ಕರೆಯಲಾಗುತ್ತದೆ. ಅಂದರೆ ಒಂದು ಚಿಕ್ಕ ಪ್ರದೇಶದಲ್ಲಿ ಸ್ವಲ್ಪ ಹೊತ್ತಿನಲ್ಲಿ ಅಧಿಕ ಮಳೆ ಸುರಿಯುವ ವಿದ್ಯಾಮಾನ ಇದಾಗಿದೆ. ಹೀಗಾಗಿ ಒಮ್ಮಿಂದೊಮ್ಮೆಲೇ ಪ್ರವಾಹ ಕಂಡು ಬಂದು ಚೇತರಿಸಿಕೊಳ್ಲಲೂ ಅವಕಾಶ ಸಿಗದೆ ಅದಿಕ ಪ್ರಮಾಣದಲ್ಲಿ ನಾಶ-ನಷ್ಟ ಉಂಟಾಗುತ್ತದೆ. ಮೇಘಸ್ಫೋಟ ಹೇಗೆ ಸಂಭವಿಸುತ್ತದೆ ಎನ್ನುವುದನ್ನು ನೋಡುವ ಮುನ್ನ ಸಾಮಾನ್ಯವಾಗಿ ಮಳೆ ಹೇಗೆ ಸುರಿಯುತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ.



ಈ ಸುದ್ದಿಯನ್ನೂ ಓದಿ: Uttarakhand Flash Flood: ಉತ್ತರಾಖಂಡದಲ್ಲಿ ಮೇಘಸ್ಫೋಟಕ್ಕೆ ಜನ ಜೀವನ ತತ್ತರ; ದೇವ ಭೂಮಿಯಲ್ಲಿ ದಿಢೀರ್‌ ಪ್ರವಾಹ ಉಂಟಾಗಿದ್ದು ಹೇಗೆ?

ಮಳೆಯಲ್ಲಿ ಎರಡು ವಿಧ

ಭೂಮಿಯಲ್ಲಿನ ನೀರು ಉಷ್ಣತೆಯಿಂದ ಆವಿಯಾಗಿ ಮೇಲೇರುತ್ತದೆ. ಮೇಲ್ಮೈಗೆ ಹೋಗುತ್ತಿದ್ದ ಹಾಗೆ ತಂಪು ಹೆಚ್ಚಾಗುತ್ತ ಹೋಗುತ್ತದೆ. ಹೀಗೆ ನೀರಾವಿ ಮೇಲೆ ಹೋಗುತ್ತ ಮೋಡವಾಗಿ ಬದಲಾಗುತ್ತದೆ. ಇದು ಬಳಿಕ ಮಳೆಯಾಗಿ ಸುರಿಯುತ್ತದೆ. ಇದು ಮೊದಲ ವಿಧ.

ಇನ್ನು ಎರಡನೇ ವಿಧದ ಮಳೆ ಬೆಟ್ಟಗಳ ಸಹಾಯದಿಂದ ಸುರಿಯುತ್ತದೆ. ನೀರಾವಿ ಚಲಿಸುತ್ತಿರುವಾಗ ಬೆಟ್ಟ ಅಡ್ಡ ಬಂದರೆ ಅದು ತನ್ನ ದಿಕ್ಕು ತಪ್ಪಿಸಿ ಮೇಲ್ಮುಖವಾಗಿ ಸಾಗುತ್ತದೆ. ಹೀಗೆ ಮೇಲೇರಿ ಬಳಿಕ ಭೂಮಿಗೆ ಮಳೆಯ ರೂಪದಲ್ಲಿ ಸುರಿಯುತ್ತದೆ. ಸಾಮಾನ್ಯವಾಗಿ ಇಂತಹ ಮಳೆ ಮೇಘಸ್ಫೋಟವಾಗಿ ಬದಲಾಗುತ್ತದೆ (ಅಪರೂಪಕ್ಕೆ ಸಮತಲ ಭೂ ಭಾಗದಲ್ಲಿ ಮೇಘಸ್ಫೋಟ ನಡೆದರೂ ಹೆಚ್ಚಿನ ಹಾನಿ ಸಂಭವಿಸುವುದಿಲ್ಲ).



ಮೇಘಸ್ಫೋಟ ಹೇಗೆ ಉಂಟಾಗುತ್ತದೆ?

