ಗಾಯಕ ಜುಬೀನ್ ಗಾರ್ಗ್ ಕೊಲೆ ಆರೋಪಿಗಳ ವಿರುದ್ಧ ಭುಗಿಲೆದ್ದ ಆಕ್ರೋಶ: ಚಪ್ಪಲಿ, ಕಲ್ಲು ತೂರಿದ ಅಭಿಮಾನಿಗಳು
Zubeen Garg: ಖ್ಯಾತ ಅಸ್ಸಾಮಿ ಗಾಯಕ ಜುಬೀಗ್ ಗಾರ್ಗ್ ಸಾವಿನ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಗಾರ್ಗ್ ಸಾವಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಐವರು ಆರೋಪಿಗಳನ್ನು ಅಸ್ಸಾಂನ ಬಕ್ಸಾ ಜಿಲ್ಲೆಯ ಜೈಲಿಗೆ ಕರೆತಂದಾಗ ಹಿಂಸಾಚಾರ ಭುಗಿಲೆದ್ದಿದೆ. ಆರೋಪಿಗಳನ್ನು ಕರೆತಂದ ವಾಹನದ ಮೇಲೆ ಅಭಿಮಾನಿಗಳು ಕಲ್ಲು, ಚಪ್ಪಲಿ ತೂರಿದರು.

-

ದಿಸ್‌ಪುರ, ಅ. 15: ಖ್ಯಾತ ಅಸ್ಸಾಮಿ ಗಾಯಕ ಜುಬೀಗ್ ಗಾರ್ಗ್ (Zubeen Garg) ಸಾವಿನ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಗಾರ್ಗ್ ಸಾವಿನ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಐವರು ಆರೋಪಿಗಳನ್ನು ಬುಧವಾರ (ಅ. 15) ಅಸ್ಸಾಂನ ಬಕ್ಸಾ ಜಿಲ್ಲೆಯ ಜೈಲಿಗೆ (Baksa District Jail) ಕರೆತಂದಾಗ ಹಿಂಸಾಚಾರ ಭುಗಿಲೆದ್ದಿದೆ. ಜಿಲ್ಲಾ ಕಾರಾಗೃಹದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಅಭಿಮಾನಿಗಳು ಆರೋಪಿಗಳನ್ನು ಕರೆತಂದ ವಾಹನದ ಮೇಲೆ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಅರೋಪಿಗಳಾದ ಕಾರ್ಯಕ್ರಮ ಆಯೋಜಕ ಶ್ಯಾಮಕಾನು ಮಹಾಂತ, ಜುಬೀನ್ ಗಾರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ, ಅಮಾನತುಗೊಂಡ ಎಪಿಎಸ್ ಅಧಿಕಾರಿ ಸಂದೀಪನ್ ಗಾರ್ಗ್ ಮತ್ತು ಇತರ ಇಬ್ಬರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಅಸ್ಸಾಂನ ಬಕ್ಸಾ ಜಿಲ್ಲೆಯ ಜೈಲಿನ ಹೊರಗೆ ನಡೆದ ಪ್ರತಿಭಟನೆಯ ದೃಶ್ಯ:
#WATCH | Violent protest erupted outside Baksa District Jail in Assam's Baksa district after five accused in Zubeen Garg death case - main event organizer Shyamkanu Mahanta, Zubeen Garg's Manager Siddharth Sharma, his cousin Sandipan Garg (suspended APS officer) and two PSOs… pic.twitter.com/Zc5TACcyFw
— ANI (@ANI) October 15, 2025
ಈ ಸುದ್ದಿಯನ್ನೂ ಓದಿ: Zubeen Garg: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಡಿಎಸ್‌ಪಿ ಸಂದೀಪನ್ ಗರ್ಗ್ ಬಂಧನ
ಕಳೆದ ತಿಂಗಳು ಸಿಂಗಾಪುರದಲ್ಲಿ ಜುಬೀಗ್ ಗಾರ್ಗ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶಂಕಿತ ಆರೋಪಿಗಳನ್ನು ಬಕ್ಸಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಿದ ಜೈಲಿಗೆ ಕರೆತರಲಾಗಿದೆ. ಈ ವೇಳೆ ಜುಬೀಗ್ ಗಾರ್ಗ್ ಅಭಿಮಾನಿಗಳು ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಘೋಷಣೆ ಕೂಗಿದರು.
ಜುಬೀನ್ ಗಾರ್ಗ್ ಅಭಿಮಾನಿಗಳು ಆರೋಪಿಗಳ ವಿರುದ್ಧ ಕಲ್ಲು ಮತ್ತು ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಗಳನ್ನು ಬಕ್ಸಾ ಜೈಲಿಗೆ ಕಳುಹಿಸುವ ನಿರ್ಧಾರದಿಂದ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೊಸದಾಗಿ ನಿರ್ಮಿಸಲಾದ ಈ ಜೈಲಿನಲ್ಲಿ ಕೈದಿಗಳಿಗೆ ಹೆಚ್ಚಿನ ಸೌಕರ್ಯಗಳಿವೆ. ರಾಜ್ಯ ಸರ್ಕಾರವು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.
ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಕಡಿಮೆ ಕೈದಿಗಳಿರುವ ಜೈಲಿಗೆ ಅವರನ್ನು ಕಳುಹಿಸಬೇಕೆಂದು ತೀರ್ಪು ನೀಡಿತ್ತು. ಅದರಂತೆ ಅಧಿಕಾರಿಗಳು ಐವರು ಆರೋಪಿಗಳನ್ನು 2 ತಿಂಗಳ ಹಿಂದೆ ಉದ್ಘಾಟನೆಗೊಂಡ ಮುಶಾಲ್‌ಪುರದ ಬಕ್ಸಾ ಜೈಲಿಗೆ ಸ್ಥಳಾಂತರಿಸಲು ನಿರ್ಧರಿಸಿದರು. ಮಹಾಂತ ಮತ್ತು ಶರ್ಮಾ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಇವರ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ.
ಸೆ. 19ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಜುಬಿನ್ ಗಾರ್ಗ್ ಈಜುತ್ತಿದ್ದಾಗ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆಗಿ ಸೇವೆ ಸಲ್ಲಿಸುತ್ತಿದ್ದ ಸಂದೀಪನ್ ದೋಣಿಯಲ್ಲಿದ್ದರು ಎಂದು ಹೇಳಲಾಗಿದೆ. ಈವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನವರನ್ನು ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಭಾರತ ಸಿಂಗಾಪುರ ರಾಜತಾಂತ್ರಿಕ ಸಂಬಂಧಗಳ 60ನೇ ವರ್ಷದ ಆಚರಣೆ ಮತ್ತು ಭಾರತ ಆಸಿಯಾನ್ ಪ್ರವಾಸೋದ್ಯಮ ವರ್ಷ, ಈಶಾನ್ಯ ಭಾರತ ಉತ್ಸವವನ್ನು ಆಚರಿಸಲು ಜುಬೀನ್ ಸಿಂಗಾಪುರಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ.
ಸದ್ಯ ಜುಬೀನ್ ಗರ್ಗ್ ಅವರ ಸಾವಿನ ಪ್ರಕರಣವನ್ನು ತನಿಖೆ ಮಾಡಲು ಅಸ್ಸಾಂ ಪೊಲೀಸರು ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಸಿಐಡಿ ವಿಶೇಷ ಡಿಜಿಪಿ ಮುನ್ನ ಪ್ರಸಾದ್ ಗುಪ್ತಾ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಿದೆ.