Dasara Shopping Trend 2025: ಮಾರುಕಟ್ಟೆಗೆ ಮರಳಿದ ದಸರಾ ಗೊಂಬೆಗಳು
Dasara Shopping Trend 2025: ಮುಂಬರುವ ದಸರಾ ಗೊಂಬೆ ಹಬ್ಬಕ್ಕೆಂದೇ ನಾನಾ ಬಗೆಯ ಟ್ರೆಡಿಷನಲ್ ಹಾಗೂ ಕಂಟೆಂಪರರಿ ಗೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಷ್ಟೇಕೆ! ಆನ್ಲೈನ್ನಲ್ಲೂ ಗೊಂಬೆಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು -


ಮುಂಬರುವ ದಸರಾ ಗೊಂಬೆ ಹಬ್ಬದ ಆಚರಣೆಯ ಸಂಭ್ರಮ ಹೆಚ್ಚಿಸಲು, ಈ ಜನರೇಷನ್ ಮಕ್ಕಳಿಗೂ ಇಷ್ಟವಾಗುವಂತಹ ನಾನಾ ಬಗೆಯ ಬೊಂಬೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ವೆರೈಟಿ ಗೊಂಬೆಗಳ ಪ್ರಪಂಚ
ಈ ಬಾರಿ ಟ್ರೆಡಿಷನಲ್ ಸ್ಟೋರಿ ಟೆಲ್ಲಿಂಗ್ ಸೆಟ್ ಗೊಂಬೆಗಳು ಮಾತ್ರವಲ್ಲ, ಸಿನಿಮಾ ಕ್ಯಾರೆಕ್ಟರ್ಗಳಾದ ಐರನ್ ಮ್ಯಾನ್, ಎಕ್ಸ್ಮನ್, ನರೋಟಾ, ಮ್ಯಾಟ್ರಿಕ್ಸ್, ಬ್ಯಾಟ್ಮನ್, ಮೊಗ್ಲಿ, ಟರ್ಮಿನೇಟರ್, ಪವರ್ ರೇಂಜರ್ಸ್, ಸ್ಪೈಡರ್ ಮ್ಯಾನ್, ಟ್ರಾನ್ಸ್ಫಾರ್ಮರ್ಸ್ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ಗೊಂಬೆಗಳು ದಸರಾ ಗೊಂಬೆಗಳೊಂದಿಗೆ ಎಂಟ್ರಿ ಪಡೆದಿವೆ.

ಅಭಿರುಚಿಗೆ ತಕ್ಕಂತೆ ಗೊಂಬೆಗಳು
ಮೊದಲೆಲ್ಲಾ ಟ್ರೆಡಿಷನಲ್ ಹಾಗೂ ಕೇವಲ ಮಣ್ಣಿನ ಗೊಂಬೆಗಳಿಗೆ ಮಾತ್ರ ಸೀಮಿತವಾಗಿದ್ದ ಗೊಂಬೆ ಹಬ್ಬದ ಆಚರಣೆ ಶೈಲಿ ಬದಲಾಗಿದೆ. ಪ್ರತಿವರ್ಷ ಹೊಸ ಶೈಲಿಯ ಗೊಂಬೆಗಳು ಒಂದರ ಹಿಂದೊಂದರಂತೆ ಎಂಟ್ರಿ ಪಡೆದಿವೆ. ಲೈಟ್ವೇಟ್ ಗೊಂಬೆಗಳು ಹಾಗೂ ಸಿನಿಮಾ ಕ್ಯಾರೆಕ್ಟರ್ ಗೊಂಬೆಗಳು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ ದಸರಾ ಗೊಂಬೆಗಳ ಮಾರಾಟಗಾರರಾದ ಲಕ್ಷಣ್. ಅವರ ಪ್ರಕಾರ, ಇಂದಿನ ಜನರೇಷನ್ ಹೈಕಳ ಅಭಿರುಚಿಗೆ ತಕ್ಕಂತೆ ಬಿಡುಗಡೆಗೊಂಡಿವೆ ಎನ್ನುತ್ತಾರೆ. ದಸರಾ ಬೊಂಬೆಗಳನ್ನು ನಾನಾ ಮೇಟಿರಿಯಲ್ನಲ್ಲಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಪಾಲಿಸ್ಟೋನ್, ಮಾರ್ಬಲ್ ಡಸ್ಟ್ ಅತಿ ಮುಖ್ಯವಾದುವು. ವುಡ್, ಸೆರಾಮಿಕ್, ಗಾಜು, ಪ್ಲಾಸ್ಟಿಕ್ನ ಬೊಂಬೆಗಳಿಗೂ ಬೇಡಿಕೆ ಕಡಿಮೆಯಾಗಿಲ್ಲ ಎನ್ನುತ್ತಾರೆ ಮಾರಾಟಗಾರರಾದ ಸತೀಶ್.