ಏಕಕಾಲಕ್ಕೆ ನಿರಂತರವಾಗಿ ನೀರಾವಿ ಬೆಟ್ಟಕ್ಕೆ ಡಿಕ್ಕಿ ಹೊಡೆದು ಮೇಲೇರಿ ಮೋಡಗಳ ಸಮೂಹ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ ಕೆಳಗಿನಿಂದ ಬಿಸಿ ಗಾಳಿ ಮೇಲಕ್ಕೆ ಚಲಿಸಿ ಮೋಡಗಳಿಂದ ಉದುರುವ ನೀರ ಹನಿಗಳನ್ನು ಪುನಃ ಮೇಲಕ್ಕೇ ತಳ್ಳುತ್ತದೆ. ಹೀಗೆ ಮತ್ತೆ ಮೇಲಕ್ಕೆ ಮರಳುವ ನೀರ ಹನಿ ಉಳಿದವುಗಳ ಜತೆ ಸೇರಿ ದೊಡ್ಡದಾಗುತ್ತ ಹೋಗುತ್ತದೆ. ಕೆಲವು ಸಮಯಗಳ ಬಳಿಕ ಬಿಸಿ ಗಾಳಿ ಬೀಸುವುದು ನಿಂತಾಗ ಅದುವರೆಗೆ ಸಂಗ್ರಹವಾಗಿದ್ದ ನೀರ ಹನಿಗಳು ಒಮ್ಮೆಲೆ ಕೆಳಗೆ ಸುರಿಯುತ್ತವೆ. ಅಧಿಕ ಸಾಂದ್ರತೆಯುಳ್ಳ, ಭಾರವುಳ್ಳ ನೀರ ಹನಿಗಳು ಒಮ್ಮೆಲೆ ಸುರಿಯುವುದರಿಂದ ಆ ಪ್ರತ್ಯೇಕ ಪ್ರದೇಶದಲ್ಲಿ ಸ್ವಲ್ಪ ಹೊತ್ತಿನಲ್ಲೇ ಅಧಿಕ ಮಳೆ ಸುರಿದಂತಾಗುತ್ತದೆ.

ಇನ್ನೊಂದು ವಿಧ

ಮೇಘಸ್ಫೋಟ ಇನ್ನೊಂದು ವಿಧದಲ್ಲೂ ಸಂಭವಿಸುವ ಸಾಧ್ಯತೆ ಇದೆ. ನೀರಿನಾಂಶ ಹೊಂದಿರುವ ವಾಯು ಮತ್ತು ಕಡಿಮೆ ಉಷ್ಣತೆ ಹೊಂದಿರುವ ವಾಯು ಪರಸ್ಪರ ಡಿಕ್ಕಿ ಹೊಡೆದು ಮೋಡ ರೂಪುಗೊಂಡು ಮೇಘಸ್ಫೋಟ ಸಂಭವಿಸುತ್ತದೆ. ಇದು ಅಪರೂಪಕ್ಕೆ ನಡೆಯುವ ವಿದ್ಯಾಮಾನ ಎನ್ನುತ್ತಾರೆ ತಜ್ಞರು.

ಯಾಕಾಗಿ ಅಪಾಯಕಾರಿ?

ಮೇಘಸ್ಫೋಟದಿಂದ ಇದ್ದಕ್ಕಿದ್ದ ಹಾಗೆ ಒಮ್ಮೆಲೇ ಲಕ್ಷಗಟ್ಟಲೆ ನೀರು ಹರಿದು ಪ್ರವಾಹ ಉಂಟಾಗುತ್ತದೆ. ಅನಿರೀಕ್ಷಿತವಾಗಿ ಇದು ಉಂಟಾಗುವುದರಿಂದ ರಕ್ಷಣಾ ಕಾರ್ಯ ನಡೆಸಲೂ ಸಾಧ್ಯವಾಗದೆ ಅಪಾಯ ಸಂಭವಿಸುತ್ತದೆ. ಅದರಲ್ಲೂ ಸೂಕ್ಷ್ಮ ಭೂ ಪ್ರದೇಶಗಳಲ್ಲಿ ಗುಡ್ಡ ಕುಸಿತದಂತಹ ಅವಘಡ ಸಂಭವಿಸುತ್ತದೆ.

ನಿಯಂತ್ರಣ ಸಾಧ್ಯವೆ?

ಮೇಘಸ್ಫೋಟ ಎನ್ನುವುದು ನಿಸರ್ಗದ ಸಾಮಾನ್ಯ ಪ್ರಕ್ರಿಯೆಯಾದರೂ ಇತ್ತೀಚೆಗೆ ಹೆಚ್ಚಾಗಲು ನಮ್ಮ ಅತಿಯಾದ ಚಟುವಟಿಕೆಗಳೇ ಕಾರಣ ಎನ್ನುತ್ತದೆ ಹವಾಮಾನ ಇಲಾಖೆ. ಪ್ರಕೃತಿಯಲ್ಲಿನ ಬದಲಾವಣೆ ಮೇಘಸ್ಫೋಟ ಹೆಚ್ಚಾಗುವಂತೆ ಮಾಡಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ನೀರಾವಿ ಪ್ರಮಾಣ ವೃದ್ಧಿಸಿದೆ. ಇದು ಅಧಿಕ ಪ್ರಮಾಣದ ಮೇಘಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.