ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇರಳಂ ಮುಖ್ಯಮಂತ್ರಿ ಪಟ್ಟ ಯಾರಿಗೆ? ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್, ಸತೀಶನ್‌; ಮುಂದಿನ ವಾರ ಪ್ರಮಾಣ ವಚನ?

ಕೇರಳಂನ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ರೇಸ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ತಮ್ಮ ವರದಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ ನಂತರ ಈ ವಿಚಾರ ತಿಳಿದುಬಂದಿದೆ.

ಕೇರಳಂ ಮುಖ್ಯಮಂತ್ರಿ ಪಟ್ಟ ಯಾರಿಗೆ?

ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ (ಸಂಗ್ರಹ ಚಿತ್ರ) -

Priyanka P
Priyanka P May 8, 2026 6:44 PM

ತಿರುವನಂತಪುರಂ, ಮೇ 8: ಪಶ್ವಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಮುಹೂರ್ತ ನಿಗದಿಯಾಗಿದ್ದು, ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿದೆ. ಇದೀಗ ಕೇರಳಂನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸದ್ಯ ಈ ರೇಸ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ (KC Venugopal) ಬಹಳ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ತಮ್ಮ ವರದಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಿಗೆ ಸಲ್ಲಿಸಿದ ನಂತರ ಈ ವಿಚಾರ ತಿಳಿದುಬಂದಿದೆ. ಮುಖ್ಯಮಂತ್ರಿ ಆಯ್ಕೆಯ ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ನೂತನ ಶಾಸಕರು, ಮೈತ್ರಿ ಪಕ್ಷಗಳು ಮತ್ತು ಸಾರ್ವಜನಿಕರ ಅಭಿಪ್ರಾಯಗಳನ್ನು ಆಧರಿಸಿ ಪಕ್ಷವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮಾಕೆನ್ ಮತ್ತು ವಾಸ್ನಿಕ್ ತಿಳಿಸಿದ್ದಾರೆ.

ಪಕ್ಷವು ಆದಷ್ಟು ಬೇಗ ಹೆಸರನ್ನು ಅಂತಿಮಗೊಳಿಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ. ವೇಣುಗೋಪಾಲ್ ಅಂತಿಮ ಪಟ್ಟಿಯ ಮುಂಚೂಣಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಪ್ರಸ್ತುತ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮತ್ತು ಪಕ್ಷದ ಸಂಘಟನಾ ಮಟ್ಟದಲ್ಲಿ ಬಲವಾದ ಹಿಡಿತ ಹೊಂದಿರುವ ಹಿರಿಯ ಅನುಭವಿ ರಮೇಶ್ ಚೆನ್ನಿತ್ತಲ ಸೇರಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ನ (UDF) ಗೆಲುವಿನ ನಿಜವಾದ ಶಿಲ್ಪಿ ವೇಣುಗೋಪಾಲ್ ಎಂದು ಪಕ್ಷದ ಕಾರ್ಯಕರ್ತರು ಬಹಿರಂಗವಾಗಿ ಬಿಂಬಿಸಿದ್ದಾರೆ. ಅವರನ್ನು ನಾಯಕ ಎಂದು ಚಿತ್ರಿಸಿ, ಅವರ ಪೋಸ್ಟರ್‌ಗಳನ್ನು ಕಾಂಗ್ರೆಸ್ ಕಚೇರಿ ಮತ್ತು ಅದರ ಯುವ ಘಟಕ ಕಚೇರಿ ಹೊರಗೆ ಪ್ರದರ್ಶಿಸಲಾಗಿದೆ.

ಕೇರಳಂನಲ್ಲಿ ಇತಿಹಾಸ ಬರೆದ ಬಿಜೆಪಿ; ಇದೇ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಜಯಭೇರಿ

ಸೋಮವಾರ (ಮೇ 11) ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ರಾಹುಲ್ ಗಾಂಧಿ ಭಾಗವಹಿಸುವ ಸಾಧ್ಯತೆ ಇದೆ. ಕಳೆದ ತಿಂಗಳು ಡಿಎಂಕೆ ವಿರುದ್ಧ ಭರ್ಜರಿ ಜಯಗಳಿಸಿದ ನಂತರ ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಹೋರಾಟದಲ್ಲಿ ತೊಡಗಿರುವ ಸೂಪರ್‌ಸ್ಟಾರ್ ನಟ ವಿಜಯ್ ಕೂಡ ಭಾಗವಹಿಸುವ ಸಾಧ್ಯತೆ ಇದೆ.

ಟಿವಿಕೆ ಜತೆ ಚುನಾವಣೋತ್ತರ ಮೈತ್ರಿ

ತಮಿಳುನಾಡು ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಿದ ನಂತರ ಕಾಂಗ್ರೆಸ್, ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದೆ. ಹಾಗೆ ಮಾಡುವುದರ ಮೂಲಕ, ಅದು ತನ್ನ ದೀರ್ಘಕಾಲದ ಮಿತ್ರ ಪಕ್ಷ ಡಿಎಂಕೆಯನ್ನು ಕೈಬಿಟ್ಟಿದೆ. ಕಳೆದ ತಿಂಗಳ ಚುನಾವಣೆಯಲ್ಲಿ ಅದು ತಮಿಳುನಾಡಿನಲ್ಲಿ ಐದು ಸ್ಥಾನಗಳನ್ನು ಗೆದ್ದಿತ್ತು.

ಆದರೆ ಕೇರಳಂನಲ್ಲಿ ಕಾಂಗ್ರೆಸ್‌ಗೆ ಅಂತಹ ಯಾವುದೇ ಸಮಸ್ಯೆ ಇಲ್ಲ. 140 ಸ್ಥಾನಗಳನ್ನು ಹೊಂದಿರುವ ವಿಧಾನಸಭೆಯಲ್ಲಿ ಯುಡಿಎಫ್ ಸ್ವಂತವಾಗಿ 63 ಸ್ಥಾನಗಳನ್ನು ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 22 ಮತ್ತು ಕೇರಳ ಕಾಂಗ್ರೆಸ್ 7 ಸ್ಥಾನಗಳು, ಪಕ್ಷೇತರರು ಮತ್ತು ಮಿತ್ರಪಕ್ಷಗಳು ಸೇರಿ 10 ಸ್ಥಾನ ಗಳಿಸಿವೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ 102 ಸ್ಥಾನಗಳನ್ನು ಪಡೆದುಕೊಂಡಿದೆ. ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಕೇವಲ 35 ಸ್ಥಾನಗಳನ್ನು ಗಳಿಸಿತು.