ಗ್ರೂಪ್ ಗೊಂಬೆಗಳಿಗೆ ಡಿಮ್ಯಾಂಡ್
ದಸರಾ ಸೆಟ್, ಸಮುದ್ರ ಮಂಥನದ ಸೆಟ್, ರಾಮಾಯಣ, ಮಹಾಭಾರತ ಚಿತ್ರಣದ ಸೆಟ್ ಸೇರಿದಂತೆ ನಾನಾ ಟ್ರೆಡಿಷನಲ್ ಕಥಾ ರೂಪಕದ ಗೊಂಬೆಗಳಿಗೆ ಡಿಮ್ಯಾಂಡ್ ಹಾಗೆಯೇ ಇದೆ. ಮಣ್ಣಿನ ಗೊಂಬೆಗಳನ್ನು ಜೋಪಾನ ಮಾಡುವುದು ಕಷ್ಟವಾಗಿರುವುರಿಂದ ಇತ್ತೀಚೆಗೆ ಬೇರೇ ಮೆಟೀರಿಯಲ್ನದ್ದು ಅದರಲ್ಲೂ ಸುಲಭವಾಗಿ ನಿರ್ವಹಣೆ ಮಾಡಬಹುದಾದ ಗೊಂಬೆಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು.

ಆನ್ಲೈನ್ನಲ್ಲೂ ಆರಂಭವಾಯ್ತು ಗೊಂಬೆ ಶಾಪಿಂಗ್
ವರ್ಷ ಕಳೆದಂತೆ ಆನ್ಲೈನ್ನಲ್ಲೂ ಗೊಂಬೆ ಖರೀದಿಸುವುದು ಹೆಚ್ಚಾಗಿದೆ. ಇಲ್ಲಿಯೂ ಕೂಡ ಹೊಸ ಬಗೆಯ ವೆರೈಟಿ ಗೊಂಬೆಗಳಿಂದಿಡಿದು ಎಲ್ಲಾ ಬಗೆಯವು ದೊರೆಯುತ್ತವೆ ಎನ್ನುತ್ತಾರೆ ಆನ್ಲೈನ್ ಶಾಪಿಂಗ್ ಪ್ರೇಮಿ ರಾಗಿಣಿ ಹಾಗೂ ರಾಧ.

ದಸರಾ ಗೊಂಬೆ ಶಾಪಿಂಗ್ ಮಾಡುವವರಿಗೆ ಟಿಪ್ಸ್
- ಗೊಂಬೆ ಯಾವ ಮೆಟೀರಿಯಲ್ನದ್ದು ಎಂದು ತಿಳಿದು ಕೊಳ್ಳಿ.
- ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
- ಇವನ್ನು ಜೋಡಿಸಲು ಅವಶ್ಯವಿರುವ ಟೇಬಲ್ಗಳು ಕೂಡ ದೊರೆಯುತ್ತವೆ.
- ಬೊಂಬೆ ಪ್ರದರ್ಶನಕ್ಕೆ ರೆಡಿಮೇಡ್ ಡೆಕೋರೇಷನ್ ಐಟಂಗಳು ಲಭ್ಯ.