ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವೊಡಾಫೋನ್ ಜಾಹೀರಾತಿನ ಪಗ್‌ ನಾಯಿಯಂತೆ ಪತ್ನಿ ಎಲ್ಲ ಕಡೆ ಪತಿಯನ್ನು ಹಿಂಬಾಲಿಸಲು ಸಾಧ್ಯವಿಲ್ಲ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

Madras High Court: ಯಾವಾಗಲೂ ಪತ್ನಿಯನ್ನು ಜತೆಯಲ್ಲೇ ಕರೆದೊಯ್ಯಲು ಪತಿಗೆ ಸಾಧ್ಯವಾಗಬೇಕೆಂದಿಲ್ಲ. ಉದಾಹರಣೆಗೆ ಪತಿಯು ಒಬ್ಬ ಸೈನಿಕನಾಗಿದ್ದರೆ ಮಿಲಿಟರಿ ಬ್ಯಾರಕ್‌ಗಳಲ್ಲಿ ಮನೆ ಮಾಡಲು ಸಾಧ್ಯವಿಲ್ಲ. ಪತ್ನಿಯು ಸ್ವತಃ ಉತ್ತಮ ಉದ್ಯೋಗದಲ್ಲಿ ತೊಡಗಿರಬಹುದು. ಪಗ್ ನಾಯಿಯಂತೆ ಆಕೆ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮದ್ರಾಸ್‌ ಹೈಕೋರ್ಟ್ ಹೇಳಿದೆ.

ಪತ್ನಿ ಶ್ವಾನದಂತೆ ಪತಿಯನ್ನು ಹಿಂಬಾಲಿಸಲು ಸಾಧ್ಯವಿಲ್ಲ: ಹೈಕೋರ್ಟ್

ಸಾಂದರ್ಭಿಕ ಚಿತ್ರ -

Priyanka P
Priyanka P Sep 3, 2026 8:03 PM

ಚೆನ್ನೈ, ಸೆ. 3: ವೈವಾಹಿಕ ವಿವಾದದ ಪ್ರಕರಣವೊಂದರ (Marriage dispute) ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ (Madras High Court), ವೊಡಾಫೋನ್ ಜಾಹೀರಾತಿನಲ್ಲಿ ಬರುವ ಪಗ್ ತಳಿಯ ಶ್ವಾನವನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ. ಪತಿ ಹೋದ ಕಡೆಯಲ್ಲೆಲ್ಲ ಪತ್ನಿ ಆತನನ್ನು ಹಿಂಬಾಲಿಸಿಕೊಂಡು ಹೋಗಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಅದೇ ರೀತಿ, ಒಬ್ಬ ಪುರುಷನು ತನ್ನ ಉದ್ಯೋಗದ ನಿಮಿತ್ತ ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾದಾಗಲೂ ಪತ್ನಿಯನ್ನು ತನ್ನೊಂದಿಗೇ ಕರೆದೊಯ್ಯಲು ಸಾಧ್ಯವಿಲ್ಲ ಎಂದೂ ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಎಂ.ಡಿ. ಸುಮತಿ ಅವರಿದ್ದ ವಿಭಾಗೀಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪತಿಯು ಪತ್ನಿಯನ್ನು ತನ್ನೊಂದಿಗೆ ಕರೆದೊಯ್ಯದೆ ಕೆಲಸದ ನಿಮಿತ್ತ ಮತ್ತೊಂದು ನಗರಕ್ಕೆ ಸ್ಥಳಾಂತರಗೊಳ್ಳುವ ಮೂಲಕ ವೈವಾಹಿಕ ಜವಾಬ್ದಾರಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯವನ್ನು ತಿರಸ್ಕರಿಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ಯಾವಾಗಲೂ ಪತ್ನಿಯನ್ನು ಜತೆಯಲ್ಲೇ ಕರೆದೊಯ್ಯುವುದು ಸಾಧ್ಯವಾಗದಿರಬಹುದು. ಉದಾಹರಣೆಗೆ ಪತಿಯು ಒಬ್ಬ ಸೈನಿಕನಾಗಿದ್ದರೆ, ಮಿಲಿಟರಿ ಬ್ಯಾರಕ್‌ಗಳಲ್ಲಿ ಮನೆ ಮಾಡಲು ಸಾಧ್ಯವಿಲ್ಲ. ಪತ್ನಿಯು ಸ್ವತಃ ಉತ್ತಮ ಉದ್ಯೋಗದಲ್ಲಿ ತೊಡಗಿರಬಹುದು. ಆ ವೊಡಾಫೋನ್ ಜಾಹೀರಾತಿನಲ್ಲಿ ಬರುವ ಪಗ್ ನಾಯಿಯಂತೆ ಆಕೆ ನಡೆದುಕೊಳ್ಳಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಪ್ರತಿ ತಿಂಗಳು 40 ಲಕ್ಷ ರೂ. ಜೀವನಾಂಶ ಕೇಳಿದ್ದ ಪತ್ನಿ ಆರತಿ; ನಟ 'ಜಯಂ' ರವಿಗೆ ಕೌಟುಂಬಿಕ ನ್ಯಾಯಾಲಯ ಹೇಳಿದ್ದೇನು?

ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಶಿವಗಂಗೈ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಾಗ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತಿ ಆರೋಪಿಸಿದ್ದರೆಂದು ವರದಿಯಾಗಿದೆ. ಪತಿಯು ತನ್ನ ಪತ್ನಿಯನ್ನು ಜತೆಗೆ ಕರೆದೊಯ್ಯದೆ ಮುಂಬೈನಲ್ಲಿ ಉದ್ಯೋಗಕ್ಕಾಗಿ ತೆರಳಿದ್ದರಿಂದ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 23(1)(a) ಅಡಿಯಲ್ಲಿ ಅವರು ತನ್ನದೇ ಆದ ತಪ್ಪಿನ ಲಾಭವನ್ನು ಪಡೆಯುತ್ತಿದ್ದಾರೆ ಎಂದು ಕೌಟುಂಬಿಕ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು. ಅವರು ತಮ್ಮ ಪತ್ನಿಯನ್ನು ಜತೆಗೆ ಕರೆದುಕೊಂಡು ಹೋಗದಿರುವುದು ತಪ್ಪು ಎಂದು ಫ್ಯಾಮಿಲಿ ಕೋರ್ಟ್ ಹೇಳಿತ್ತು.

ಯಾರೇ ಆದರೂ ಲೈಂಗಿಕ ಬಯಕೆಯನ್ನು ಹತ್ತಿಕ್ಕಿಕೊಳ್ಳುವುದು ಅಪ್ರಾಯೋಗಿಕ ಮತ್ತು ಪತಿ ಹೋದ ಕಡೆಯಲ್ಲೆಲ್ಲ ತನ್ನ ಪತ್ನಿಯನ್ನು ಕರೆದೊಯ್ಯುವುದು ಆತನ ಪರಮ ಕರ್ತವ್ಯ ಎಂದು ಕೌಟುಂಬಿಕ ನ್ಯಾಯಾಲಯವು ಹೇಳಿತ್ತು. ಈ ಕಾರಣದಿಂದಾಗಿ ಅದು ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು.

ಈ ದಂಪತಿ 1992ರಲ್ಲಿ ವಿವಾಹವಾಗಿದ್ದು, ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಪತಿಗೆ 67 ವರ್ಷ ವಯಸ್ಸಾಗಿದೆ. ದಂಪತಿ 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 23(1)(a) ಅಡಿಯಲ್ಲಿ ಉಲ್ಲೇಖಿಸಲಾದ ತಪ್ಪು ಎಂಬುದು ಗಂಭೀರವಾದ ದುರ್ನಡತೆ ಮತ್ತು ನ್ಯಾಯಕ್ಕೆ ವಿರುದ್ಧವಾದ ನಡವಳಿಕೆಯನ್ನು ಸೂಚಿಸುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದರೆ, ಪತಿಯು ಪತ್ನಿಯ ಮೇಲೆ ಮಾಡಿದ್ದ ಅಕ್ರಮ ಸಂಬಂಧದ ಆರೋಪವನ್ನು ನ್ಯಾಯಾಲಯವು ಒಪ್ಪಿಕೊಳ್ಳಲಿಲ್ಲ.